ಮೂಡದಲ್ಲಿ ಮೂಡಿದ ಬಂದ ಸತ್ಯ.!
ಹೇಳಿ ಕೇಳಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಕೋಮುವಾದದ ಪ್ರಯೋಗ ಶಾಲೆಯಾಗಿ ಮಾರ್ಪಟ್ಟಿರುವುದು ಎಲ್ಲರಿಗೂ ತಿಳಿದೇ ಇದೆ. ಇಲ್ಲಿ ಉಭಯ ಕೋಮಿನ ಹೆಣ್ಣು ಗಂಡು ಪರಸ್ಪರ ಕುಶಲೋಪಚಾರಿ ನಡೆಸಿದರೂ ಅನೈತಿಕ ಪೊಲೀಸ್ ಗಿರಿ ನಡೆಯುತ್ತಿದೆ. ಇದು ಇಂತಹವರ ಬಾಹುಳ್ಯ ಪ್ರದೇಶ, ಇಲ್ಲಿ ಇನ್ನೊಂದು ಕೋಮಿನ ವ್ಯಾಪಾರಸ್ಥರಿಗೆ ಅನುಮತಿ ಇಲ್ಲ ಅನ್ನುವ ಬೋರ್ಡ್ ಗಳು ರಾರಾಜಿಸಿದ್ದವು. ಜಾತ್ರೋತ್ಸವ ಸಮಯದಲ್ಲೂ ಇನ್ನೊಂದು ಕೋಮಿನವರಿಗೆ ವ್ಯಾಪಾರ ಇಲ್ಲ ಅನ್ನುವ ತಾಲಿಬಾನ್ ಸಂಸ್ಕೃತಿ ಹೇರಲ್ಪಟ್ಟಿರುವುದು ಬುದ್ಧಿವಂತ ಜಿಲ್ಲೆಯ ದುರ್ದೈವ. ಸರಕಾರ ಯಾವುದೇ ಇದ್ದರೂ ಉಭಯ ಜಿಲ್ಲೆಗಳಲ್ಲಿ ಅಧಿಕಾರ ನಡೆಸುತ್ತಿರುವುದು ಸಂಘ ಪರಿವಾರ ಅಂದರೆ ತಪ್ಪಲ್ಲ.
ಇದೀಗ ಮತ್ತೊಂದು ಬೆಚ್ಚಿಬೀಳಿಸುವ ಸಂಗತಿ ಇಲ್ಲಿ ವರದಿಯಾಗಿದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ನೀವು ಭೂತ ಕನ್ನಡಿ ಹಾಕಿ ನೋಡಿದರೂ ಇಲ್ಲಿ ಬೆರಳೆಣಿಕೆಯ ಸಂಖ್ಯೆಯಲ್ಲಿ ಅಲ್ಪಸಂಖ್ಯಾತ ಸಮುದಾಯದ ಅಧಿಕಾರಿಗಳು ಇರುವುದು. ಇರುವ ಅಧಿಕಾರಿಗಳು ನೆಮ್ಮದಿಯಿಂದ ಕೆಲಸ ಮಾಡಲು ಇಲ್ಲಿ ಬಿಡುತ್ತಿಲ್ಲ. ತಾವು ತಪ್ಪು ಮಾಡದಿದ್ದರೂ ಟಾರ್ಗೆಟ್ ಮಾಡಿ ಖೆಡ್ಡಾಕ್ಕೆ ಬೀಳಿಸುವ ವ್ಯವಸ್ಥಿತ ಜಾಲ ಕೂಡ ಅಧಿಕಾರಿ ವಲಯಗಳಲ್ಲೂ ಕೂಡ ನಡೆಯುತ್ತಿರುವುದು ಅಚ್ಚರಿದಾಯಕ. ಅದರಲ್ಲೂ ಅಲ್ಪಸಂಖ್ಯಾತ ಸಮುದಾಯದ ಅಧಿಕಾರಿಗಳೇ ಬಲಿಪಶು ಆಗುತ್ತಿದ್ದಾರೆ. ಜಾತ್ರೆ, ಶಿಕ್ಷಣ ವ್ಯವಸ್ಥೆಗಳಲ್ಲಿ ನಡೆಯುತ್ತಿದ್ದ ಕೋಮು ಪ್ರಭಾವಳಿ ಅಧಿಕಾರಿ ವಲಯಗಳಲ್ಲೂ ನಡೆಯುತ್ತಿದೆ.
ಮಂಗಳೂರಿನ ಚಿನ್ನದ ಮೊಟ್ಟೆ ಇಡುವ ಆಡಳಿತ ಕೇಂದ್ರ ಎಂದು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ (ಮೂಡ) ಅಡ್ಡ ಹೆಸರಿದೆ. ಲಂಚಗುಳಿತನ ಎಲ್ಲವೂ ಇಲ್ಲಿ ಸರ್ವೇ ಸಾಮಾನ್ಯ. ಮೂಡ ಆಯುಕ್ತರಾಗಿ ಇತ್ತೀಚೆಗಷ್ಟೇ ಮನ್ಸೂರ್ ಅಲಿ ನೇಮಕಗೊಂಡಿದ್ದರು. ಪ್ರಮುಖ ಹುದ್ದೆಗೆ ಅಲ್ಪಸಂಖ್ಯಾತ ಸಮುದಾಯದ ವ್ಯಕ್ತಿಯೊಬ್ಬರು ಆಯ್ಕೆಯಾಗಿರುವುದು ಕೆಲವರ ಕಣ್ಣು ಕುಕ್ಕಿರಬಹುದು. ಮನ್ಸೂರ್ ಅಲಿ ಯನ್ನು ಇಲ್ಲಿಂದ ಎತ್ತಂಗಡಿ ಮಾಡಲು ಪಕ್ಕಾ ಪ್ಲ್ಯಾನ್ ಮಾಡಿಕೊಂಡು ಕಾರ್ಯಾಚರಿಸಿದಂತೆ ಕಂಡು ಬರುತ್ತಿದೆ. ಮೂಡಾ ಮಹಿಳಾ ಸಿಬ್ಬಂದಿಯನ್ನೇ ಬಳಸಿಕೊಂಡು ಲೈಂಗಿಕ ದೌರ್ಜನ್ಯ ಕೇಸ್ ದಾಖಲಿಸಿ ಇಲ್ಲಿಂದ ಅಮಾನತು ಮಾಡಿಸುವ ಪಕ್ಕಾ ಪ್ಲ್ಯಾನ್ ಕೂಡ ನಡೆದಿದೆ. ಆದರೆ ವಾಸ್ತವಾಂಶ ಸಕಾಲದಲ್ಲಿ ಹೊರ ಬಂದ ಕಾರಣ ಎದುರಾಳಿಗಳ ಎಲ್ಲಾ ಪ್ಲ್ಯಾನ್ ಠುಸ್ಸಾಗಿದೆ.
ಮೂಡಾ ಆಯುಕ್ತ ಮನ್ಸೂರ್ ಅಲಿ ಸಾಧು ಸ್ವಭಾವದ ವ್ಯಕ್ತಿಯೆಂದು ಕೇಳಿಬರುತ್ತಿದೆ. ಮೂಡಾ ಕಚೇರಿಯಲ್ಲಿ ಡಿಸೆಂಬರ್ 27 ರಂದು ನಡೆದ ಸಾಮಾನ್ಯ ಸಭೆಯ ನಡಾವಳಿ ಬರೆದುಕೊಡಲು ಮಹಿಳಾ ಸಿಬ್ಬಂದಿಗೆ ಆಯುಕ್ತರು ತಿಳಿಸಿದ್ದಾರಂತೆ. ಬೆರಳಚ್ಚುಗಾರ್ತಿ ಸಿಬ್ಬಂದಿ ನೂರು ಪುಟಗಳ ವರದಿಯನ್ನು ತಪ್ಪು ತಪ್ಪಾಗಿ ಬರೆದು ಕೊಟ್ಟಿದ್ದಾಳಂತೆ. ಈ ಬಗ್ಗೆ ಕೆಂಡಾಮಂಡಲರಾದ ಆಯುಕ್ತರು ಸರಿಯಾಗಿ ಕೆಲಸ ಮಾಡುವಂತೆ ಗದರಿಸಿದ್ದಾರಂತೆ. ಇದಕ್ಕೆ ಇಷ್ಟೊಂದು ಕೆಲಸ ಮಾಡಲು ನನ್ನಿಂದ ಸಾಧ್ಯವಿಲ್ಲ ಎಂದಿದ್ದಾಳಂತೆ. ಅದಕ್ಕೆ ಆಯುಕ್ತರು ಕೆಲಸ ಮಾಡುವುದಾದರೆ ಇಲ್ಲಿರು. ಇಲ್ಲವಾದರೆ ಬೇರೆ ಸಿಬ್ಬಂದಿಯನ್ನು ನೇಮಕ ಮಾಡುತ್ತೇನೆ ಎಂದು ಹೇಳಿ ಹೊರಗುತ್ತಿಗೆ ಏಜೆನ್ಸಿಗೆ ತಿಳಿಸಿ ಹೊಸ ಸಿಬ್ಬಂದಿ ನೀಡುವಂತೆ ಕೇಳಿಕೊಂಡಿದ್ದರು.
ಈ ವಿಷಯ ತಿಳಿದ ಸಿಬ್ಬಂದಿ ಕೆಲಸ ಕಳೆದುಕೊಳ್ಳುವ ಭಯದಲ್ಲಿ ಉರ್ವಾ ಪೊಲೀಸ್ ಠಾಣೆಯಲ್ಲಿ ಆಯುಕ್ತರ ವಿರುದ್ಧವೇ ಸಿಬ್ಬಂದಿ ಲೈಂಗಿಕ ದೌರ್ಜನ್ಯದ ದೂರು ದಾಖಲಿಸಿದ್ದರು.
