ಮೂಲ್ಕಿ: ಇಸ್ಪೀಟ್ ಅಡ್ಡೆಗೆ ಸಿಸಿಬಿ ಪೊಲೀಸರ ದಾಳಿ; ಲಕ್ಷಾಂತರ ರೂ. ವಶ

ಕರಾವಳಿ

ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯು ಧೋ ನಂಬರ್ ದಂಧೆಯ ಪರಮ ಅಡ್ಡೆಯಾಗಿ ಮಾರ್ಪಟ್ಟಿದ್ದು, ಇಲ್ಲಿ ಮರಳು, ಇಸ್ಪೀಟ್ ಇನ್ನಿತರ ಧೋ ನಂಬರ್ ದಂಧೆಯು ನಿರಾಂತಕವಾಗಿ ನಡೆಯುತ್ತಿರುತ್ತದೆ. ಇದನ್ನು ಸಂಬಂಧಪಟ್ಟ ಇಲಾಖೆಗೆ ತಿಳಿಸಿ ಮಟ್ಟ ಹಾಕಬೇಕಾದ ಪೊಲೀಸಪ್ಪನೊಬ್ಬ ದಂಧೆಯ ಬೆಂಬಲಕ್ಕೆ ನಿಂತಿರುವುದು ಮೂಲ್ಕಿಯ ಪೊಲೀಸ್ ಠಾಣೆಗೆ ಶೋಭೆ ತರುವಂತದಲ್ಲ.

ಇದೀಗ ಮಂಗಳೂರಿನ ಸಿಸಿಬಿ ಪೊಲೀಸರು ಕಿಲ್ಪಾಡಿ ಭಂಡಸಾಲೆ ಎಂಬಲ್ಲಿ ಮನೆಯೊಂದರಲ್ಲಿ ಮಧ್ಯರಾತ್ರಿ ನಡೆಯುತ್ತಿದ್ದ ಹೈಟೆಕ್ ಇಸ್ಪೀಟ್ ಅಡ್ಡೆಗೆ ದಾಳಿ ನಡೆಸಿ 29 ಮಂದಿಯನ್ನು ವಶಕ್ಕೆ ಪಡೆದು ದಂಧೆಗೆ ಪಣವಾಗಿರಿಸಿದ್ದ 1,75,450 ರೂ. ಹಾಗೂ ದಂಧೆಗೆ ಬಳಸಿದ್ದ ಇಸ್ಪೀಟ್ ಎಲೆ, ಟೇಬಲ್, ಕುರ್ಚಿ ಮತ್ತಿತರ ಸೊತ್ತುಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ ಘಟನೆ ನಡೆದಿದೆ.

ಪ್ರಕರಣದ ಪ್ರಧಾನ ಆರೋಪಿ ಕಿಲ್ಪಾಡಿಯ ರೆಹಮಾನ್, ನಿತ್ಯಾನಂದ, ವಿಲ್ಫ್ರೆಡ್ ಈ ದಂಧೆಯ ರೂವಾರಿಗಳಾಗಿದ್ದು ನಿತ್ಯಾನಂದ ಮತ್ತು ರೆಹಮಾನ್ ಪೊಲೀಸ್ ದಾಳಿ ವೇಳೆ ತಪ್ಪಿಸಿಕೊಂಡಿದ್ದಾರೆ. ಶೀಘ್ರ ಬಂಧಿಸುವುದಾಗಿ ಮೂಲ್ಕಿ ಪೊಲೀಸರು ತಿಳಿಸಿದ್ದಾರೆ.