ಜಿ.ಆರ್. ಮೆಡಿಕಲ್ ಕಾಲೇಜಿನ ಅನುಮತಿ ರದ್ದು ಪಡಿಸಿದ, ರಾಷ್ಟ್ರೀಯ ವೈದ್ಯಕೀಯ ಮಂಡಳಿಯ ನಿರ್ಧಾರವನ್ನು ಎತ್ತಿ ಹಿಡಿದ ಹೈಕೋರ್ಟ್

ಕರಾವಳಿ

ಮಂಗಳೂರು ಸಮೀಪದ ನೀರುಮಾರ್ಗದ ಬಿತ್ತಿಲ್ ಪಾದೆ ಎಂಬಲ್ಲಿರುವ ಜಿ ಆರ್ ಮೆಡಿಕಲ್ ಕಾಲೇಜಿಗೆ 2022-23ನೇ ಸಾಲಿನ ಎಂಬಿಬಿಎಸ್ ಕೋರ್ಸ್ ನಡೆಸಲು ನೀಡಿದ್ದ ಅನುಮತಿಯನ್ನು ರದ್ದುಪಡಿಸಿದ್ದ ರಾಷ್ಟ್ರೀಯ ವೈದ್ಯಕೀಯ ಮಂಡಳಿ ನಿರ್ಧಾರದಲ್ಲಿ ಮಧ್ಯಪ್ರವೇಶಿಸಲು ಹೈಕೋರ್ಟ್ ನಿರಾಕರಿಸಿದೆ. 2021-22ನೇ ಸಾಲಿನಲ್ಲಿ ಕಾಲೇಜಿಗೆ ಪ್ರವೇಶ ಪಡೆದು ಎಂಬಿಬಿಎಸ್ ಕೋರ್ಸ್ ಮುಂದುವರೆಸುತ್ತಿದ್ದ 150 ಮಂದಿ ವಿದ್ಯಾರ್ಥಿಗಳನ್ನು ರಾಜ್ಯದ ಇತರೆ ಕಾಲೇಜುಗಳಿಗೆ ಸ್ಥಳಾಂತರಿಸಲು ಸೂಚಿಸಿದ್ದ ಎನ್‌ಎಂಸಿ ನಿರ್ಧಾರವನ್ನು ಎತ್ತಿ ಹಿಡಿದಿದೆ. ಕಾಲೇಜಿಗೆ ಅನುಮತಿ ಮುಂದುವರೆಸುವುದು ಮತ್ತು ವಿದ್ಯಾರ್ಥಿಗಳನ್ನು ಮತ್ತೊಂದು ಕಾಲೇಜಿಗೆ ಸ್ಥಳಾಂತರಿಸುವಂತೆ ಸೂಚಿಸಿದ್ದ ಎನ್‌ಎಂಸಿ ಹಾಗೂ ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿ ಕಾಲೇಜು ಆಡಳಿತ ಮಂಡಳಿ ಹೈಕೋರ್ಟ್ ಮೆಟ್ಟಿಲೇರಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಎಸ್. ದಿನೇಶ್‌ಕುಮಾರ್ ಮತ್ತು ಟಿ.ಜಿ. ಶಿವಶಂಕರೇಗೌಡ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದ್ದು, ಅರ್ಜಿ ವಜಾಗೊಳಿಸಿ ಆದೇಶಿಸಿದೆ.

ಎನ್‌ಎಂಸಿ ಸಿಬ್ಬಂದಿ 2022ರ ಸೆಪ್ಟಂಬರ್ 5 ಮತ್ತು 6ರಂದು ಕಾಲೇಜಿಗೆ ಹಠಾತ್ ಭೇಟಿ ನೀಡಿ ತಪಾಸಣೆ ನಡೆಸಿತ್ತು. ಈ ಸಂದರ್ಭದಲ್ಲಿ ಶೇ. 71ರಷ್ಟು ಬೋಧಕ ಸಿಬ್ಬಂದಿ ಕೊರತೆ, ಶೇ. 79 ರಷ್ಟು ನಿವಾಸಿ ವೈದ್ಯರ ಕೊರತೆ, ಶೇ.30 ರಷ್ಟು ಮಾತ್ರ ಹೊರ ರೋಗಿಗಳ ಹಾಜರಾತಿ ಇತ್ತು. ಶೇ. 10ರಷ್ಟು ಮಾತ್ರ ಒಳರೋಗಿಗಳಿದ್ದರು. ಈ ಎಲ್ಲ ಮಾಹಿತಿಯ ಆಧಾರದಲ್ಲಿ ಎನ್‌ಎಂಸಿ ಕಾಲೇಜಿನ ಅನುಮತಿ ನವೀಕರಿಸಲು ನಿರಾಕರಿಸಿತ್ತು.

