ಡಿವೈಎಫ್ಐ ಕರ್ನಾಟಕ ರಾಜ್ಯ ಸಮಿತಿ ಶ್ರದ್ದಾಂಜಲಿಯನ್ನು ಸಲ್ಲಿಸುತ್ತದೆ: ಮುನೀರ್ ಕಾಟಿಪಳ್ಳ
ಹಿರಿಯ ವಿದ್ವಾಂಸ, ಜನಪದ ತಜ್ಞ, ಸಾಹಿತಿ, ಬರಹಗಾರ ಪ್ರೊ. ಅಮೃತ ಸೋಮೇಶ್ವರ ಅಗಲಿಕೆಗೆ ಸಿಪಿಐಎಂ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ತೀವ್ರ ಶೋಕ ವ್ಯಕ್ತಪಡಿಸಿದೆ. ಸಿಪಿಐಎಂ ದ.ಕ. ಜಿಲ್ಲಾ ಕಾರ್ಯದರ್ಶಿ ಮಂಡಳಿ ಸಭೆಯಲ್ಲಿ ಶ್ರದ್ದಾಂಜಲಿಯನ್ನು ಸಲ್ಲಿಸಿದೆ.
ಪ್ರೊ. ಅಮೃತ ಸೋಮೇಶ್ವರರು ಕರಾವಳಿ ಜಿಲ್ಲೆಯ ಅಗ್ರಗಣ್ಯ ವಿದ್ವಾಂಸರು. ತುಳುನಾಡಿನ ಜನಪದ, ಯಕ್ಷಗಾನ ಮೊದಲಾದ ರಂಗದಲ್ಲಿ ಅವರು ಮಾಡಿದ ಕೆಲಸ, ಸಂಶೋಧನೆಗಳು ನಾಡಿನ ಇತಿಹಾಸ ಪುಟಗಳಲ್ಲಿ ಅಚ್ಚಳಿಯದೆ ಉಳಿಯಲಿದೆ. ವರ್ತಮಾನದ ಒತ್ತಡ, ಆಮಿಷಗಳ ಪ್ರಭಾವದ ಮುಂದೆ ಕರಾವಳಿಯ ಬೌದ್ದಿಕ ವಲಯ ಚಡಪಡಿಸುತ್ತಿರುವಾಗ ಅಮೃತರು ಯಾವುದೇ ರಾಜಿಯಿಲ್ಲದೆ ದೃಢವಾಗಿ ತಾನು ಪ್ರತಿಪಾದಿಸುವ ವಿಚಾರಗಳ ಜೊತೆ ನಿಂತದ್ದು ಸಣ್ಣ ಸಂಗತಿಯೇನಲ್ಲ. ಅರ್ಧ ಶತಮಾನಗಳ ಕಾಲ ಕಡಲ ತೀರದ ಬೌದ್ಧಿಕ ವಲಯವನ್ನು ಬರಹ, ಬದುಕು, ನಿಲುವುಗಳ ಮೂಲಕ ಪ್ರಭಾವಿಸಿದ ಅಮೃತ ಸೋಮೇಶ್ವರರು ದುಡಿಯುವ ಜನರ, ಶ್ರಮಿಕರ ಪರವಾದ ಚಳುವಳಿಗಳ ಹಿತೈಷಿಯಾಗಿಯೂ ಗುರುತಿಸಿಕೊಂಡಿದ್ದರು. ಅವರ ಅಗಲಿಕೆ ಕರಾವಳಿ ಜಿಲ್ಲೆಗಳ ಸಾಹಿತ್ಯ, ಸಾಂಸ್ಕೃತಿಕ ವಲಯದಲ್ಲಿ ದೊಡ್ಡ ಶೂನ್ಯವನ್ನು ಸೃಷ್ಟಿಸಿದೆ ಎಂದು ಸಿಪಿಐಎಂ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಶ್ರದ್ದಾಂಜಲಿ ಹೇಳಿಕೆಯಲ್ಲಿ ಪ್ರಕಟಿಸಿದೆ.
ತುಳುನಾಡಿನ ಸಾಕ್ಷಿ ಪ್ರಜ್ಞೆ, ಬಹುದೊಡ್ಡ ವಿದ್ವಾಂಸ, ಜನಪದ ಅಧ್ಯಯನದ ಮೇರುಶಿಖರ ಪ್ರೊ. ಅಮೃತ ಸೋಮೋಶ್ವರರು ಶಾಶ್ವತ ಮೌನಕ್ಕೆ ಜಾರಿದ್ದಾರೆ. ಅವರ ಅಗಲಿಕೆ ತುಳುನಾಡಿನ ಬೌದ್ದಿಕ ವಲಯದಲ್ಲಿ ದೊಡ್ಡ ಶೂನ್ಯವನ್ನು ಸೃಷ್ಟಿಸಿದೆ. ಡಿವೈಎಫ್ಐ, ಎಸ್ಎಫ್ಐ ನ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಬೆನ್ನು ತಟ್ಟಿದ್ದರು, ಎಡ, ಜನಪರ ಸಂಘಟನೆಗಳ ಹಿತೈಷಿಯಾಗಿದ್ದರು. ಸೌಮ್ಯ ವ್ಯಕ್ತಿತ್ವ ಶ್ರೀಯುತರು ಪ್ರಶಸ್ತಿ, ಸ್ಥಾನಮಾನ, ಅಧಿಕಾರದ ಹಿಂದೆ ಯಾವತ್ತೂ ಹೋಗಿರಲಿಲ್ಲ, ಅದಕ್ಕಾಗಿ ಆಸೆಪಟ್ಟಿರಲಿಲ್ಲ. ತಮ್ಮ ಸುತ್ತಲೂ ಇದ್ದ ವಿದ್ವಾಂಸ ವಲಯ ರಾಜಿಕೋರತನ, ವ್ಯವಸ್ಥೆಯ ಬೆದರಿಕೆಯಿಂದ ಮೌನಕ್ಕೆ ಜಾರಿದಾಗಲೂ ಅಮೃತರು ತನ್ನ ಸೈದ್ದಾಂತಿಕ ನಿಲುವುಗಳ ವಿಷಯದಲ್ಲಿ ವಜ್ರದಷ್ಟು ಕಠಿಣವಾಗಿದ್ದರು. ಅಮೃತರು ತಮ್ಮ ಅಧ್ಯಯನ, ಸಾಧನೆಗಳ ಮೂಲಕ ಅಮರರಾಗಿರುತ್ತಾರೆ. ಅವರಿಗೆ ಡಿವೈಎಫ್ಐ ಕರ್ನಾಟಕ ರಾಜ್ಯ ಸಮಿತಿ ಶ್ರದ್ದಾಂಜಲಿಯನ್ನು ಸಲ್ಲಿಸುತ್ತದೆ.