ಪ್ರೇಯಸಿ ಕೊಲೆ ಯತ್ನ; ಪಾಗಲ್ ಪ್ರೇಮಿಗೆ 18 ವರ್ಷ ಕಠಿಣ ಶಿಕ್ಷೆ, 2 ಲಕ್ಷ ರೂಪಾಯಿ ದಂಡ.

ಕರಾವಳಿ

ಜೀವನ್ಮರಣ ಹೋರಾಟದಲ್ಲಿ ಬದುಕಿ ಬಂದ ವಿದ್ಯಾರ್ಥಿನಿ

ಮಂಗಳೂರು ಶಕ್ತಿನಗರದ ನಿವಾಸಿ ಸುಶಾಂತ ಯಾನೆ ಶಾನ್ ತನ್ನನ್ನು ಪ್ರೀತಿಸಲು ನಿರಾಕರಿಸಿದ ದೇರಳಕಟ್ಟೆ ನಿವಾಸಿ ಕುಮಾರಿ ದೀಕ್ಷಾ ಎಂಬ ಯುವತಿಗೆ ದಿನಾಂಕ 28-06-2019 ರಂದು ದೇರಳಕಟ್ಟೆ ಕೆ.ಎಸ್ ಹೆಗ್ಡೆ ಆಸ್ಪತ್ರೆಯ ಹಿಂದುಗಡೆ 18 ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಲು ಪ್ರಯತ್ನಿಸಿದ್ದ. ನಂತರ ತಾನು ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು. ಪ್ರಸ್ತುತ ಬಜಪೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ, ಅಂದಿನ ಉಳ್ಳಾಲ ಪೊಲೀಸ್ ಠಾಣಾ ಉಪ-ನಿರೀಕ್ಷಕ ಗುರಪ್ಪ ಕಾಂತಿ ಪ್ರಕರಣದ ತನಿಖೆ ನಡೆಸಿ ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರು ದಿನಾಂಕ: 12.01.2024 ರಂದು ಆರೋಪಿ ಸುಶಾಂತನಿಗೆ ಭಾರತೀಯ ದಂಡ ಸಂಹಿತೆಯ 341, 326, 354, 307, 309 ಕಲಂಗಳ ಅಡಿಯಲ್ಲಿ ಒಟ್ಟು 18 ವರ್ಷ ಕಠಿಣ ಕಾರವಾಸದ ಶಿಕ್ಷೆ ಮತ್ತು ಎರಡು ಲಕ್ಷ ಹತ್ತು ಸಾವಿರ ರೂಪಾಯಿ ದಂಡ ವಿಧಿಸಿ ಆದೇಶ ನೀಡಿದ್ದಾರೆ. ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಶ್ರೀಮತಿ ಜ್ಯೋತಿ ನಾಯಕ್ ವಾದಿಸಿದ್ದರು.

ಆರೋಪಿಗೆ ಜಾಮೀನು ನಿರಾಕರಣೆ: ವಿಚಾರಣೆಯ ಸಮಯ ಮಾನ್ಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆರೋಪಿಗೆ ಜಾಮೀನು ನೀಡಲು ನಿರಾಕರಿಸಿದ ಕಾರಣ ಆರೋಪಿ ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ಎರಡು ಬಾರಿ ಜಾಮೀನು ಅರ್ಜಿ ಸಲ್ಲಿಸಿದ್ದ. ಪ್ರಕರಣದ ಗಂಭೀರತೆಯನ್ನು ಗಮನಿಸಿದ ಮಾನ್ಯ ಉಚ್ಚ ನ್ಯಾಯಾಲಯವು ಕೂಡ ಎರಡೂ ಬಾರಿ ಆರೋಪಿಗೆ ಜಾಮೀನು ನೀಡಲು ನಿರಾಕರಿಸಿತ್ತು. ಆರೋಪಿ ಸುಶಾಂತ್ ಜೂನ್ 2019 ರಿಂದ ಇಲ್ಲಿಯವರೆಗೆ ನ್ಯಾಯಾಂಗ ಬಂಧನದಲ್ಲಿರುತ್ತಾನೆ.ಆರೋಪಿ ಸುಶಾಂತ್ ರೌಡಿ ಜಪಾನ್ ಮಂಕಿ ಯಾನೆ ರಾಜು ತಂಡದಲ್ಲಿ ಗುರುತಿಸಿಕೊಂಡಿದ್ದ ಮಾತ್ರವಲ್ಲ ಹಲವಾರು ಬಾರಿ ಜೈಲು ಸೇರಿದ್ದ.