ಬುದ್ಧಿವಂತರ ಜಿಲ್ಲೆಯ ಸರಕಾರಿ ಶಾಲೆಯ ದಾರುಣ ಸ್ಥಿತಿ.!

ಕರಾವಳಿ

ಶಿಕ್ಷಣ ಸಚಿವರು, ಶಾಸಕ ವೇದವ್ಯಾಸ ಕಾಮತ್ ಇನ್ನಾದರೂ ಕಣ್ಣು ತೆರೆಯಲಿ.!

ಮಂಗಳೂರಿಗೆ ಬುದ್ಧಿವಂತರ ಜಿಲ್ಲೆ ಅನ್ನುವ ಟ್ರೇಡ್ ಮಾರ್ಕ್ ಏನೋ ಇದೆ. ದುಬಾರಿ ಡೊನೇಶನ್ ಪಡೆದು ಅಲ್ಲಲ್ಲಿ ನಾಯಿಕೊಡೆಗಳಂತೆ ತಲೆ ಎತ್ತಿ ನಿಂತಿರುವ ಆಂಗ್ಲ ಮಾಧ್ಯಮ ಶಾಲೆಗಳ ಕಟ್ಟಡಗಳು ಕಣ್ಣು ಕೋರೈಸುವ ರೀತಿಯಲ್ಲಿ ಇರುವುದೇನೂ ನಿಜ. ಇಲ್ಲಿ ಹೈ-ಫೈ ಕುಟುಂಬದ ಮಕ್ಕಳಿಗೆ ಮಾತ್ರ ಫೀಸು ಕಟ್ಟಲು ಸಾಧ್ಯ. ಆದರೆ ಮಂಗಳೂರಿನಲ್ಲಿ ಬಹುಪಾಲು ಜನತೆ ಈಗಲೂ ಶಿಕ್ಷಣಕ್ಕಾಗಿ ಆಶ್ರಯಿಸಿಕೊಂಡಿರುವುದು ಸರಕಾರಿ ಶಾಲೆ ಅನ್ನುವುದು ನೂರಕ್ಕೆ ನೂರು ಸತ್ಯ. ಇಲ್ಲಿನ ಕೂಲಿ ಕಾರ್ಮಿಕರು, ಕೆಲ ಮಧ್ಯಮ ವರ್ಗದ ಕುಟುಂಬಗಳಿಗೆ ದುಬಾರಿ ಫೀಸು ಕಟ್ಟಿ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಲಿಸುವ ಪರಿಸ್ಥಿತಿಯಲ್ಲಿ ಇಲ್ಲ. ಆದರೆ ಸರಕಾರಿ ಶಾಲೆಯ ಪರಿಸ್ಥಿತಿ ಇಂದಿಗೂ ಯಾವ ಮಟ್ಟಿಗಿದೆ ಅನ್ನುವುದಕ್ಕೆ ಈ ಶಾಲೆ ಅತ್ಯಂತ ಉತ್ತಮ ಉದಾಹರಣೆ.

