ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿಸಿದ್ದೇ ಆದರೆ ಸಂಪುಟದಿಂದ ಹೊರಗಿರುವುದಾಗಿ ಖಡಕ್ ಎಚ್ಚರಿಕೆಯ ಸಂದೇಶ ನೀಡಿದ ಡಿ.ಕೆ ಶಿವಕುಮಾರ್

ರಾಜ್ಯ

ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿಸಿದ್ದೇ ಆದರೆ ತಾವು ಸಂಪುಟದಿಂದ ಹೊರಗಿರುವುದಾಗಿ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಖಡಕ್ಕ್ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ರಾಜ್ಯದಲ್ಲಿ ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆಗಳ ಸೃಷ್ಟಿಗೆ ಒತ್ತಡ ತೀವ್ರವಾದ ಬೆನ್ನಲ್ಲೇ 7 ಮಂದಿ ಸಚಿವರುಗಳು ರಹಸ್ಯ ಸಭೆ ನಡೆಸಿದ್ದರು.

ಅದರೆ ಇದರ ಬೆನ್ನಲ್ಲೇ ಡಿ.ಕೆ.ಶಿವಕುಮಾರ್ ಹೈಕಮಾಂಡ್‍ಗೆ ತಮ್ಮ ನಿಲುವನ್ನು ತಿಳಿಸಿದ್ದು, ಪಕ್ಷಕ್ಕೆ ಅನುಕೂಲವಾಗುವುದಾದರೆ ಹೈಕಮಾಂಡ್ ಯಾವುದೇ ನಿರ್ಧಾರ ತೆಗೆದುಕೊಳ್ಳಬಹುದು. ಅದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆಗಳ ಸೃಷ್ಟಿಸಿದ್ದೇ ಆದರೆ ತಾವು ಪ್ರಸ್ತುತ ಹುದ್ದೆಯಲ್ಲಿ ಮುಂದುವರೆಯುವುದಿಲ್ಲ. ಹೈಕಮಾಂಡ್ ಬಯಸುವುದಾದರೆ ಪಕ್ಷದ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯುತ್ತೇನೆ. ಬೇಡ ಎಂದರೆ ಅದನ್ನೂ ತ್ಯಜಿಸಲು ಸಿದ್ಧ ಎಂದು ಖಡಕ್ ಸಂದೇಶ ನೀಡಿದ್ದಾರೆ. ಇದು ಹೈಕಮಾಂಡ್‍ಗೆ ಬಿಸಿತುಪ್ಪವಾಗಿ ಪರಿಣಮಿಸಿದೆ.

ಒಂದೆಡೆ ಜಾತಿವಾರು ಉಪಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿಸಬೇಕು ಎಂಬ ಸೂಕ್ಷ್ಮ ವಿಚಾರವನ್ನು ತೇಲಿಬಿಟ್ಟು ಹಿರಿಯ ಕಾಂಗ್ರೆಸಿಗರು ಮುಜುಗರ ಉಂಟುಮಾಡಿದ್ದಾರೆ. ಅದರಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಣದ ಸಚಿವರೇ ಈ ತಂತ್ರಗಾರಿಕೆಯ ಹಿಂದೆ ಇರುವುದು ಮತ್ತಷ್ಟು ಕುತೂಹಲವನ್ನು ಕೆರಳಿಸಿದೆ. ಡಿ.ಕೆ.ಶಿವಕುಮಾರ್ ಪ್ರಭಾವವನ್ನು ತಗ್ಗಿಸುವುದು ಮತ್ತು ಲೋಕಸಭೆ ಚುನಾವಣೆಯ ಬಳಿಕ ಅಧಿಕಾರ ಹಂಚಿಕೆಯ ಬೇಡಿಕೆಗಳು ಮುನ್ನೆಲೆಗೆ ಬರದಂತೆ ನೋಡಿಕೊಳ್ಳಲು ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆಗಳ ಬೇಡಿಕೆಯನ್ನು ಪ್ರಸ್ತಾಪಿಸಲಾಗಿದೆ ಎಂಬ ಚರ್ಚೆಗಳಿವೆ.