ಸಮಾಜಕ್ಕೆ ಅಂಟಿದ ಕೋಮು ಖಾಯಿಲೆ ಗುಣವಾಗುವುದಾದರೂ ಹೇಗೆ.?
✍️. ನವೀನ್ ಸೂರಿಂಜೆ ಪತ್ರಕರ್ತ
ಅನಂತ ಕುಮಾರ್ ಹೆಗಡೆ ವಿರುದ್ದ ಕುಮಟಾ ಪೊಲೀಸರು IPC ಸೆಕ್ಷನ್ 1860 (U/s-153,153A,505(2) ಅಡಿಯಲ್ಲಿ ಸುಮೊಟೋ ಎಫ್ಐಅರ್ ದಾಖಲಿಸಿದ್ದಾರೆ. ಇದೊಂದು ಪೊಲೀಸರ ತಿಪ್ಪೆ ಸಾರಿಸುವ ಕೆಲಸವಷ್ಟೆ ! ಇದೇ ಭಾಷಣದಲ್ಲಿ ಅನಂತ ಕುಮಾರ್ ಹೆಗಡೆ ಮುಖ್ಯಮಂತ್ರಿ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ ಎಂದು ಸಚಿವರುಗಳು, ಕಾಂಗ್ರೆಸ್ ನಾಯಕರು ವಿಡಿಯೋ ಮೂಲಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕಾಂಗ್ರೆಸ್ ನ ಸಚಿವರು ಮತ್ತು ನಾಯಕರುಗಳಿಗೆ ನಿಜವಾಗಿಯೂ ಬದ್ಧತೆ ಇದ್ದರೆ ಮೈಕ್ ನಲ್ಲಿ ಮಾತಾಡೋದು ಬಿಟ್ಟು ಅನಂತ್ ಕುಮಾರ್ ಹೆಗಡೆ ವಿರುದ್ದ ಸರಿಯಾದ ರೀತಿಯ ಎಫ್ಐಆರ್ ದಾಖಲಿಸಲು ಪೊಲೀಸರಿಗೆ ಸೂಚಿಸಬೇಕು.
ಅನಂತ ಕುಮಾರ್ ಹೆಗಡೆಯ ಹೇಳಿಕೆಯನ್ನು ಉಲ್ಲೇಖಿಸಿ ಎಫ್ಐಆರ್ ಮಾಡುವುದಾದರೆ ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆಗೆ ಯೋಗ್ಯವಾದ ಸೆಕ್ಷನ್ ಗಳನ್ನು ಹಾಕಬಹುದು. ಆದರೆ ಜೆಎಂಎಫ್ ಸಿ ನ್ಯಾಯಾಲಯಕ್ಕೆ ಹಾಜರಾಗದೇ ಸುಲಭವಾಗಿ ನಿರೀಕ್ಷಣಾ ಜಾಮೀನು ದೊರೆಯುವ ರೀತಿಯಲ್ಲಿ ಎಫ್ಐಆರ್ ಹಾಕಿ ಪೊಲೀಸರು ಕೈತೊಳೆದುಕೊಂಡಿದ್ದಾರೆ.
ಭಾರತ ಸರ್ಕಾರದ ಪುರಾತತ್ವ ಇಲಾಖೆ ಮತ್ತು ರಾಜ್ಯದ ಸರ್ಕಾರದ ವರ್ಕ್ಫ್ ಇಲಾಖೆಯ ಅಧೀನದಲ್ಲಿ ಬರುವ ಹಲವು ಮಸೀದಿಗಳ ಹೆಸರುಗಳನ್ನು ಉಲ್ಲೇಖಿಸಿ ಅಂತಹ ಮಸೀದಿಗಳನ್ನು ಒಡೆದು ಹಾಕಲು ಕರೆ ನೀಡುವುದು ಎಂದರೆ ಭಾರತ ಸರ್ಕಾರದ ವಿರುದ್ದ ಯುದ್ದ ಸಾರಲು ಪ್ರಚೋದನೆ ನೀಡಿದಂತಾಗಿದೆ. ಅನಂತ ಕುಮಾರ್ ಹೆಗಡೆ ಪುರಾತತ್ವ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಶ್ರೀರಂಗಪಟ್ಟಣ ದೊಡ್ಡ ಮಸೀದಿಯನ್ನು ಒಡೆಯಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. “ರಣಭೈರವ ಎದ್ದಿದ್ದಾನೆ. ಇನ್ನು ಯಾರಿಗೂ ತಡೆಯಲು ಸಾಧ್ಯವಿಲ್ಲ” ಎಂದಿದ್ದಾರೆ. ಹಾಗಾಗಿ ಜೀವಾವಧಿ ಶಿಕ್ಷೆಗೆ ಅರ್ಹವಾಗಿರುವ IPC ಸೆಕ್ಷನ್ 121 ಅಡಿಯಲ್ಲಿ ಅನಂತ್ ಕುಮಾರ್ ವಿರುದ್ದ ಎಫ್ಐಆರ್ ದಾಖಲಿಸಿಕೊಳ್ಳಬೇಕು.