ಮಂಗಳೂರಿನ ಜನತೆ ಬುದ್ಧಿವಂತರು ನಿಜ. ಆದರೆ ಧರ್ಮ ದಂಗಲ್ ಅವರ ಭಾವನೆಗಳನ್ನು ಕೆರಳಿಸಿದಂತೆ ಮೂಲಭೂತ ಸಮಸ್ಯೆಗಳ ಬಗ್ಗೆ ಕೆರಳಿಸುತ್ತಿಲ್ಲ ಅನ್ನುವುದು ಕೂಡ ಅಷ್ಟೇ ನಿಜ. ಇದೇ ಕಾರಣದಿಂದ ರಾಜಕಾರಣಿಗಳು ಚುನಾವಣೆ ಹತ್ತಿರ ಬರುತ್ತಿದ್ದಂತೆ ಮತೀಯ ಭಾವನೆ ಕೆರಳಿಸಿ ಆರಾಮವಾಗಿ ಗೆದ್ದು ಬರುತ್ತಾರೆ. ನಾಲ್ಕೈದು ಬಾರಿ ಶಾಸಕರೂ ಆಗುತ್ತಾರೆ. ಅಂತಹ ಶಾಸಕರ ಕ್ಷೇತ್ರದಲ್ಲಿ ಮೂಲಭೂತ ಸಮಸ್ಯೆಗಳು ಗುಡ್ಡೆ ಹಾಕಿ ಕೂತಿರುತ್ತದೆ. ಗೆದ್ದ ಶಾಸಕರಿಗೆ ಅದರ ಅಗತ್ಯವೂ ಇಲ್ಲ. ಮೋದಿ, ರಾಮ ನಾಮ ಜಪ ಮಾಡಿದರೆ ಸಾಕು ಗೆಲ್ಲುತ್ತೇವೆ ಅನ್ನುವ ಕಾನ್ಫಿಡೆನ್ಸ್ ಇರುವುದರಿಂದ ಅವೆಲ್ಲಾ ಸಮಸ್ಯೆಗಳು ಕಸದ ಬುಟ್ಟಿ ಸೇರುತ್ತವೆ ಅಷ್ಟೇ.

ನಾವಿಲ್ಲಿ ಹೇಳ ಹೊರಟಿರುವುದು ಶಾಸಕ ವೇದವ್ಯಾಸ ಕಾಮತ್ ಕ್ಷೇತ್ರದ ಸರಕಾರಿ ಶಾಲೆಯೊಂದರ ದುಸ್ಥಿತಿ ಬಗ್ಗೆ. ಬೆಂಗ್ರೆ ಕಸಬಾದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅತ್ಯಂತ ಶೋಚನೀಯ ಸ್ಥಿತಿಯ ದಾರುಣ ಕಥೆ ಇದು.

ಅಬ್ಬಬ್ಬಾ.. ಮಳೆ ಬಂತೆಂದರೆ ಸಾಕು, ಸೋರುತ್ತಿರುವ ಶಾಲೆಯ ಮೇಲ್ಚಾವಣಿ, ಇನ್ನೇನೂ ಬಿದ್ದೇ ಬೀಳುತ್ತದೆ ಅನ್ನುವ ರೀತಿಯಲ್ಲಿ ನೇತಾಡುತ್ತಿರುವ ಬಾಗಿಲನ್ನು ಸಣ್ಣ ಹಗ್ಗದಿಂದ ಕಿಟಕಿಗೆ ಕಟ್ಟಿರುವ ಚಿಂತಾಜನಕ ದೃಶ್ಯ. ಬಾಗಿಲುಗಳು ಇಲ್ಲದ, ಶುಚಿತ್ವ ಇಲ್ಲದ ದುರ್ವಾಸನೆ ಬೀರುತ್ತಿರುವ ಶೌಚಾಲಯಗಳು, ಅಲ್ಲಲ್ಲಿ ಕುಸಿದು ಬಿದ್ದಿರುವ ಕಾಂಪೌಂಡ್ ಗೋಡೆ, ಶಾಲೆಯ ಮೇಲೆ ಕುಸಿದು ಬೀಳುವುದನ್ನು ತಡೆಯಲು ಆಶ್ರಯಕ್ಕಾಗಿ ಇಟ್ಟಿರುವ ಮರದ ತುಂಡು.. ಇಂತಹ ಅವ್ಯವಸ್ಥೆ ತುಂಬಿರುವ ಶಾಲೆಯಲ್ಲಿ 750 ಕ್ಕೂ ಹೆಚ್ಚು ಮಕ್ಕಳು ಕಲಿಯುತ್ತಿದ್ದಾರೆ. ಏನಾದರೂ ಅನಾಹುತ ನಡೆದರೆ ಯಾರು ಹೊಣೆ. ದಿನಗೂಲಿ ಮಾಡುವ ಕುಟುಂಬಗಳು ಬೇರೆ ವಿಧಿಯಿಲ್ಲದೆ ಶಾಲೆಗೆ ಮಕ್ಕಳನ್ನು ಕಲಿಸುವ ಸ್ಥಿತಿ ಬಂದೊಡಗಿದೆ.

ಪಾಳು ಬಿದ್ದ ಶಾಲೆಯ ಕಥೆ ಒಂದೆಡೆಯಾದರೆ, ಮಕ್ಕಳಿಗಾಗಿ ಬಿಸಿಯೂಟ ತಯಾರಿಸುವ ಅಡುಗೆ ಕೋಣೆಯದ್ದು ಇನ್ನೊಂದು ಕಥೆ. ಮಕ್ಕಳು ಸ್ವಚ್ಚಂದವಾಗಿ ಪಾಠ ಕೇಳಲು ಬೇಕಾದ ಡೆಸ್ಕ್ ವ್ಯವಸ್ಥೆಯೂ ಸರಿಯಾಗಿಲ್ಲ. ಇನ್ನು ಒಂದೊಂದು ತರಗತಿಯಲ್ಲಿ 70 ರಿಂದ 80 ರಷ್ಟು ಮಕ್ಕಳನ್ನು ಕುರಿ ತುಂಬಿಸುವ ರೀತಿ ತುಂಬಿಸಿ ಪಾಠ ಹೇಳಲಾಗುತ್ತಿದೆ. ಕೊಠಡಿಯ ಕೊರತೆಯೂ ಕೂಡ ಇದೆ. ವರ್ಷದಲ್ಲಿ ಇಂತಿಷ್ಟು ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚಲಾಗಿದೆ ಎಂದು ಕಾದು ಕುಳಿತಂತೆ ಮಾಹಿತಿ ನೀಡುವ ಅಧಿಕಾರಿಗಳು ಮಕ್ಕಳಿದ್ದರೂ ಸರಿಯಾದ ಸೌಕರ್ಯ ನೀಡದೆ ಇರುವುದು ದುರಂತವೇ ಸರಿ.

ಮಂಗಳೂರಿಗೆ ಯಾರೂ ತರದ ಅನುದಾನ ತಂದಿರುವುದಾಗಿ ಬೀಗುವ ಶಾಸಕ ವೇದವ್ಯಾಸ ಕಾಮತ್ ಕ್ಷೇತ್ರದಲ್ಲಿಯೇ ಸರಕಾರಿ ಶಾಲೆ ಬೀಳುವ ಸ್ಥಿತಿಯಲ್ಲಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ತಿಂಗಳಿಗೊಮ್ಮೆ ಮಂಗಳೂರಿಗೆ ದೌಡಾಯಿಸುವ ಶಿಕ್ಷಣ ಸಚಿವರು ಬೆಂಗರೆಯ ಕನ್ನಡ ಮಾಧ್ಯಮ ಶಾಲೆಯ ದುರಂತ ಕಥೆಯನ್ನು ಕೇಳಬೇಕಾಗಿದೆ. ಸಚಿವರು, ಶಾಸಕರ ಹಿಂದೆ ದೌಡಾಯಿಸುವ ಪೋಟೋ ಶೂಟ್ ಸ್ಥಳೀಯ ರಾಜಕಾರಣಿಗಳು ಇನ್ನಾದರೂ ಮಂತ್ರಿ, ಶಾಸಕರನ್ನು ಸ್ಥಳಕ್ಕೆ ಕರೆಸಿ ಶಾಲೆಯ ಶೋಚನೀಯ ಪರಿಸ್ಥಿತಿಯನ್ನು ಮನವರಿಕೆ ಮಾಡಿ ಕೊಡಬೇಕಾಗಿದೆ. ಅಷ್ಟು ಮಾಡಿ ಪುಣ್ಯ ಕಟ್ಟಿಕೊಳ್ಳಿ ಎಂಬುದು ನಮ್ಮ ಕಾಳಜಿ.