ಹಿಟ್ ಆಂಡ್ ರನ್ ಪ್ರಕರಣದಲ್ಲಿ ಚಾಲಕರು ಪರಾರಿಯಾದರೆ 10 ವರ್ಷ ಜೈಲು ಶಿಕ್ಷೆ, 7 ಲಕ್ಷ ರೂಪಾಯಿ ದಂಡ ಸರಿಯಲ್ಲ”
ಹಿಟ್ ಆಂಡ್ ರನ್ ಪ್ರಕರಣದಲ್ಲಿ ಚಾಲಕರಿಗೆ ಕಠಿಣ ಶಿಕ್ಷೆ ಮತ್ತು 7 ಲಕ್ಷ ರೂಪಾಯಿ ದಂಡ ವಿಧಿಸಲು ನೂತನ ಭಾರತೀಯ ನ್ಯಾಯ ಸಂಹಿತೆಯಲ್ಲಿ ಅವಕಾಶ ಮಾಡಿಕೊಟ್ಟಿರುವುದನ್ನು ವಿರೋಧಿಸಿ ಜನವರಿ 17 ರಿಂದ ರಾಜ್ಯಾದ್ಯಂತ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲು ಲಾರಿ ಮಾಲೀಕರು ತೀರ್ಮಾನಿಸಿದ್ದಾರೆ.
“ಹಿಟ್ ಆಂಡ್ ರನ್ ಪ್ರಕರಣ ಸಂಬಂಧ ಜಾರಿಗೆ ತಂದಿರುವ ಕಾಯಿದೆ ಕುರಿತು ಲಾರಿ ಮಾಲೀಕರೊಂದಿಲ್ಲ ಚರ್ಚಿಸಿಲ್ಲ, ಹಾಗಾಗಿ, ತಕ್ಷಣವೇ ಸರಕಾರ ಆ ಪ್ರಸ್ತಾವನೆಯನ್ನು ಹಿಂಪಡೆಯಬೇಕು. ಜನವರಿ 16 ರೊಳಗೆ ಆ ಪ್ರಸ್ತಾವನೆಯನ್ನು ಕೈ ಬಿಡದಿದ್ದರೆ ಜನವರಿ 17 ರಿಂದ ಸರಕಾರಿ ಸರಕು ಸಾಗಣೆ ವಾಹನಗಳ ಸೇವೆ ಸ್ಥಗಿತಗೊಳಿಸಿ ಪ್ರತಿಭಟಿಸಲಾಗುವುದು” ಎಂದು ಫೆಡರೇಷನ್ ಆಫ್ ಕರ್ನಾಟಕ ಲಾರಿ ಓನರ್ಸ್ ಅಸೋಸಿಯೇಷನ್ ನ ಗೌರವಾಧ್ಯಕ್ಷ ಬಿ. ಚನ್ನಾರೆಡ್ಡಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
“ಹಿಟ್ ಆಂಡ್ ರನ್ ಪ್ರಕರಣದಲ್ಲಿ ಚಾಲಕರು ಪೊಲೀಸ್ ಠಾಣೆ ಅಥವಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಬಳಿ ಹೋಗದೆ, ಪರಾರಿಯಾದರೆ 10 ವರ್ಷ ಜೈಲು ಶಿಕ್ಷೆ, 7 ಲಕ್ಷ ರೂಪಾಯಿ ದಂಡ ವಿಧಿಸುವುದಾಗಿ ನ್ಯಾಯ ಸಂಹಿತೆಯಲ್ಲಿ ಪ್ರಸ್ತಾಪಿಸಿದ್ದು ಸರಿಯಲ್ಲ” ಎಂದು ಹೇಳಿದರು.
“ಹೊರ ರಾಜ್ಯಗಳಲ್ಲಿ ಅಪಘಾತ ಸಂಭವಿಸಿದಾಗ ಚಾಲನಾ ಪರವಾನಿಗೆಯನ್ನು ವಶಪಡಿಸಿಕೊಳ್ಳಲಾಗುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಜಾಮೀನು ನೀಡಲು ಸ್ಥಳೀಯರ ಭದ್ರತೆ ಕೇಳಲಾಗುತ್ತದೆ. ಇದರಿಂದ ಲಾರಿ ಚಾಲಕರಿಗೆ ತೊಂದರೆ ಆಗಲಿದೆ. ಆದ್ದರಿಂದ ಕೂಡಲೇ ಪ್ರಸ್ತಾವಿತ ಕಾಯಿದೆಯಲ್ಲಿರುವ ಅಂಶಗಳನ್ನು ತೆಗೆದು ಹಾಕಬೇಕು. ಪ್ರಸ್ತಾವಿತ ಕಾಯಿದೆಯಲ್ಲಿ ಲಾರಿ ಉದ್ಯಮ ಹಾಗೂ ಚಾಲಕರ ವಿಧಿಸಿರುವ ಕಠಿಣ ಕಾನೂನುಗಳನ್ನು ಸಡಿಲಗೊಳಿಸಬೇಕು” ಎಂದು ಆಗ್ರಹಿಸಿದರು.