ಜಿಲ್ಲಾಢಳಿತದ ಮೌನದ ಹಿಂದಿನ ಮರ್ಮ.?
ದಕ್ಷಿಣ ಕನ್ನಡ ಜಿಲ್ಲೆ ಶಿಕ್ಷಣ, ಕೋಮು ದ್ವೇಷದಲ್ಲಿ ಯಾವ ರೀತಿ ಹೆಸರುವಾಸಿಯೋ ಅದೇ ರೀತಿ ಅಕ್ರಮ ಪಾಲುಗಾರಿಕೆಯಲ್ಲೂ ತನ್ನದೇ ಆದ ಕಬಂಧ ಬಾಹುಗಳನ್ನು ವಿಸ್ತರಿಸಿಕೊಂಡಿದೆ. ಚುನಾವಣಾ ಸಮಯದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರು ರಣರಂಗದಲ್ಲಿ ಹೋರಾಡಿದವರಂತೆ ಕಾಣಸಿಗುತ್ತಾರೆ. ನಾಯಕರ ಮಾತು ಕೇಳಿ ಕೇಸ್, ಜೈಲು ಪಾಲಾದ ಘಟನೆಗಳೂ ಇದೆ. ಆದರೆ ಚುನಾವಣಾ ಮುಗಿದ ನಂತರ ಕಾರ್ಯಕರ್ತರನ್ನು ಮೂಸಿ ನೋಡುವವರಿಲ್ಲ. ಆದರೆ ನಾಯಕರು, ಅವರ ಚೇಲಾಗಳು ಧೋ ನಂಬರ್ ದಂಧೆಯಲ್ಲಿ ಸದಾ ಬ್ಯುಸಿಯಾಗಿರುತ್ತಾರೆ.
ವಿಶೇಷತೆ ಎಂದರೆ ಕಾರ್ಯಕರ್ತರನ್ನು ಹುರಿದುಂಬಿಸಿ ಫೀಲ್ಡಿಗೆ ಬಿಡುವ ನಾಯಕರು ಚುನಾವಣಾ ನಂತರ ತಮ್ಮ ಎದುರಾಳಿಗಳ ಜೊತೆಗೆ ಪಾಲುದಾರಿಕೆಯಲ್ಲಿ ತೊಡಗಿ ಅಕ್ರಮ ವ್ಯವಹಾರ ನಡೆಸುತ್ತಾರೆ. ಇಂದು ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಅಕ್ರಮ ಅಡ್ಡೆಗಳಲ್ಲಿ ಒಂದಾಗಿರುವ ಅಕ್ರಮ ಮರಳುಗಾರಿಕೆಯಲ್ಲಿ ಕಾಂಗ್ರೆಸ್-ಬಿಜೆಪಿಗರು ಭಾಯಿ ಭಾಯಿ ಸಂಬಂಧ ಹೊಂದಿದ್ದಾರೆ. ಅದು ಫಲ್ಗುಣಿ, ನೇತ್ರಾವತಿ, ಶಾಂಭವಿ, ನಂದಿನಿ,ಪಾವಂಜೆ ನದಿ ತಟಗಳಲ್ಲಿ ನಡೆಯುವ ಅಕ್ರಮ ಪಾಲುದಾರಿಕೆಯಲ್ಲಿ ಎರಡೂ ಪಕ್ಷಗಳ ನಾಯಕರು ಸಮಾನ ವ್ಯವಹಾರ ಹೊಂದಿದ್ದಾರೆ. ಈ ಅಕ್ರಮಕೋರರಿಗೆ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಇವರ ವ್ಯವಹಾರಕ್ಕೇನೂ ಅಡ್ಡಿ ಇಲ್ಲ. ಕೋಮಿನಲ್ಲಿ ಇಲ್ಲದ ಸೌಹಾರ್ಧತೆ, ಅಕ್ರಮದಲ್ಲಿ ಸೌಹಾರ್ದತೆ ಮೆರೆಯುತ್ತಿರುವುದು ಮಾತ್ರ ಸತ್ಯ.