ಅನಂತ್ ಕುಮಾರ್ ಹೆಗಡೆಯು ಧಾರ್ಮಿಕ ನಂಬಿಕೆಯನ್ನು ಉದ್ದೇಶಪೂರ್ವಕ ಘಾಸಿಗೊಳಿಸಿದ್ದರಿಂದ IPC 295 A ಯನ್ನು ದಾಖಲಿಸಲೇಬೇಕಿತ್ತು. ಹೆಗಡೆಯ ಪ್ರತೀ ವಾಕ್ಯಕ್ಕೂ IPC 124 A, 153 A, 153B, 505, 505(2) ಅಡಿಯಲ್ಲಿ ಸೆಕ್ಷನ್ ದಾಖಲಿಸಲೇಬೇಕು
ಅದಲ್ಲದೇ, ಮಸೀದಿಗಳು ದೇವಸ್ಥಾನ ಆಗಿತ್ತು ಎಂದು ಹಲವು ಮಸೀದಿ ಮತ್ತು ಹಿಂದೂ ದೇವರ ಹೆಸರನ್ನು ಉಲ್ಲೇಖಿಸಿ “ಸಂಕೇತಗಳು ಇವೆ” ಎಂದು ಅನಂತ್ ಕುಮಾರ್ ಹೆಗಡೆ ಹೇಳಿದ್ದಾರೆ. ಈ ಕೃತ್ಯಗಳನ್ನು ಮಾಡಲು ಅವರ ಬಳಿ ಇರುವ ದಾಖಲೆ/ಸಾಹಿತ್ಯ/ಪುಸ್ತಕಗಳು ಯಾವುದು ಎಂಬುದನ್ನೂ ವಶಪಡಿಸಿಕೊಂಡು ತನಿಖೆಗೆ ಒಳಪಡಿಸಿಕೊಳ್ಳಬೇಕು. ಹಾಗಾಗಿ ಮೇಲ್ಕಂಡ ಐಪಿಸಿ ಸೆಕ್ಷನ್ ಗಳ ಜೊತೆ CrPc 95 ಅನ್ನೂ ಅಳವಡಿಸಿಕೊಳ್ಳಬೇಕು.
ಹಾಗಾಗಿ ಕೇವಲ ಮೂರು ಸೆಕ್ಷನ್ ಗಳ ಎಫ್ಐಆರ್ ಅನ್ನು ಹಾಕಿ ಸುಮ್ಮನೆ ಕುಳಿತಿರುವ ಕುಮುಟಾ ಪೊಲೀಸರು, ಎಫ್ಐಅರ್ ಗೆ ಅಡಿಷನಲ್ ಸೆಕ್ಷನ್ ಗಳನ್ನು ಸೇರಿಸಬೇಕು. IPC 121, 295A, 124 A, 153 A, 153B, 505, 505(2) ಜೊತೆಗೆ CrPc 95 ಅಡಿಯಲ್ಲಿ ಸೆಕ್ಷನ್ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು. ಇಲ್ಲದೇ ಇದ್ದರೆ ಕಲ್ಲಡ್ಕ ಪ್ರಭಾಕರ್ ಭಟ್ ಎದೆನೋವೆಂದು ಎರಡು ವರ್ಷ ಹಳೆಯ ದಾಖಲೆ ನೀಡಿ ನಿರೀಕ್ಷಣಾ ಮಧ್ಯಂತರ ಜಾಮೀನು ಪಡೆದುಕೊಂಡಂತೆ, ಹೆಗಡೆಯೂ ಹಳೆ ಖಾಯಿಲೆಯ ದಾಖಲೆ ನೀಡಿದಾಕ್ಷಣ ಸುಲಭವಾಗಿ ನಿರೀಕ್ಷಣಾ ಜಾಮೀನು ದೊರಕುತ್ತದೆ. ಹೀಗಾದರೆ ಸಮಾಜಕ್ಕೆ ಅಂಟಿದ ಕೋಮು ಖಾಯಿಲೆ ಗುಣವಾಗುವುದಾದರೂ ಹೇಗೆ ?