ಮರ್ಯಾದಾ ಪುರುಷೋತ್ತಮನಿಗಾಗಿ ಕೋಟಿಗಟ್ಟಲೆ ಸುರಿದವರು.. ರಾಮಲಲ್ಲಾ ವಿಗ್ರಹಕ್ಕೆ ಶಿಲಾ ಕಲ್ಲು ಒದಗಿಸಿದ ಗುತ್ತಿಗೆದಾರನ ಸಂಕಷ್ಟಕ್ಕೆ ಮಿಡಿಯಲಿಲ್ಲ..ಹೇ ರಾಮ್.!

ರಾಜ್ಯ

ಇಡೀ ದೇಶದ ಹಿಂದೂಗಳೆಲ್ಲ ಹೊಸ ಮನ್ವಂತರಕ್ಕೆ ಸಾಕ್ಷಿಯಾಗಿದೆ ಅನ್ನುವ ರೀತಿಯಲ್ಲಿ ಖುಷಿಪಟ್ಟಿದ್ದಾರೆ. ಮರ್ಯಾದಾ ಪುರುಷೋತ್ತಮ ಶ್ರೀರಾಮ ಮಂದಿರಕ್ಕೆ ಕೋಟಿ ಕೋಟಿ ದೇಣಿಗೆ ನೀಡಿದವರಿದ್ದಾರೆ. ಇನ್ನು ವಜ್ರದ ಕಿರೀಟ, ಆಭರಣ ಸೇರಿದಂತೆ ದೇಣಿಗೆ ನೀಡಿದ್ದಾರೆ. ಆದರೆ ರಾಮನ ಮೂರ್ತಿಗೆ ಶಿಲಾ ಕಲ್ಲು ಒದಗಿಸಿದ ಮೈಸೂರಿನ ಗುತ್ತಿಗೆದಾರನ ಸಂಕಷ್ಟಕ್ಕೆ ಯಾರೂ ಮಿಡಿದವರಿಲ್ಲ. ರಾಮನ ಹೆಸರೇಳಿ ರಾಜಕಾರಣ ಮಾಡುವವರು ಈ ಕುಟುಂಬದತ್ತ ಕಣ್ಣು ಹಾಯಿಸುತ್ತಿಲ್ಲ. ಕೇವಲ ತೋರಿಕೆಗಾಗಿ ಕೋಟಿ ಕೊಡುವವರು ಈ ಬಡಪಾಯಿಯ ಸಂಕಷ್ಟಕ್ಕೆ ಮಿಡಿಯದೆ ಇದ್ದರೆ ಶ್ರೀ ರಾಮ ಮೆಚ್ಚುವನೇ?

ಅಯೋಧ್ಯೆಯ ಶ್ರೀರಾಮ ಕ್ಷೇತ್ರದಲ್ಲಿ ಹೇಗೋ ರಾಮಲಲ್ಲಾ ಮೂರ್ತಿಯ ಪ್ರಾಣಪ್ರತಿಷ್ಠಾಪಣೆಯಾಗಿದೆ. ಇಡೀ ವಿಶ್ವದ ಹಿಂದೂಗಳೆಲ್ಲಾ ಹೆಮ್ಮೆ ಪಟ್ಟಿದ್ದಾರೆ, ಕಣ್ಣು ತೆರೆದ ರಾಮಲಲ್ಲಾನನ್ನು ಕಂಡು ಸಂತಸಗೊಂಡಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ ರಾಮಲಲ್ಲಾ‌ ಮೂರ್ತಿ ಕೆತ್ತಲು ಕಲ್ಲು ನೀಡಿದ ಗುತ್ತಿಗೆದಾರನ ಸಂಕಷ್ಟ ಬೆಳಕಿಗೆ ಬಂದಿದೆ.

ಖಾಸಗಿ ಮಾಧ್ಯಮವೊಂದು ಮಾಡಿರುವ ಚಿಟ್ ಚಾಟ್ ನಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ. ಗುತ್ತಿಗೆದಾರ ಶ್ರೀನಿವಾಸ್ ರಾಮಶಿಲೆ ನೀಡಿದ್ದಾರೆ. ಭೂ ಮಾಲೀಕ ರಾಮದಾಸ್ ಅವರು ತನ್ನ ಭೂಮಿಯ ಒಳಗಿದ್ದ ಬಂಡೆ ತೆಗೆಯುವಂತೆ ಶ್ರೀನಿವಾಸ್ ಅವರಿಗೆ ಗುತ್ತಿಗೆ ನೀಡಿದ್ದರಂತೆ. ಆ ಬಂಡೆಯನ್ನು ಹೊರತೆಗೆದು ಜಮೀನಿನ ಪಕ್ಕದಲ್ಲಿಯೇ ಇಟ್ಟಿದ್ದರಂತೆ. ಅದೇ ವೇಳೆ ಸ್ಥಳಕ್ಕೆ ಬಂದ ಅಧಿಕಾರಿಗಳು ಗಣಿಗಾರಿಕೆ ಅಂತ ಹೇಳಿ 80 ಸಾವಿರ ರೂಪಾಯಿ ದಂಡ ಹಾಕಿದ್ದಾರಂತೆ. ಮೈಸೂರಿನ ಹಾರೋಹಳ್ಳಿ-ಗುಜ್ಜೆಗೌಡನಪುರ ಗ್ರಾಮದ ನಿವಾಸಿಯಾಗಿರುವ ಗುತ್ತಿಗೆದಾರ ಶ್ರೀನಿವಾಸ್ ಆ ದಂಡವನ್ನು ಕಟ್ಟಿದ್ದಾರಂತೆ.

ಶ್ರೀನಿವಾಸ್ ತನ್ನ ಹೆಂಡತಿಯ ಒಡವೆಯನ್ನು ಅಡವಿಟ್ಟು ಹಣ ಒದಗಿಸಿದ್ದರಂತೆ. ಅಂದು ದಂಡ ಕಟ್ಟಿದ್ದ ಶಿಲೆ ಇಂದು ರಾಮಲಲ್ಲಾನ ಮೂರ್ತಿಯಾಗಿದೆ. ಆದರೆ ಈ ವಿಚಾರಕ್ಕೆ ಸಂಬಂಧಿಸಿದಂತೆ ನನಗೆ ಈವರೆಗೂ ಯಾರೂ ಸಹಾಯ ಮಾಡಿಲ್ಲ. ರಾಮಲಲ್ಲಾ ವಿಗ್ರಹಕ್ಕೆ ಶಿಲೆ ತೆಗೆದುಕೊಟ್ಟ ನನ್ನ ಕಷ್ಟ ಇನ್ನು ತೀರಿಲ್ಲ. ಈಗಲಾದರೂ ಯಾರಾದರೂ ಸಹಾಯ ಮಾಡುತ್ತಾರಾ ಎಂಬ ನಿರೀಕ್ಷೆಯಲ್ಲಿದ್ದೀನಿ ಎಂದು ಗುತ್ತಿಗೆದಾರ ಶ್ರೀನಿವಾಸ್, ಖಾಸಗಿ ಚಾನೆಲ್ ವೊಂದಕ್ಕೆ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.