ಕ್ರಿಮಿನಲ್ಸ್ ಗಳೊಂದಿಗೆ ಶಾಮೀಲು ಹಾಗೂ ಸಿವಿಲ್ ವ್ಯಾಜ್ಯಗಳಲ್ಲಿ ಹಸ್ತಕ್ಷೇಪ ಪ್ರವೃತ್ತಿ ಪೊಲೀಸ್ ಇಲಾಖೆಯ ಘನತೆಗೆ ಧಕ್ಕೆ ತರುತ್ತಿವೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ನಗರ ಸಶಸ್ತ್ರ ಮೀಸಲು ಪಡೆಯ ಕವಾಯತು ಮೈದಾನದಲ್ಲಿ ನಡೆದ ಹೊಸ ವರ್ಷದ ಮೊದಲ ಕವಾಯತಿನಲ್ಲಿ ಗೌರವ ರಕ್ಷೆ ಸ್ವೀಕರಿಸಿದ ಬಳಿಕ ಅವರು ಅಧಿಕಾರಿ-ಸಿಬ್ಬಂದಿಗೆ ಸಂದೇಶ ನೀಡಿದರು.
ಬೆಂಗಳೂರು ನಗರ ಪೊಲೀಸ್ ಘಟಕವು 60 ವಸಂತಗಳನ್ನು ತುಂಬಿ 61ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವುದು ಹೆಮ್ಮೆ ಸಂಗತಿಯಾಗಿದೆ. ಕಳೆದ ವರ್ಷ ನಗರ ಪೊಲೀಸರು ಎಲ್ಲ ಸ್ತರಗಳಲ್ಲಿ ಅತ್ಯುತ್ತಮ ಕರ್ತವ್ಯ ನಿರ್ವಹಿಸಿದ್ದಾರೆ. ಪ್ರಮುಖವಾಗಿ ವಿಧಾನಸಭಾ ಚುನಾವಣೆಯನ್ನು ಸಣ್ಣ,ಪುಟ್ಟ ಅಹಿತಕರ ಘಟನೆಯೂ ಇಲ್ಲದಂತೆ ಶಾಂತಿಯುತವಾಗಿ ನಡೆಸುವ ಮೂಲಕ ಎಲ್ಲರಿಂದಲೂ ಪ್ರಶಂಸೆಗೆ ಪಾತ್ರರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಮಾದಕ ವಸ್ತು ಮಾರಾಟ, ಸಾಗಾಣಿಕೆ ವಿರುದ್ಧದ ಹೋರಾಟವು ನಿರೀಕ್ಷೆಗೂ ಮೀರಿದ ಫಲಿತಾಂಶ ಕೊಟ್ಟಿದೆ. ಸೈಬರ್ ಕ್ರೈಂ, ಮಹಿಳೆಯರ ಸುರಕ್ಷತೆ, ದೀನದಲಿತರ ಸಂರಕ್ಷಣೆ ಇತ್ಯಾದಿ ವಿಷಯಗಳಲ್ಲಿ ಸಹ ಗುರುತರ ಸಾಧನೆಯಾಗಿದೆ. ತಮ್ಮ ಕರ್ತವ್ಯ ಮತ್ತು ಸಮಯ ಪ್ರಜ್ಞೆ ಹಾಗೂ ವಿವೇಚನಾಯುತ ವರ್ತನೆಯಲ್ಲಿ ಬೆಂಗಳೂರು ನಗರ ಪೊಲೀಸರು ಮುಂಚೂಣಿಯಲ್ಲಿದ್ದು, ರಾಜ್ಯದ ಇತರೆ ಜಿಲ್ಲೆಗಳಿಗೆ ಮಾದರಿಯಾಗಿದ್ದಾರೆ. ಇದು ನಮ್ಮ ಹೆಮ್ಮೆ ಎಂದರು.
