ಮಂಗಳೂರು: ಮಂಗಳೂರು ಮಹಾ ನಗರ ಪಾಲಿಕೆ ವ್ಯಾಪ್ತಿಗೊಳಪಡುವ ವಾರ್ಡ್ ಸಂಖ್ಯೆ 60 ಬೆಂಗರೆ, ವಾರ್ಡ್ ಸಂಖ್ಯೆ 11ಪಣಂಬೂರು ಬೆಂಗ್ರೆ ಪ್ರದೇಶಗಳಲ್ಲಿ ಕಳೆದ ಹಲವು ವರ್ಷಗಳಿಂದ ಸರಕಾರಿ ಭೂಮಿಯಲ್ಲಿ ವಾಸವಿರುವ ಕುಟುಂಬಗಳು ಹಕ್ಕುಪತ್ರ ಪಡೆಯಲು ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹಕ್ಕುಪತ್ರ ವಿಚಾರವಾಗಿ 2018 ರಲ್ಲಿ ಕಾಂಗ್ರೆಸ್ ಮತ್ತು 2023ರಲ್ಲಿ ಬಿಜೆಪಿ ಕೊನೆಯ ಅವಧಿಗಳಲ್ಲಿ ನಡೆದ ಚುನಾವಣೆಯ ಹೊಸ್ತಿಲಲ್ಲಿ ರಾಜಕೀಯ ಲಾಭಕ್ಕೋಸ್ಕರ ಜನಪ್ರತಿನಿದಿಗಳ ಒತ್ತಡಗಳಲ್ಲಿ ತರಾತುರಿಯಲ್ಲಿ ಅಪೂರ್ಣ ಪ್ರಕ್ರಿಯೆಯ ಹಕ್ಕುಪತ್ರಗಳನ್ನು ವಿತರಿಸಿ ಜನರನ್ನು ಪರದಾಡುವಂತೆ ಮಾಡಿದೆ.
1993-94ರಲ್ಲಿ ಸುಮಾರು 944 ಹಕ್ಕುಪತ್ರ ವಿತರಿಸಲಾಗಿತ್ತು. ಆದರೆ 2023ರಲ್ಲಿ ಹಕ್ಕುಪತ್ರಗಳ ಪ್ರತಿಯನ್ನು ಪಡೆದು ಹಳೆಯ 944 ಹಕ್ಕುಪತ್ರ ಸೇರಿ ಒಟ್ಟು ಸುಮಾರು 2000 ಹಳೆಹಕ್ಕುಪತ್ರಗಳಿಗೆ ಚೆಕ್ಕು ಬಂದಿ ಹಾಗೂ ಸರ್ವೆ ನಂಬರ್ ನೀಡಿ ವಿತರಿಸಲಾಗುವುದು ಎಂದು ಸ್ಥಳೀಯ ಶಾಸಕರು ಮತ್ತು ನಗರ ಪಾಲಿಕೆ ಸದಸ್ಯರು ಜನರಿಗೆ ಮಾಹಿತಿ ನೀಡಿದ್ದರು ಆದರೆ ಕೇವಲ ಕೆಲವು ಕುಟುಂಬಗಳಿಗೆ ಮಾತ್ರ ಸರ್ವೇನಂಬರ್ ಸಹಿತ ಹಕ್ಕುಪತ್ರ ನೀಡಲಾಗಿದೆ ಆದರೆ ಖಾತಾ ಅಥವಾ ಪಹಣಿ ಪತ್ರ ಪಡೆಯಲು ಸಾಧ್ಯ ಆಗಿರುವುದಿಲ್ಲ. ಬಹುತೇಕ ಹಳೆ ಹಕ್ಕುಪತ್ರದಾರರಿಗೆ ಸರ್ವೆ ನಂಬರ್ ನೀಡದೆ ಅನ್ಯಾಯ ಮಾಡಲಾಗಿದೆ.