ವಿಚಾರಣೆ ವೇಳೆ ಕಾಲೇಜಿನ ಪರ ವಕೀಲರು, ಸೆಪ್ಟಂಬರ್ 5ರಂದು ಓಣಂ ಹಬ್ಬ ಇತ್ತು. ಈ ಸಂದರ್ಭದಲ್ಲಿ ಎನ್‌ಎಂಸಿ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ವೈದ್ಯಕೀಯ ಕಾಲೇಜುಗಳ ಸ್ಥಾಪನೆ ನಿಯಂತ್ರಣ 1999ರ ನಿಯಮ 8(3)(1)ದ ಪ್ರಕಾರ ಹಬ್ಬಗಳ ದಿನದ ಎರಡು ದಿನಗಳ ಮುನ್ನ ಹಾಗೂ ಬಳಿಕ ತಪಾಸಣೆ ನಡೆಸುವುದಕ್ಕೆ ಅವಕಾಶವಿಲ್ಲ ಎಂದು ತಿಳಿಸಲಾಗಿದೆ. ಆದ್ದರಿಂದ ಎಂಎನ್‌ಸಿ ನಿರ್ಧಾರವನ್ನು ರದ್ದುಪಡಿಸಬೇಕು ಎಂದು ಕೋರಿದರು. ಈ ವಾದವನ್ನು ಪುರಸ್ಕರಿಸಲು ನ್ಯಾಯಪೀಠ ನಿರಾಕರಿಸಿತು.ಅಲ್ಲದೆ, 2022ರ ಸಾಲಿನಲ್ಲಿ ಓಣಂ ಹಬ್ಬ ಸೆಪ್ಟಂಬರ್ 8ರಂದು ಇತ್ತು. ಆದರೆ, ಕರ್ನಾಟಕದಲ್ಲಿ ಈ ಹಬ್ಬಕ್ಕೆ ಕೇಂದ್ರ ಅಥವಾ ರಾಜ್ಯ ಸರ್ಕಾರ ಯಾವುದೇ ರಜಾ ದಿನವನ್ನಾಗಿ ಘೋಷಣೆ ಮಾಡಿರಲಿಲ್ಲ ಎಂದು ತಿಳಿಸಿರುವ ನ್ಯಾಯಪೀಠ ಕಾಲೇಜಿನ ವಾದವನ್ನು ತಿರಸ್ಕರಿಸಿದೆ. ಜೊತೆಗೆ, ಕಾಲೇಜಿಗೆ ಅನುಮತಿ ನಿರಾಕರಿಸುವುದಕ್ಕೂ ಮುನ್ನ ಕಾಲೇಜಿಗೆ ಹಲವು ಬಾರಿ ಅವಕಾಶಗಳನ್ನು ನೀಡಿದ್ದರೂ, ಸರಿಪಡಿಸಿಕೊಂಡಿಲ್ಲ. ಕಾಲೇಜಿನಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದಿಂದ ಬೇರೊಂದು ಕಾಲೇಜಿಗೆ ಸ್ಥಳಾಂತರ ನಿರ್ಧಾರ ಮಾಡಲಾಗಿದೆ. ಇದರಲ್ಲಿ ಯಾವುದೇ ದೋಷ ಕಂಡು ಬರುತ್ತಿಲ್ಲ ಎಂದು ಅಭಿಪ್ರಾಯಪಟ್ಟು ಜಿ ಆರ್ ಮೆಡಿಕಲ್ ಕಾಲೇಜಿನ ಅರ್ಜಿಯನ್ನು ವಜಾಗೊಳಿಸಿದೆ.