ಇಲ್ಲಿ ತಮ್ಮ ಅಧೀನದ ಸಿಬ್ಬಂದಿ ಸರಿಯಾಗಿ ಕೆಲಸ ಮಾಡದೇ ಇದ್ದರೆ ಮೇಲಾಧಿಕಾರಿಗಳು ತರಾಟೆಗೆ ತೆಗೆದುಕೊಳ್ಳುವುದು ಸಾಮಾನ್ಯ. ಆಯುಕ್ತ ಮನ್ಸೂರ್ ಅಲಿ ಮಾಡಿದ್ದು ಇದೇ. ಆದರೆ ಸಿಬ್ಬಂದಿಯನ್ನು ಇನ್ಯಾರೋ ಬಳಸಿಕೊಂಡು ಆಯುಕ್ತರನ್ನು ಖೆಡ್ಡಾಕ್ಕೆ ಬೀಳಿಸುವ ಷಡ್ಯಂತ್ರ ನಡೆಸಿದ್ದರು. ಆಯುಕ್ತರ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ವಿವರ ಹೊರಬರುತ್ತಿದ್ದಂತೆ ಸಂಘಪರಿವಾರದ ಸಂಘಟನೆ ದುರ್ಗಾ ವಾಹಿನಿ ದೊಡ್ಡ ಇಶ್ಯೂ ಮಾಡಲು ತಯಾರಿ ನಡೆಸಿತ್ತು. ಆದರೆ ಮೂಡಾ ದ ಇತರ ಅಧಿಕಾರಿಗಳು ನೈಜ ವಿಚಾರವನ್ನು ತಿಳಿಸಿದ್ದರಿಂದ ದುರ್ಗಾ ವಾಹಿನಿ ಅಲ್ಲಿಂದ ಕಾಲ್ಕಿತ್ತಿತು. ಇಲ್ಲಿ ಇತರ ಅಧಿಕಾರಿಗಳು ಆಯುಕ್ತರ ಪರ, ನಡೆದ ವಾಸ್ತವಾಂಶ ತಿಳಿಸಿದ್ದರಿಂದ ಆಯುಕ್ತರು ಬಚಾವಾದರು. ಇಲ್ಲವಾದರೆ ಸುಖಾಸುಮ್ಮನೆ ಬಲಿಪಶು ಆಗುತ್ತಿದ್ದರು.
ವರ್ಷಗಳ ಹಿಂದೆ ಮಂಗಳೂರಿನ ಪಾಂಡೇಶ್ವರದಲ್ಲಿರುವ ಅಲ್ಪಸಂಖ್ಯಾತ ಇಲಾಖೆಯ ಅಧಿಕಾರಿ ಫಾರೂಕ್ ಎಂಬುವವರ ಮೇಲೆ ಇಂತಹದ್ದೇ ಆರೋಪ ಬಂದಿತ್ತು. ಆರೋಪ ಮಾಡಿದ್ದು ಸ್ವಸಮುದಾಯದ ಸಿಬ್ಬಂದಿಯೇ ಆಗಿದ್ದರು. ಫಾರೂಕ್ ಅಮಾನತ್ತಾದರು. ಆನಂತರ ತಿಳಿದು ಬಂದಿದ್ದು ಇದರ ಹಿಂದೆ ಕೆಲಸ ಮಾಡಿದ್ದು ಇವರ ಕಚೇರಿಯ ಕೆಲವು ಅಧಿಕಾರಿಗಳು ಎಂಬುದು.
ವರದಕ್ಷಿಣೆ ಕಾಯ್ದೆ ಯನ್ನು ಕೆಲವರು ದುರುಪಯೋಗಪಡಿಸುತ್ತಾರೆ. ಅದೇ ರೀತಿ ಲೈಂಗಿಕ ದೌರ್ಜನ್ಯ ಕಾಯ್ದೆ ಯನ್ನು ದುರುಪಯೋಗ ಪಡಿಸುವ ಸಂಗತಿ ಈಗೀಗ ಹೆಚ್ಚುತ್ತಿದೆ. ಪ್ರತಿಷ್ಠಿತರು, ಅಧಿಕಾರಿ ವರ್ಗಗಳನ್ನು ಮಣಿಸುವ ಕೊನೆಯ ಅಸ್ತ್ರವಾಗಿ ಲೈಂಗಿಕ ದೌರ್ಜನ್ಯ ಕಾಯ್ದೆ ಯನ್ನು ಬಳಸಿಕೊಳ್ಳುತ್ತಾರೆ. ಮಾಡದ ತಪ್ಪಿಗಾಗಿ ಕೆಲವರು ಅನ್ಯಾಯ ಕ್ಕೊಳಗಾಗುತ್ತಾರೆ. ದುರುಪಯೋಗ ತಪ್ಪಿಸಲು ವಿನಾಕಾರಣ ಕೇಸ್ ಕೊಟ್ಟವರ ಮೇಲೂ ಕ್ರಮ ಜರುಗಿಸಬೇಕಿದೆ.