ನಿಷ್ಕ್ರಿಯಗೊಂಡ ಬ್ಯಾಂಕ್‌ ಖಾತೆಗಳಿಗೆ ಕನಿಷ್ಠ ಬ್ಯಾಂಕ್‌ ಬ್ಯಾಲೆನ್ಸ್‌ ಅನ್ವಯ ಆಗಲ್ಲ: ರಿಸರ್ವ್ ಬ್ಯಾಂಕ್

ರಾಷ್ಟ್ರೀಯ

ವರ್ಷಗಳಿಂದ ಯಾವುದೇ ವಹಿವಾಟು ನಡೆಯದ ಬ್ಯಾಂಕ್‌ ಖಾತೆಗಳಿಗೆ ಕನಿಷ್ಠ ಬ್ಯಾಂಕ್‌ ಬ್ಯಾಲೆನ್ಸ್‌ ನಿಯಮ ಅನ್ವಯ ಆಗುವುದಿಲ್ಲ. ಹೀಗಾಗಿ ನಿಷ್ಕ್ರಿಯ ಖಾತೆಗಳಲ್ಲಿ ಕನಿಷ್ಠ ಬ್ಯಾಂಕ್‌ ಬ್ಯಾಲೆನ್ಸ್ ಇಲ್ಲದಿದ್ದರೂ ಶುಲ್ಕವನ್ನು ಕಡಿತಗೊಳಿಸಬಾರದು ಎಂದು ಬ್ಯಾಂಕ್‌ಗಳಿಗೆ ಭಾರತೀಯ ರಿಸರ್ವ್‌ ಬ್ಯಾಂಕ್(ಆರ್‌ಬಿಐ) ಸೂಚಿಸಿ, ಈ ಮೂಲಕ ಆರ್‌ಬಿಐ ಬ್ಯಾಂಕ್‌ ಗ್ರಾಹಕರಿಗೆ ನಿರಾಳತೆ ನೀಡಿದೆ.

ಈ ಹೊಸ ನಿಯಮಗಳ ನಗ್ಗೆ ಆರ್‌ಬಿಐ ಸುತ್ತೋಲೆ ಹೊರಡಿಸಿದೆ. ಹೊಸ ನಿಯಮಗಳ ಪ್ರಕಾರ ವಿದ್ಯಾರ್ಥಿವೇತನ ಮತ್ತು ನೇರ ಲಾಭ ವರ್ಗಾವಣೆ (ಡಿಬಿಟಿ) ಗಾಗಿ ತೆರಯಲಾದ ಖಾತೆಗಳನ್ನು ನಿಷ್ಕ್ರೀಯಗೊಳಿಸಬಾರದು. ಎರಡು ವರ್ಷಗಳಿಂದ ಅಂಥ ಖಾತೆಗಳಲ್ಲಿ ಯಾವುದೇ ವಹಿವಾಟು ನಡೆಯದಿದ್ದರೂ ಶುಲ್ಕ ವಿಧಿಸಕೂಡದು. ಹಾಗೆಯೇ, ಬ್ಯಾಂಕ್‌ಗಳು ಖಾತೆ ನಿಷ್ಕ್ರೀಯಗೊಳಿಸುವ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡಬೇಕು ಎಂದು ಸೂಚಿಸಿದೆ. ಈ ಹೊಸ ನಿಯಗಳು 2024ರ ಏಪ್ರಿಲ್‌ 1 ರಿಂದ ಜಾರಿಗೆ ಬರಲಿವೆ.

ಹೊಸ ನಿಯಮದಂತೆ ಖಾತೆ ನಿಷ್ಕ್ರೀಯ ಮಾಡುವ ಬಗ್ಗೆ ಬ್ಯಾಂಕ್‌ಗಳು ಎಸ್‌ಎಂಎಸ್‌, ಇಮೇಲ್‌ ಅಥವಾ ಪತ್ರದ ಮೂಲಕ ಗ್ರಾಹಕರಿಗೆ ಮಾಹಿತಿ ತಲುಪಿಸಬೇಕು. ಖಾತೆಯ ಮಾಲೀಕರಿಂದ ಯಾವುದೇ ಪ್ರತಿಕ್ರಿಯೆ ಬರದೇ ಇದ್ದರೆ, ಬಳಿಕ ಖಾತರಿದಾರರನ್ನು ಬ್ಯಾಂಕ್‌ಗಳು ಸಂಪರ್ಕಿಸಬೇಕು ಎಂದು ಆರ್‌ಬಿಐ ಸುತ್ತೋಲೆಯಲ್ಲಿ ತಿಳಿಸಿದೆ.