2023ರಲ್ಲಿ ವಿತರಿಸಲಾದ ಹಕ್ಕುಪತ್ರಗಳಿಗೆ ತಮ್ಮ ಕಚೇರಿಯಿಂದ ಹಿಂಬರಹ ಪಡೆದು , ಖಾತ ಪಡೆಯಲು ಅಧಿಕಾರಿಗಳು ಬೇರೆ ಬೇರೆ ಕಾನೂನಿನ ಕಾರಣಗಳನ್ನು ಹೇಳಿ ಹಿಂಬರಹ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಹಳೆಹಕ್ಕುಪತ್ರಗಳಿಗೆ ಖಾತೆ ನೀಡಲು ಕ್ರಮಗಳು ನಡೆಯುತ್ತಿಲ್ಲ, ತಾಂತ್ರಿಕ ಸಮಸ್ಯೆಗಳನ್ನು ಮುಂದಿಟ್ಟು ಖಾತಾ, ಹಿಂಬರಹ ನೀಡಲು ಅಧಿಕಾರಿಗಳು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಡಿವೈಎಫ್ಐ ಬೆಂಗರೆ ಗ್ರಾಮ ಸಮಿತಿಯು ಮಂಗಳೂರು ತಹಶೀಲ್ದಾರರನ್ನು ಭೇಟಿ ಮಾಡಿ ಮನವಿ ಸಲ್ಲಿಸಿ ಕೂಡಲೇ ಬೆಂಗರೆ ಪ್ರದೇಶದ ಸರಕಾರಿ ಭೂಮಿಯಲ್ಲಿ ವಾಸವಿರುವ ಕುಟುಂಬಗಳಿಗೆ ಹಕ್ಕುಪತ್ರ ವಿತರಣೆಗೆ ಕ್ರಮ ಕೈಗೊಳ್ಳಬೇಕೆಂದು DYFI ತಹಶೀಲ್ದಾರ್ ಅವರನ್ನು ಒತ್ತಾಯಿಸಿದೆ. ಹಕ್ಕುಪತ್ರ ಗೊಂದಲವನ್ನು ಬಗೆಹರಿಸಲು ಸರಕಾರವನ್ನು ಕೋರಲು ಆಗ್ರಹಿಸಿದೆ. ಚುನಾವಣೆ ಸಮಯದಲ್ಲಿ ಹಕ್ಕುಪತ್ರದ ರಾಜಕೀಯ ಮಾಡುತ್ತಿರುವ ಜನಪ್ರತಿನಿದಿನಗಳ ಹಕ್ಕುಪತ್ರ ರಾಜಕಾರಣವನ್ನು ಜನ ತಿರಸ್ಕಾರ ಮಾಡಬೇಕು ಹಾಗೂ
ಹಕ್ಕುಪತ್ರ ವಿಚಾರದಲ್ಲಿ ಜನರಿಗೆ ತೊಂದರೆ,ವಿಳಂಬವಾದಲ್ಲಿ ಸಾರ್ವಜನಿಕರನ್ನು ಸಂಘಟಿಸಿ ಹೋರಾಟ ಹಮ್ಮಿಕೊಳ್ಳ ಬೇಕಾಗುತ್ತದೆ ಎಂದು ಡಿವೈಎಫ್ಐ ಬೆಂಗರೆ ಗ್ರಾಮ ಸಮಿತಿ ಎಚ್ಚರಿಸಿದೆ.
ತಹಶೀಲ್ದಾರ್ ಭೇಟಿ ಆದ ನಿಯೋಗದಲ್ಲಿ ಡಿವೈಎಫ್ಐ ಜಿಲ್ಲಾಧ್ಯಕ್ಷರಾದ ಬಿಕೆ ಇಮ್ತಿಯಾಝ್, ಜಿಲ್ಲಾ ಸಹ ಕಾರ್ಯದರ್ಶಿ ತಯ್ಯುಬ್ ಬೆಂಗ್ರೆ, ಜಿಲ್ಲಾ ಸಮಿತಿ ಸದಸ್ಯರಾದ ನೌಶಾದ್ ಬೆಂಗ್ರೆ, ಬೆಂಗ್ರೆ ಗ್ರಾಮ ಸಮಿತಿ ಅಧ್ಯಕ್ಷರಾದ ಹನೀಫ್ ಬೆಂಗ್ರೆ ಮುಖಂಡರಾದ ನಾಸಿರ್ ಬಾಸ್, ಮುವಾಜ್ ಬೆಂಗ್ರೆ ಉಪಸ್ಥಿತರಿದ್ದರು