ಹನ್ನೆರಡು ವರ್ಷ ಅಪ್ರಾಪ್ತ ಬಾಲಕಿ ತನ್ನ ಅಪ್ರಾಪ್ತ ಸಹೋದರನಿಂದಲೇ ಗರ್ಭಿಣಿಯಾಗಿದ್ದಾಳೆ

ರಾಷ್ಟ್ರೀಯ

ಗರ್ಭಪಾತ ಮಾಡಲು ಸಾಧ್ಯವಿಲ್ಲ; ಸೂಕ್ತ ಆರೈಕೆ ನೀಡಲು ಎಲ್ಲಾ ವ್ಯವಸ್ಥೆ ಮಾಡಬೇಕು: ಹೈಕೋರ್ಟ್

ತಿರುವನಂತಪುರಂ: ಹನ್ನೆರಡು ವರ್ಷದ ಬಾಲಕಿ ತನ್ನ ಅಪ್ರಾಪ್ತ ಸಹೋದರನಿಂದಲೇ ಗರ್ಭಿಣಿಯಾಗಿದ್ದಾಳೆ. ಪುಟ್ಟ ಮಗಳು ಗರ್ಭಿಣಿಯಾಗಿದ್ದಾಳೆ ಎಂಬ ಮಾಹಿತಿ ತಿಳಿದ ಪೋಷಕರು ಕಂಗಾಲಾಗಿ ಗರ್ಭಪಾತಕ್ಕಾಗಿ ಹೈಕೋರ್ಟ್ ಮೊರೆ ಹೋಗಿದ್ದಾರೆ. ಆದರೆ ಹೈಕೋರ್ಟ್, ಅಪ್ರಾಪ್ತ ಬಾಲಕಿಗೆ ಗರ್ಭಪಾತ ಮಾಡಲು ಅನುಮತಿ ನಿರಾಕರಿಸಿದೆ. ಇಷ್ಟೇ ಅಲ್ಲ ಸೂಕ್ತ ಆರೈಕೆ ನೀಡಲು ಸೂಚನೆ ನೀಡಿದೆ. ಜಸ್ಟೀಸ್ ದೇವನ್ ರಾಮಚಂದ್ರನ್ ಈ ಕ್ಲಿಷ್ಟ ಪ್ರಕರಣದ ವಿಚಾರಣೆ ನಡೆಸಿ ಆದೇಶ ನೀಡಿದ್ದಾರೆ. 12 ವರ್ಷದ ಬಾಲಕಿಯನ್ನು ಅಪ್ರಾಪ್ತ ಸಹೋದರ ಕಾಮತೃಷೆಗೆ ಬಳಸಿಕೊಂಡಿದ್ದಾನೆ. ನಿರಂತರವಾಗಿ ಆಕೆ ಮೇಲೆ ಅತ್ಯಾಚಾರ ನಡೆದಿದೆ. ಇದರ ನಡುವೆ ಈಕೆ ಗರ್ಭಿಣಿಯಾಗಿರುವುದು ಸ್ವತಃ ಬಾಲಕಿಗೆ ತಿಳಿದಿಲ್ಲ. ಇತ್ತ ಅಪ್ರಾಪ್ತ ಸಹೋದರನಿಗೂ ಗೊತ್ತಾಗಿಲ್ಲ.

12 ವರ್ಷದ ಅಪ್ರಾಪ್ತ ಬಾಲಕಿಯಲ್ಲಾಗಿರುವ ಕೆಲ ಬದಲಾವಣೆ ಗಮನಿಸಿದ ಪೋಷಕರು ಆಸ್ಪತ್ರೆ ದೌಡಾಯಿಸಿದ್ದಾರೆ. ಪರಿಶೀಲನೆ ನಡೆಸಿದಾಗ ಗರ್ಭಿಣಿಯಾಗಿರುವ ಮಾಹಿತಿ ತಿಳಿದಿದೆ. ಗರ್ಭಿಣಿಯಾಗಿ 34 ವಾರಗಳು ಉರುಳಿದೆ. ಬಾಲಕಿಯ ವಯಸ್ಸು,ಆರೋಗ್ಯ ಹಾಗೂ ಮಾನಸಿಕವಾಗಿ ಬೀರಬಲ್ಲ ಪರಿಣಾಮವನ್ನು ಆಧರಿಸಿ ಆಸ್ಪತ್ರೆ ವೈದ್ಯರು ಗರ್ಭಪಾತ ಸೂಕ್ತ ಎಂದು ಶಿಫಾರಸು ಮಾಡಿದ್ದಾರೆ. ಆದರೆ ಕಾನೂನು ಅನುಮತಿಸದ ಕಾರಣ ಕೋರ್ಟ್ ಮೊರೆ ಹೋಗಲು ಸೂಚನೆ ನೀಡಿದ್ದಾರೆ.

ಹೈಕೋರ್ಟ್ ಮೆಟ್ಟಿಲೇರಿದ ಪೋಷಕರಿಗೆ ಮತ್ತೆ ಆಘಾತವಾಗಿದೆ. 34 ವಾರಗಳು ಆಗಿರುವ ಕಾರಣ ಗರ್ಭದಲ್ಲಿ ಮಗುವಿನ ಬೆಳವಣಿಗೆ ಆಗಿದೆ. ಹೀಗಾಗಿ ಗರ್ಭಪಾತ ಮಾಡಲು ಸಾಧ್ಯವಿಲ್ಲ. ಬಾಲಕಿಗೆ ಪೋಷಕರು ಸೂಕ್ತ ಆರೈಕೆ ನೀಡಲು ಎಲ್ಲಾ ವ್ಯವಸ್ಥೆ ಮಾಡಬೇಕು. ಇತರ ಗರ್ಭಿಣಿಯರಿಗೆ ಸಿಗುವಂತ ಎಲ್ಲಾ ಆರೋಗ್ಯ ತಪಾಸಣೆ ನೀಡಲು ಆರೋಗ್ಯ ಇಲಾಖೆಗೆ ಸೂಚಿಸಲಾಗಿದೆ. ಬಾಲಕಿಗೆ ಎಲ್ಲಾ ನೆರವು ನೀಡಲು ಸಂಬಂಧಪಟ್ಟವರಿಗೆ ಸೂಚಿಸಲಾಗಿದೆ. ಪೋಷಕರಿಗೂ ಕೆಲ ಸೂಚನೆ ನೀಡಲಾಗಿದೆ.