ನಗರಸಭೆ, ಪುರಸಭೆ, ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಗಳಿಗೆ ಪರಿವರ್ತಿಸುವ ಅಗತ್ಯವಿಲ್ಲ: ಹೈಕೋರ್ಟ್

ರಾಜ್ಯ

ಕರ್ನಾಟಕ ಭೂಕಂದಾಯ ಕಾಯ್ದೆಯಡಿ ಸೂಚಿಸಲಾದ ವಿಧಾನಗಳನ್ನು ಅನುಸರಿಸಿ ನಗರಸಭೆ, ಪುರಸಭೆ ಅಥವಾ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಗಳಿಗೆ ಪರಿವರ್ತಿಸುವ ಅಗತ್ಯವಿಲ್ಲ ಎಂಬುದಾಗಿ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಪೀಠ ಈ ಮಹತ್ವದ ತೀರ್ಪನ್ನು ಘೋಷಿಸಿದೆ. ಟೌನ್ ಮುನ್ಸಿಪಲ್ ಕೌನ್ಸಿಲ್ (TMC) ವ್ಯಾಪ್ತಿಗೊಳಪಟ್ಟ ಭೂಮಿ ಕೃಷಿಯೇತರ ಉದ್ದೇಶಗಳಿಗೆ ಪರಿವರ್ತಿತವಾದ ಭೂಮಿ ಎಂದು ಪರಿಗಣಿಸತಕ್ಕದ್ದಾಗಿದೆ ಎಂದು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ತೀರ್ಪಿನಲ್ಲಿ ಹೇಳಿದ್ದಾರೆ.

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದ ಉದ್ಯಮಿ ಶೈಲಜಾ 1.29 ಎಕ್ರೆ ಜಮೀನು ಹೊಂದಿರುತ್ತಾರೆ. 2016 ರಲ್ಲಿ ಪೆಟ್ರೋಲ್ ಬಂಕ್ ಉದ್ದೇಶಕ್ಕೆ ಕೃಷಿ ಭೂಮಿಯನ್ನು ವಾಣಿಜ್ಯ ಉದ್ದೇಶಕ್ಕೆ ಪರಿವರ್ತಿಸಲಾಯಿತು. ಉಳಿದ ಭೂಮಿಯನ್ನು ವಾಣಿಜ್ಯ ಕಟ್ಟಡ ಕಟ್ಟಲು ಬಳಸುವ ಪ್ರಸ್ತಾವನೆಗೆ ಬೈಲಹೊಂಗಲ ಟಿಎಂಸಿ ಸದರಿ ಭೂಮಿ ಕೃಷಿಯೇತರ ವಾಣಿಜ್ಯ ಉದ್ದೇಶಕ್ಕೆ ಅಂದರೆ ಪೆಟ್ರೋಲ್ ಬಂಕ್ ಗೆ ಪರಿವರ್ತಿಸಿದ ಭೂಮಿ ಯೆಂದು ಉಲ್ಲೇಖಿಸಿ ತಿರಸ್ಕರಿಸಿತು.

ಕಾನೂನಿನ ನಿಬಂಧನೆಗಳನ್ನು ಪರಿಶೀಲಿಸಿದ ನಂತರ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರು ಪ್ರಶ್ನಿತ ಭೂಮಿ ಟಿಎಂಸಿ ಮಿತಿಯಲ್ಲಿ ಇರುವುದರಿಂದ ಕರ್ನಾಟಕ ಭೂ ಕಂದಾಯ ಕಾಯ್ದೆಯ (ಕೆ.ಎಲ್.ಆರ್.) ನಿಬಂಧನೆಗಳನ್ನು ಅನ್ವಯಿಸಲಾಗುವುದಿಲ್ಲ ಎಂಬುದನ್ನು ಗಮನಿಸಿದರು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಜಮೀನುಗಳಿಗೆ ಕೆಎಲ್ಆರ್ ಕಾಯ್ದೆಯ ನಿಬಂಧನೆಗಳು ಅನ್ವಯವಾಗುವುದಿಲ್ಲ ಎಂಬ ಹೈಕೋರ್ಟ್ ತೀರ್ಮಾನಿಸಿರುವ ಎಸ್. ಕೃಷ್ಣಪ್ಪ ಪ್ರಕರಣವನ್ನು ನ್ಯಾಯಾಲಯ ಉಲ್ಲೇಖಿಸಿತು.

ಕಾರ್ಪೊರೇಷನ್ ನಂತೆ ಅದೇ ಸ್ಥಾನವನ್ನು ಹೊಂದಿರುವ ಕಾರಣ ಟಿಎಂಸಿಗೆ ಸಹ ಆ ತತ್ವ ಅನ್ವಯಿಸುತ್ತದೆ ಎಂದು ನ್ಯಾಯಪೀಠ ಹೇಳಿದೆ. ಈ ವಿಷಯದ ದೃಷ್ಟಿಯಿಂದ ಟಿಎಂಸಿ ಮಿತಿಯೊಳಗೆ ಬರುವ ಜಮೀನಿನ ಮಾಲಕರು ಭೂಮಿ ಬಂದ ನಂತರ ಕೆಎಲ್ಆರ್ ಕಾಯ್ದೆಯ ಸೆಕ್ಷನ್ 95 ರ ಅಡಿಯಲ್ಲಿ ಕೃಷಿಯಿಂದ ಕೃಷಿಯೇತರ ಉದ್ದೇಶಗಳಿಗೆ ಭೂಮಿಯನ್ನು ಪರಿವರ್ತಿಸಲು ಯಾವುದೇ ಅಗತ್ಯವಿರುವುದಿಲ್ಲ ಎಂದು ಹೈಕೋರ್ಟ್ ಹೇಳಿದೆ.

ಕೃಷಿಯೇತರ ವಾಣಿಜ್ಯ ಉದ್ದೇಶಗಳಿಗೆ ಪರಿವರ್ತನೆ ಮಾಡಿದರೂ ಪೆಟ್ರೋಲ್ ಬಂಕ್ ಗೆ ಮಾತ್ರ ಆಸ್ತಿಯ ಬಳಕೆಯನ್ನು ಟಿಎಂಸಿ ನಿರ್ಬಂಧಿಸಬಹುದೇ ಎಂಬ ಪ್ರಶ್ನೆಗೆ ಅಂತಹ ಕೃತಕ ವ್ಯತ್ಯಾಸವು ಸಮರ್ಥನೀಯವಾಗಿದೆ ಎಂದು ಹೈಕೋರ್ಟ್ ಹೇಳಿದೆ.