ಅದೇ ರೀತಿ ನಮ್ಮಲ್ಲಿ ಆನೇಕ ದೋಷಗಳೂ ಕೂಡ ಇವೆ. ಮುಖ್ಯವಾಗಿ ಪೊಲೀಸ್ ಠಾಣೆಗಳು ದೀನ-ದಲಿತರಿಗೆ, ದುರ್ಬಲರಿಗೆ, ಅಮಾಯಕರಿಗೆ ರಕ್ಷಣೆ ಒದಗಿಸದೆ ಕೇವಲ ಬಲಾಢ್ಯರಿಗೆ, ಹಣವಂತರಿಗೆ ಮಾತ್ರ ಮಣೆ ಹಾಕುತ್ತಾರೆ ಎನ್ನುವ ಅಪಾದನೆ ಕೂಡಾ ಇದೆ. ಜೊತೆಗೆ ಭ್ರಷ್ಟಾಚಾರ, ಕ್ರಿಮಿನಲ್ ಅಪರಾಧಿಗಳೊಂದಿಗೆ ಪೊಲೀಸರ ಶಾಮೀಲು, ಸಿವಿಲ್ ವ್ಯಾಜ್ಯಗಳಲ್ಲಿ ಹಸ್ತಕ್ಷೇಪ ಪ್ರವೃತ್ತಿ ಇವು ಸಹ ಪೊಲೀಸ್ ಇಲಾಖೆಯ ಘನತೆಗೆ ಧಕ್ಕೆ ತರುತ್ತಿವೆ ಎಂದು ಆಯುಕ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪೊಲೀಸ್ ಠಾಣೆಗಳು ನ್ಯಾಯ ದೇಗುಲದಂತಿರಬೇಕು ಅವುಗಳ ಗೌರವಕ್ಕೆ ಚ್ಯುತಿ ಬಾರದ ಹಾಗೆ ಕರ್ತವ್ಯ ನಿರ್ವಹಿಸಿ ಜನರ ನಂಬಿಕೆ ವಿಶ್ವಾಸವನ್ನು ಇಮ್ಮಡಿಗೊಳಿಸುವ ಕೆಲಸಕಾರ್ಯಗಳನ್ನು ನಾವು ಮಾಡಬೇಕಾಗಿದೆ ಎಂದರು.
ರಾಜ್ಯದಲ್ಲಿ ಮೀಟರ್ ಬಡ್ಡಿ ದಂಧೆಕೋರರು, ರೌಡಿಗಳು ಸೇರಿದಂತೆ ಕ್ರಿಮಿನಲ್ ಹಿನ್ನೆಲೆಯುಳ್ಳ ವ್ಯಕ್ತಿಗಳೊಂದಿಗೆ ಸ್ನೇಹ ಹೊಂದಿರುವ ಪೊಲೀಸರ ವಿರುದ್ಧ ಮುಲಾಜಿಲ್ಲದೆ ಕಠಿಣ ಕ್ರಮ ಜರುಗಿಸುವ ಕಾರ್ಯ ಇಲಾಖೆ ಮಾಡಬೇಕಾಗಿದೆ. ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವ ವ್ಯಕ್ತಿಗಳೊಂದಿಗೆ ಪೊಲೀಸರು ಹೊಂದಿರುವ ಸ್ನೇಹದ ಬಗ್ಗೆ ಮಾಹಿತಿ ಸಂಗ್ರಹಿಸಿ ಅಂತಹ ಅಧಿಕಾರಿಗಳ ವಿರುದ್ದ ಸೂಕ್ತ ಕ್ರಮಕೈಗೊಳ್ಳುವ ಕೆಲಸ ಕಾರ್ಯಗಳನ್ನು ಸರಕಾರ ಮಾಡಬೇಕು. ರೌಡಿಗಳು ಹಾಗೂ ಭೂ ಮಾಫಿಯಾ ಸೇರಿದಂತೆ ಕ್ರಿಮಿನಲ್‌ಗಳೊಂದಿಗೆ ಸ್ನೇಹ ಹೊಂದಿರುವ ಅಧಿಕಾರಿಗಳ ಮೇಲೆ ನಿಗಾವಹಿಸಿ, ವಿವಾದಿತ ಭೂ ದಾಖಲೆಗಳ ವ್ಯವಹಾರದಲ್ಲಿ ರಿಯಲ್ ಎಸ್ಟೇಟ್ ದಂಧೆಕೋರರಿಗೆ ಅನುಕೂಲ ಕಲ್ಪಿಸುವ, ಕ್ರಿಮಿನಲ್‌ಗಳ ಜೊತೆ ಹುಟ್ಟು ಹಬ್ಬ ಆಚರಿಸಿಕೊಳ್ಳುವ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕ್ರಿಮಿನಲ್ಸ್ ಗಳೊಂದಿಗೆ ವೇದಿಕೆ ಹಂಚಿಕೊಳ್ಳುವ, ಅಂತಹ ವ್ಯಕ್ತಿಗಳೊಂದಿಗೆ ವ್ಯವಹರಿಸುವುದು ಇದೆಲ್ಲವೂ ಪೊಲೀಸ್ ಇಲಾಖೆಯ ಮೇಲೆ ನಾಗರಿಕರು ಇಟ್ಟಿರುವ ವಿಶ್ವಾಸ,ನಂಬಿಕೆಗೆ ಚ್ಯುತಿ ತಂದು ಇಲಾಖೆಗೂ, ಸರಕಾರಕ್ಕೂ ಕಳಂಕವಾಗಿರುತ್ತದೆ. ಅದುದರಿಂದ ಉನ್ನತ ಮಟ್ಟದ ಅಧಿಕಾರಿಗಳು, ಸರಕಾರ ಈ ಬಗ್ಗೆ ಗಮನ ಹರಿಸಬೇಕಾಗಿದೆ.