ಬಂಟ್ವಾಳ ವಗ್ಗ ಸಮೀಪ ದರೋಡೆ ಪ್ರಕರಣ: ಚಿನ್ನಾಭರಣದೊಂದಿಗೆ ಆರೋಪಿಗಳನ್ನು ಬಂಧಿಸಿದ ದ.ಕ.ಜಿಲ್ಲಾ ಪೊಲೀಸರ ತಂಡ

ಕರಾವಳಿ

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ವಗ್ಗ ಸಮೀಪದ ಮೇನಾಡು ಎಂಬಲ್ಲಿ ಜ.11ರಂದು ಮುಂಜಾನೆ ತಾಯಿ, ಮಗಳಿಗೆ ಚಾಕು ತೋರಿಸಿ ಚಿನ್ನಾಭರಣಗಳನ್ನು ದರೋಡೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಿ, ಆರೋಪಿಗಳ ಪತ್ತೆಗಾಗಿ ರಚಿಸಲಾಗಿದ್ದ ವಿಶೇಷ ತನಿಖಾ ತಂಡವು, ಕಾರ್ಕಳ ತಾಲೂಕಿನ ಮಾಳ ಗ್ರಾಮದ ಗಣೇಶ ನಾಯ್ಕ, ದಿನೇಶ್‌ ನಾಯ್ಕ, ಸಾಗರ ಶೆಟ್ಟಿ ಮಂಗಳೂರು, ಐಕಳ ಗ್ರಾಮದ ರಾಕೇಶ್‌ ಎಲ್.‌ ಪಿಂಟೋ,ಕಡಬದ ಎಂ.ಸೀತಾರಾಮ ಯಾನೆ ಪ್ರವೀಣ್‌, ಸುಧೀರ್‌ ಹಾಗೂ ದರೋಡೆಗೈದ ಚಿನ್ನಾಭರಣವನ್ನು ಸ್ವೀಕರಿಸಿದ ಪ್ರಸ್ತುತ ಚಿಕ್ಕಮಗಳೂರು ಜಿಲ್ಲೆ ನಿವಾಸಿ ಮಹಮ್ಮದ್‌ ಹನೀಫ್‌ ಎಂಬವರುಗಳನ್ನು ವಶಕ್ಕೆ ಪಡೆದು, ಆರೋಪಿಗಳಿಂದ ಕದ್ದ ಚಿನ್ನಾಭರಣ ಹಾಗು ದರೋಡೆಗೆ ಬಳಸಿದ ಇನ್ನೋವಾ ಮತ್ತು ಅಂದಾಜು ಟಾಟಾ ಇಂಡಿಕಾ ಕಾರುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ..

ದ.ಕ ಜಿಲ್ಲಾ ಪೊಲೀಸ್‌ ಅಧೀಕ್ಷಕರಾದ ಸಿ ಬಿ ರಿಷ್ಯಂತ್‌ ರವರ ಮಾರ್ಗದರ್ಶನದಲ್ಲಿ, ಪೊಲೀಸ್ ಅಧೀಕ್ಷಕರುಗಳಾದ ಧರ್ಮಪ್ಪ, ರಾಜೇಂದ್ರ, ಎಸ್.‌ ವಿಜಯಪ್ರಸಾದ್ ರವರ ನೇತೃತ್ವದಲ್ಲಿ ಬಂಟ್ವಾಳ‌ ಗ್ರಾಮಾಂತರ ಪೊಲೀಸ್‌ ಠಾಣಾ ಪೊಲೀಸ್ ನಿರೀಕ್ಷಕರಾದ ಶಿವಕುಮಾರ ಬಿ, ನಂದಕುಮಾರ್‌, ಪಿ.ಎಸ್.ಐ. ಪುಂಜಾಲಕಟ್ಟೆ, ಹರೀಶ ಎಂ.ಆರ್.‌ ಪಿ.ಎಸ್. ಐ. ಬಂಟ್ವಾಳ ಗ್ರಾಮಾಂತರ ಠಾಣೆ ಇವರ ನೇತ್ರತ್ವದ 3 ವಿಶೇಷ ಪತ್ತೆ ತಂಡಗಳನ್ನು ರಚಿಸಿ, ತನಿಖಾ ತಂಡದಲ್ಲಿ ಎ.ಎಸ್.‌ಐ. ಗಿರೀಶ್‌, ಹೆಚ್.ಸಿ. ಗಳಾದ ಸುಜು, ರಾಧಾಕೃಷ್ಣ, ಉದಯ ರೈ, ಅದ್ರಾಮ, ಪ್ರವೀಣ್‌ ರೈ, ಪ್ರವೀಣ್‌, ಸಂದೀಪ್‌, ರಾಹುಲ್‌, ಇರ್ಷಾದ್‌, ರಾಜೇಶ್‌,‌ ಹರಿಶ್ಚಂದ್ರ, ಪಿ.ಸಿ.ಗಳಾದ ಪುನೀತ್‌, ರಮ್ಜಾನ್‌, ಯೊಗೇಶ್‌ ಡಿ.ಎಲ್, ಕುಮಾರ್‌ ಹೆಚ್.‌ ಕೆ., ವಿನಾಯಕ ಬಾರ್ಕಿ, ಜಗದೀಶ ಅತ್ತಾಜೆ, ಜಮೀರ್‌ ಕಲಾರಿ, ಎ.ಹೆಚ್.ಸಿ.ಗಳಾದ ಕುಮಾರ್‌, ಮಹಾಂತೇಶ್‌, ಜಿಲ್ಲಾ ತಾಂತ್ರಿಕ ವಿಭಾಗದ ದಿವಾಕರ್, ಸಂಪತ್‌ ರವರುಗಳು ಕಾರ್ಯನಿರ್ವಹಿಸಿದ್ದರು.

ಆರೋಪಿಗಳ ಪೈಕಿ ಗಣೇಶ ನಾಯ್ಕ ಎಂಬಾತನು 2023ನೇ ಸಾಲಿನಲ್ಲಿ ಮಂಗಳೂರು ನಗರ ವ್ಯಾಪ್ತಿಯ ಮುಲ್ಕಿಯಲ್ಲಿ ಐಕಳ ಹರೀಶ್‌ ಶೆಟ್ಟಿ ಎಂಬವರ ಮನೆಯಿಂದ ಅಪಾರ ಮೊತ್ತದ ನಗದು, ಚಿನ್ನಾಭರಣ, ವಜ್ರ ಕಳವು ಮಾಡಿದ ಮುಖ್ಯ ಆರೋಪಿಯಾಗಿದ್ದು, ಉಳಿದಂತೆ ಸೀತಾರಾಮ ಯಾನೆ ಪ್ರವೀಣ್‌, ಸುಧೀರ್‌ ಹಾಗೂ ಮಹಮ್ಮದ್‌ ಹನೀಫ್‌ ರವರ ವಿರುದ್ದ ದ.ಕ.ಜಿಲ್ಲೆ ಹಾಗು ಇನ್ನಿತರ ಜಿಲ್ಲೆಗಳಲ್ಲಿ ವಿವಿಧ ಪ್ರಕರಣಗಳು ದಾಖಲಾಗಿರುವ ಬಗ್ಗೆ ತನಿಖೆಯಿಂದ ತಿಳಿದು ಬಂದಿರುತ್ತದೆ.