ದ.ಕ ಜಿಲ್ಲೆಯಲ್ಲಿ ಮರಳುಗಾರಿಕೆಗೆ ನಿರ್ದಿಷ್ಟ ಕಾನೂನುಗಳಿವೆ. ಎಲ್ಲೆಂದರಲ್ಲಿ ಮರಳು ತೆಗೆಯಲು ಅವಕಾಶ ಇಲ್ಲ. ಅನುಮತಿ ಇದ್ದರೂ ಜೆಸಿಬಿ, ಹಿಟಾಚಿ ಯಂತ್ರ ಬಳಸುವಂತಿಲ್ಲ. ಆದರೆ ಈ ಕಾನೂನು ಕೇವಲ ಪುಸ್ತಕದ ಬದನೆಕಾಯಿ ಆಗಿದೆಯೇ ಹೊರತು ಯಾರೂ ಪಾಲಿಸುತ್ತಿಲ್ಲ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು, ಸ್ಥಳೀಯ ಪೊಲೀಸ್ ಇಲಾಖೆಗೆ ಇಂತಿಷ್ಟು ಮಾಮೂಲು ಫಿಕ್ಸ್ ಆಗಿಯೇ ಈ ದಂಧೆ ನಿರಾಂತಕವಾಗಿ ನಡೆಯುತ್ತಿದೆ. ಒಮ್ಮೊಮ್ಮೆ ಮೇಲಾಧಿಕಾರಿಗಳ ಗಮನಕ್ಕೆ ಬಂದು ರೈಡ್ ನಾಟಕ ನಡೆಯುತ್ತಿದೆ ಅಷ್ಟೇ. ಸ್ಥಳೀಯ ಪೊಲೀಸ್ ಇಲಾಖೆ ಅಕ್ರಮಕೋರರಿಗೆ ಸಾಥ್ ನೀಡಿ ಬಚಾವ್ ಕೂಡ ಮಾಡುವುದಿದೆ.
ಪ್ರಾಕೃತಿಕ ಸಂಪತ್ತು ಅನ್ನುವುದು ಇತ್ತೀಚೆಗೆ ರಾಜಕಾರಣಿಗಳು ಹಾಗೂ ಅವರ ಚೇಲಾಗಳಿಗೆ ದೋಚುವ ಕಾಯಕವಾಗಿ ಬಿಟ್ಟಿದೆ. ರಾಜಕಾರಣಿಗಳ ಕೃಪಾಕಟಾಕ್ಷ ಇರುವುದರಿಂದ ಅಕ್ರಮಕೋರರು ರಾಜಾರೋಷವಾಗಿಯೇ ದಂಧೆ ನಡೆಸುತ್ತಾರೆ. ಫಲ್ಗುಣಿ, ನೇತ್ರಾವತಿ ನಂದಿನಿ, ಶಾಂಭವಿ,ಪಾವಂಜೆ ನದಿಯ ತಟಗಳು ಮರಳುಗಾರಿಕೆಯ ಅಕ್ರಮ ಅಡ್ಡೆಯ ಪ್ರಯೋಗ ಶಾಲೆಯಾಗಿ ಬಿಟ್ಟಿದೆ.
ಇನ್ನು ಮೂಲ್ಕಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಕ್ರಮ ದಂಧೆಯ ಬಗ್ಗೆ ಹೇಳಿ ಪ್ರಯೋಜನವಿಲ್ಲ. ಇಲ್ಲಿ ಇಲಾಖೆಗಳೇ ಅಕ್ರಮಕೋರರಿಗೆ ಸಾಥ್ ನೀಡುತ್ತಿದೆ. ಇಲ್ಲಿಯ ಖಾಕಿ ಪೋಲಿ(ಸ)ನೊಬ್ಬ ಅಕ್ರಮ ಮಾಪಿಯಾ ದಂಧೆಕೋರರಿಗೆ ಖಭರಿಯಾಗಿ ಕೆಲಸ ಮಾಡಿ, ಇಲಾಖೆಯ ಸಂಬಳ ತಿಂದು, ಸರಕಾರದ ಖಜಾನೆಗೆ ದೋಖಾ ಮಾಡುತ್ತಿದ್ದಾನೆ. ಇಲ್ಲಿನ ಶಾಂಭವಿ ಇನ್ನಿತರ ನದಿ ಭಾಗಗಳಲ್ಲಿ ಅಕ್ರಮ ಮರಳುಗಾರಿಕೆಯ ಅಡ್ಡೆಯಾಗಿ ಮಾರ್ಪಟ್ಟಿದೆ.
ಇಂತಹ ಅಕ್ರಮಕೋರರ ವಿರುದ್ಧ ಮಾಹಿತಿ ನೀಡಿದವರ ಮೇಲೆಯೇ ಕೆಲವೊಮ್ಮೆ ವೈಯಕ್ತಿಕ ದಾಳಿ ನಡೆಯುವ ಸಂಗತಿಗಳೂ ಇವೆ. ಒಟ್ಟಾರೆ ಅಕ್ರಮ ವ್ಯವಹಾರದಲ್ಲಿ ಪ್ರಮುಖ ಎರಡು ರಾಜಕೀಯ ಪಕ್ಷಗಳ ನಾಯಕರ ಭಾಯಿ ಭಾಯಿ ಸಂಬಂಧದಿಂದಾಗಿ ಪ್ರಶ್ನಿಸುವವರೇ ಇಲ್ಲವಾಗಿದೆ.
ಅಕ್ರಮ ಮರಳುಗಾರಿಕೆಯಿಂದ ಜಿಲ್ಲೆಗಾದ ನಷ್ಟ ಅಷ್ಟಿಷ್ಟಲ್ಲ. ಮೂಲರಪಟ್ನ ದಲ್ಲಿ ಸೇತುವೆ ಕುಸಿಯಲು ಮುಖ್ಯ ಕಾರಣವೇ ಅಕ್ರಮ ಮರಳುಗಾರಿಕೆ. ಸೇತುವೆ ತಳಭಾಗದಲ್ಲಿ ಮರಳು ತೆಗೆದ ಪರಿಣಾಮ ಸೇತುವೆಯೇ ಕುಸಿದುಬಿದ್ದಿತ್ತು. ಇದರ ಪರಿಣಾಮ ಈ ಭಾಗದ ಜನತೆ ಎರಡರಿಂದ ಮೂರು ವರ್ಷಗಳ ಕಾಲ ನಗರದ ಸಂಪರ್ಕ ವಂಚಿತರಾಗಿ ಮೂಲರಪಟ್ನದ ಸಂಪರ್ಕಕ್ಕಾಗಿ ಪರದಾಡುವ ಪರಿಸ್ಥಿತಿ ಬಂದು ಸುತ್ತು ಬಳಸಿ ಪ್ರಯಾಣಿಸುವ ಸ್ಥಿತಿ ನಿರ್ಮಾಣವಾಗಿತ್ತು.
ಇನ್ನು ಮೂಲ್ಕಿಯ ಕಥೆ ಇದಕ್ಕಿಂತ ಭಿನ್ನವಾಗಿಯೇನೂ ಇಲ್ಲ. ಇಲ್ಲಿಯ ಶಾಂಭವಿ ನದಿಯ ತಳಭಾಗದಲ್ಲಿ ಅಕ್ರಮ ಮರಳುಗಾರಿಕೆ ನಡೆಸುತ್ತಿರುವ ಪರಿಣಾಮ ಕೊಂಕಣ ರೈಲ್ವೆಯ ಸೇತುವೆಗೂ ಅಪಾಯ ಕಟ್ಟಿಟ್ಟ ಬುತ್ತಿ.! ಕೆಲವು ಸಮಯಗಳ ಹಿಂದೆ ವಿಮಾನ ನಿಲ್ದಾಣ ಸಂಪರ್ಕದ ಮರವೂರು ಸೇತುವೆ ಕೂಡ ಕಂಪಿಸಿ ವಾಲಿತ್ತು. ಇದಕ್ಕೆಲ್ಲಾ ಅಲ್ಲಿ ನಡೆಸುತ್ತಿದ್ದ ಅಕ್ರಮ ಮರಳುಗಾರಿಕೆಯೇ ಕಾರಣವಾಗಿತ್ತು. ಅದೇ ರೀತಿ ಅಡ್ಯಾರಿನಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಯಿಂದಾಗಿ ಇಲ್ಲಿನ ಡ್ಯಾಮಿಗೂ ಅಪಾಯದ ಸ್ಥಿತಿ ಬರಲಿದೆ. ಡ್ಯಾಂ ಬಿರುಕುಬಿಟ್ಟರೆ ಬಲು ದೊಡ್ಡ ಗಂಢಾತರಕ್ಕೆ ಕಾರಣವಾಗಬಹುದು. ಅಕ್ರಮ ಮರಳುಗಾರಿಕೆಯಿಂದ ಜಿಲ್ಲೆಯಲ್ಲಿ ಅಂತರ್ಜಲ ಕುಸಿದು, ಜಲಕ್ಷಾಮ ಉಂಟಾಗುವ ಅಪಾಯವು ಎದುರಾಗಬಹುದು. ಈ ಅಕ್ರಮ ಮರಳುಗಾರಿಕೆ ಇಡೀ ಜಿಲ್ಲೆಯನ್ನೇ ವಿನಾಶದ ಅಂಚಿಗೆ ತಲುಪಿಸುತ್ತಿದೆ. ಇನ್ನಾದರೂ ಅಧಿಕಾರಿಗಳು ಗಾಢ ನಿದ್ರೆಯಿಂದ ಎಚ್ಚೆತ್ತು ಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಕಬೇಕಾಗಿದೆ.