ಅಗಲಿಕೆಗೆ ಎರಡು ವರ್ಷ..ಜಾತಿ-ಧರ್ಮ ಮೀರಿ ಬೆಳೆದ ಝಾಕೀರ್ ಸೂರಲ್ಪಾಡಿ ನೆನಪು ಮಾತ್ರ.

ಕರಾವಳಿ

ಗಂಜಿಮಠ ಗ್ರಾಮ ಪಂಚಾಯತ್ ಸದಸ್ಯರಾಗಿದ್ದ ಆರ್.ಎಸ್.ಝಾಕೀರ್ ಸೂರಲ್ಪಾಡಿ ಕಾಂಗ್ರೆಸ್ಸಿನ ನಿಷ್ಠಾವಂತ ಕಾರ್ಯಕರ್ತ. ಹಗಲು-ರಾತ್ರಿಯೆನ್ನದೆ ಜನರ ಕಷ್ಟ ಕಾರ್ಪಣ್ಯಗಳಿಗೆ,
ಸಾರ್ವಜನಿಕ ಕರೆಗೆ ಸ್ಪಂದಿಸುತ್ತಿದ್ದ ವ್ಯಕ್ತಿ. 15 ವರ್ಷಗಳಿಂದ ಗ್ರಾಮ ಪಂಚಾಯತ್ ಸದಸ್ಯರಾಗಿ, ಸೋಲಿಲ್ಲದ ಸರದಾರನಾಗಿ, ಬಡವರ ಪಾಲಿನ ಬಂಧುವಾಗಿ ಕ್ಷೇತ್ರದಾದ್ಯಂತ ಜನ ಮನ್ನಣೆ ಗಳಿಸಿದ್ದ ಗಂಜಿಮಠ ಗ್ರಾಮ ಪಂಚಾಯತ್ತಿನ ಅಭಿವೃದ್ಧಿಯ ಹರಿಕಾರ. ಪಂಚಾಯತ್ ವ್ಯಾಪ್ತಿಯ ನಂಬರ್ ಒನ್ ಸದಸ್ಯ. ಗ್ರಾ.ಪಂ ಚುನಾವಣೆಯಲ್ಲಿ ಜಿಲ್ಲೆಯಲ್ಲೆ ದಾಖಲೆ ಮಟ್ಟದ ಮತ (1020)ಪಡೆದ ಹೆಗ್ಗಳಿಕೆಗೆ ಪಾತ್ರರಾಗಿದ್ದವರು.

ಚಾಲೆಂಜರ್ಸ್ ಫ್ರೆಂಡ್ಸ್ ಕ್ಲಬ್ ಸೂರಲ್ಪಾಡಿ ಇದರ ಮೂಲಕ ಸಮಾಜ ಸೇವೆಗೆ ಇಳಿದ ಝಾಕೀರ್ ರವರನ್ನು ಅರ್ಹವಾಗಿಯೇ ರಾಜಕೀಯ ರಂಗ ಕೈ ಬೀಸಿ ಕರೆಯಿತು. 2005 ರಿಂದ ಸತತವಾಗಿ ನಾಲ್ಕು ಬಾರಿ ಗಂಜಿಮಠ ಗ್ರಾಮ ಪಂಚಾಯತ್ ಸದಸ್ಯರಾಗಿ, ಮೂರನೇ ಅವಧಿಯಲ್ಲಿ ಗ್ರಾಪಂ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಗಂಜಿಮಠ ಗ್ರಾಪಂ ನಲ್ಲಿ ಜನಪ್ರಿಯ ಜನ ನಾಯಕರಾಗಿದ್ದರು ಝಾಕೀರ್. ದಿನದ 24 ತಾಸು ಬಡವರ ಸೇವೆಗೆ ಹಾಗೂ ತನ್ನ ವ್ಯಾಪ್ತಿಯ ಮತದಾರರ ನೋವು-ನಲಿವುಗಳಿಗೆ ಮೀಸಲಿಟ್ಟ ಅಪರೂಪದ ರಾಜಕಾರಣಿ.

ಝಾಕೀರ್ ಅಗಲಿ ಇಂದಿಗೆ ಎರಡು ವರ್ಷ.ದಿನಾಂಕ 16-01-2022 ರಂದು ನಮ್ಮನ್ನಗಲಿ ಕ್ಷೇತ್ರದ ಜನತೆಗೆ ನೆನಪು ಮಾತ್ರ ಬಿಟ್ಟು ಹೋಗಿದ್ದಾರೆ. ಅವರ ಅಗಲಿಕೆ ಕ್ಷೇತ್ರದ ಜನತೆಗೆ ಅಪಾರ ನೋವನ್ನು ತಂದಿದೆ. ಈವರೆಗೂ ಅವರ ಸ್ಥಾನವನ್ನು ತುಂಬಬಲ್ಲ ಇನ್ನೊಬ್ಬ ಸಮರ್ಥ ಅಭ್ಯರ್ಥಿ ಕ್ಷೇತ್ರಕ್ಕೆ ದೊರಕಲಿಲ್ಲ.

ತನ್ನ ರಾಜಕೀಯ ಜೀವನದಲ್ಲಿ ಜಾತಿ-ಧರ್ಮ, ಮತ-ಬೇಧ ಮರೆತು ಸಮಾಜದ ಪ್ರತಿಯೊಬ್ಬ ನಾಗರಿಕರ ಸಮಸ್ಯೆಗಳಿಗೆ ಸ್ಪಂದಿಸಿದ ಕ್ರೀಯಾಶೀಲ, ನಗು ಮುಖದ ಯುವ ನಾಯಕ ರಾಗಿದ್ದರು.

ಝಾಕೀರ್ ನಿನ್ನ ನಗು ಮುಖ, ಹಂಗು ಬಿಮ್ಮಿಲ್ಲದ ಸ್ವಭಾವ, ಕಿಂಚಿತ್ತು ಇಲ್ಲದ ಜಾತಿ-ಭೇದ-ಕೋಮುವಾದ, ಹೃದಯವಂತಿಕೆ, ತಾಳ್ಮೆಯ ಸ್ವಭಾವ ನಿನ್ನನ್ನು ಅಷ್ಟೂ ಎತ್ತರಕ್ಕೆ ಬೆಳೆಸಿತು. ಝಾಕೀರ್ ರವರ ಪರಲೋಕ ಜೀವನ ವಿಜಯಿಗೊಳಿಸಲಿ ಎಂದು ಜಾತಿ-ಧರ್ಮದ ಸಂಕೋಲೆಯನ್ನು ಕಳಚಿ ಪರಮಾತ್ಮನಲ್ಲಿ ನಾವೆಲ್ಲ ಪ್ರಾರ್ಥಿಸೋಣ.