ಮದುವೆ ಆಗುವುದಾಗಿ ನಂಬಿಸಿ, ಲೈಂಗಿಕ ಕಿರುಕುಳ ನೀಡಿ ಬಾಲಕಿ ಗರ್ಭದರಿಸಲು ಕಾರಣನಾದ ಯುವಕನಿಗೆ ಶಿಕ್ಷೆ ವಿಧಿಸಿ ಜಿಲ್ಲಾ ಹೆಚ್ಚುವರಿ ಮತ್ತು ಸೆಷನ್ ನ್ಯಾಯಾಲಯದ ನ್ಯಾಯಾಧೀಶ ಜೆ.ಎಸ್. ಮೋಹನ್ ಆದೇಶಿಸಿದ್ದಾರೆ. ಆರೋಪಗಳು ದೃಢಪಟ್ಟ ಕಾರಣ 20 ವರ್ಷಗಳ ಕಠಿಣ ಕಾರಾವಾಸ ಶಿಕ್ಷೆ, 1.10 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ನೊಂದ ಬಾಲಕಿಗೆ ದಂಡದ ಮೊತ್ತದಲ್ಲಿ 1 ಲಕ್ಷ ರೂಪಾಯಿಗಳನ್ನು ಮತ್ತು ಪರಿಹಾರವಾಗಿ 3 ಲಕ್ಷ ರೂಪಾಯಿ ನೀಡಲು ಆದೇಶಿಸಲಾಗಿದೆ.
2023 ರಲ್ಲಿ ಭದ್ರಾವತಿ ನಗರದ 19 ವರ್ಷದ ಯುವಕ 15 ವರ್ಷದ ಬಾಲಕಿಯನ್ನು ಮದುವೆಯಾಗುತ್ತೇನೆಂದು ಪುಸಲಾಯಿಸಿ, ಲೈಂಗಿಕ ಕಿರುಕುಳ ನೀಡಿದ್ದ. ಆಕೆಯು ಗರ್ಭಿಣಿಯಾಗಿದ್ದಳೆಂದು ನೊಂದ ಬಾಲಕಿಯ ತಂದೆ ದೂರು ನೀಡಿದ್ದರು. ಅದರ ಆಧಾರದ ಮೇಲೆ ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಆಗಿನ ತನಿಖಾಧಿಕಾರಿ ತನಿಖೆ ಕೈಗೊಂಡು ನ್ಯಾಯಾಲಯಕ್ಕೆ ಜಾರ್ಜ್ ಶೀಟ್ ಸಲ್ಲಿಸಿದ್ದರು. ಸರಕಾರಿ ಅಭಿಯೋಜಕರಾದ ಹರಿಪ್ರಸಾದ್ ಮತ್ತು ಶ್ರೀಧರ್ ವಾದ ಮಂಡಿಸಿ ಆರೋಪಿಗೆ ಸಜೆ ವಿಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ..