ಕೇಂದ್ರ ಸರ್ಕಾರ ಪ್ರಮುಖ ನಗರಗಳ ಅಭಿವೃದ್ಧಿಗೆ ಸ್ಮಾರ್ಟ್ ಸಿಟಿ ಯೋಜನೆಯನ್ನೇನೂ ಜಾರಿಗೊಳಿಸಿದೆ. ಆದರೆ ಅದು ಎಷ್ಟು ಸಮರ್ಪಕವಾಗಿ ಕಾರ್ಯ ನಿರ್ವಹಿಸಿದೆ ಅನ್ನುವುದೇ ಈಗಿರುವ ಪ್ರಶ್ನೆ. ಸರ್ಕಾರಗಳು ಬಣ್ಣ ಬಣ್ಣದ ಯೋಜನೆಗಳನ್ನೇನೂ ಜಾರಿಗೊಳಿಸುತ್ತದೆ. ಅದನ್ನು ಕಾರ್ಯರೂಪಕ್ಕೆ ತರಲು ಅಷ್ಟೇ ಸಮರ್ಥ, ಬುದ್ಧಿವಂತ, ದೂರದೃಷ್ಟಿಯುಳ್ಳ ಅಧಿಕಾರಿಗಳನ್ನು ಆಯ್ಕೆ ಮಾಡದೆ ಆಯಕಟ್ಟಿನ ಜಾಗಕ್ಕೆ ಅಸಮರ್ಥ ಅಧಿಕಾರಿಗಳನ್ನು ತಂದ ಪರಿಣಾಮ ಯೋಜನೆಗಳೆಲ್ಲ ಠುಸ್ ಪುಸ್ ಆಗುತ್ತಿರುವುದು ಮಾತ್ರ ಸುಳ್ಳಲ್ಲ.
ಮಂಗಳೂರು ಸ್ಮಾರ್ಟ್ ಸಿಟಿಯನ್ನೇ ಉದಾಹರಣೆಯಾಗಿ ತೆಗೆದಿಟ್ಟುಕೊಳ್ಳಿ. ದಾಖಲೆಗಳಲ್ಲಿ ಸಾವಿರಾರು ಕೋಟಿ ಅನುದಾನ ಜಾರಿಯಾದ ಲೆಕ್ಕ ಸಿಗುತ್ತದೆ. ಆದರೆ ಅದು ಎಷ್ಟು ಸಮರ್ಪಕವಾಗಿ ಕಾರ್ಯ ರೂಪಕ್ಕೆ ಬಂದಿದೆ ಅನ್ನುವುದಕ್ಕೆ ಉತ್ತರ ದೊಡ್ಡ ಶೂನ್ಯ. ಮಂಗಳೂರಿನ ಅನೇಕ ರಸ್ತೆಗಳನ್ನು ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಅಭಿವೃದ್ಧಿಗೊಳಿಸಲಾಗಿದೆ. ಆದರೆ ಅಧಿಕಾರಿಗಳ ಎಡವಟ್ಟುಗಳಿಂದ ಸಾರ್ವಜನಿಕರು ನಡೆದಾಡಲು ಪುಟ್ ಪಾತೇ ಇಲ್ಲ. ಸ್ಮಾರ್ಟ್ ಸಿಟಿ ಯೋಜನೆಯಡಿ ಅನೇಕ ಬಸ್ ತಂಗುದಾಣಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಆದರೆ ಬಿಸಿಲು, ಮಳೆಗೆ ಪ್ರಯಾಣಿಕರು ಬಸ್ ತಂಗುದಾಣ ದೊಳಗೆ ನಿಲ್ಲಲಾಗುತ್ತಿಲ್ಲ. ಹೊಸ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಿ ಡ್ರೈನೇಜ್, ಕೇಬಲ್ ಅಳವಡಿಸಲು ಹೊಸ ರಸ್ತೆಯನ್ನೇ ವರ್ಷಕ್ಕೆ ಕನಿಷ್ಠ ಎಂದರೂ 3-4 ಬಾರಿ ಕೆಡವಲಾಗುತ್ತದೆ. ಮತ್ತೆ ಕಾಂಕ್ರೀಟ್ ಹಾಕಲಾಗುತ್ತದೆ. ಜುಜುಬಿ ಶಾಲೆಗೆ ಹೋಗದ ಮಂದಿಗೆ ಹೀಗೆ ಮಾಡಿದರೆ ಈಗಾಗುತ್ತದೆ ಅನ್ನುವ ಪರಿಜ್ಞಾನ ಇದ್ದರೂ, ಮಾಸ್ಟರ್ ಡಿಗ್ರಿ ಪಡೆದ ಅಧಿಕಾರಿಗಳಿಗೆ ದೂರದೃಷ್ಟಿತ್ವದ ಕೊರತೆಯಿಂದಾಗಿ ಸಾವಿರಾರು ಕೋಟಿ ರೂಪಾಯಿ ಹಣ ಪೋಲಾಗುತ್ತಿದೆ. ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಅನ್ನುವಂತೆ ಅಧಿಕಾರಿಗಳು ಎಸಿ ರೂಮಿನಲ್ಲಿ ಕೂತು ಮುಕ್ಕುತ್ತಾರೆಯೇ ಹೊರತು ಭವಿಷ್ಯದ ಮಂಗಳೂರಿನ ಚಿತ್ರಣ ಬದಲಿಸುವಂತಹ, ಸ್ಪಷ್ಟ ರೀತಿಯ ಯೋಜನೆಯೇ ಹಾಕುತ್ತಿಲ್ಲ. ಮಂಗಳೂರಿನ ಹೃದಯ ಭಾಗದಲ್ಲಿ ಕ್ಲಾರ್ಕ್ ಟವರ್ ನಿರ್ಮಾಣಕ್ಕೆ ಕೋಟಿಗಟ್ಟಲೆ ರೂಪಾಯಿ ಹಣವನ್ನು ವ್ಯಯಿಸಲಾಗಿತ್ತು. ವಿದೇಶದಿಂದ ಗಡಿಯಾರ ತರುತ್ತೇವೆ ಎಂದು ಪುಂಗಿ ಬಿಟ್ಟು ಲಕ್ಷಗಟ್ಟಲೆ ಹಣವನ್ನು ಗಡಿಯಾರಕ್ಕಾಗಿ ಮೀಸಲಿಟ್ಟಿದ್ದರು. ಅದರ ಮೂರು ಪಟ್ಟು ಕಡಿಮೆ ಬೆಲೆಯಲ್ಲಿ ಇದಕ್ಕಿಂತ ಸುಂದರವಾದ ಗಡಿಯಾರ ತಯಾರಿಸುವವರು ಇದ್ದರೂ ದುಡ್ಡು ಕೊಳ್ಳೆ ಹೊಡೆಯಲು ಅಧಿಕಾರಿಗಳು ಸ್ಮಾರ್ಟ್ ಐಡಿಯಾವನ್ನೇ ಮಾಡಿದ್ದರು.
ಇನ್ನು ಹಂಪನಕಟ್ಟೆ ಹಳೇ ಬಸ್ ನಿಲ್ದಾಣದಲ್ಲಿ ಪಾರ್ಕಿಂಗ್ ಗಾಗಿ ಬೃಹತ್ ಯೋಜನೆಯನ್ನೇ ಘೋಷಿಸಿ ಐದು ವರ್ಷಗಳಾಗುತ್ತಾ ಬಂದಿದೆ. ಆದರೆ ಕೆಲಸ ಆಮೆಗತಿಯಲ್ಲಿ ನಡೆಯುತ್ತಿದೆ. ಹಂಪನಕಟ್ಟೆ ವ್ಯಾಪಾರ, ವಹಿವಾಟಿನ ಕೇಂದ್ರ ಸ್ಥಳವಾಗಿರುವುದರಿಂದ ಜನದಟ್ಟಣೆ ಅಧಿಕ. ಆದರೆ ಇಲ್ಲಿ ಜನರು ವಾಹನ ಪಾರ್ಕಿಂಗ್ ಮಾಡಲು ಸ್ಥಳಾವಕಾಶ ಸಿಗದೆ ಪರದಾಡುತ್ತಿದ್ದಾರೆ. ಆದರೆ ಸ್ಮಾರ್ಟ್ ಸಿಟಿ ಯೋಜನೆ ಇನ್ನೂ ಗುಂಡಿಯಿಂದ ಮೇಲಕ್ಕೆ ಎದ್ದಿಲ್ಲ. ಈಗಲೇ ಐದು ವರ್ಷ ಮುಗಿದಿದೆ. ಕೆಲಸ ಇದೇ ರೀತಿ ಮುಂದುವರಿದರೆ ಇನ್ನೂ ಹತ್ತು ವರ್ಷ ಮೇಲೇಳುವುದು ಅನುಮಾನ.
ಅದೇ ರೀತಿ ಸಿಗ್ನಲ್ ಬಳಿ ಬ್ಯಾರಿಕೇಡ್ ಗಳನ್ನು ಹಗ್ಗಗಳಿಂದ ಕಟ್ಟಿ ಜೋಡಿಸಿ ಇಡಲಾಗಿದೆ. ಕಳೆದ ಬಾರಿ ಇಂತಹ ಎಡವಟ್ಟಿನಿಂದ ಅಲ್ಲಿ ಅಪಘಾತ ಕೂಡ ನಡೆದಿತ್ತು. ನಿತ್ಯ ನಿರಂತರ ಸಮಸ್ಯೆಗಳಿಂದಾಗಿ ಯಾರಿಗೆ ಹೇಳಲಿ ನಮ್ಮ ಪ್ರಾಬ್ಲಂ ಅನ್ನುವುದು ಜನತೆಯ ಸ್ಥಿತಿಯಾಗಿದೆ.