ಮೂಡಬಿದ್ರೆ ಸ್ವರಾಜ್ ಮೈದಾನ ಬಳಿ ಗಣೇಶ್ ಭಂಡಾರಿ ಎಂಬವರಿಗೆ ಸೇರಿದ ಹೇರ್ ಕಟಿಂಗ್ ಸೆಲೋನಿಗೆ ಮದ್ಯರಾತ್ರಿ ಹೊತ್ತಲ್ಲಿ ಯಾರೋ ಕಳ್ಳರು ಅಂಗಡಿಯ ಹಿಂಬದಿಯ ಗೋಡೆಯನ್ನು ಕೊರೆದು, ಅಂಗಡಿಯ ಒಳಗೆ ಪ್ರವೇಶಿಸಿ, ಅಂಗಡಿಯಲ್ಲಿದ್ದ Sony ಕಂಪನಿಯ LED- T.V ಹಾಗೂ ನಗದು ಹಣವನ್ನು ದೋಚಿಕೊಂಡು ಹೋಗಿರುವ ಬಗ್ಗೆ ಇತ್ತೀಚೆಗೆ ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಬೆನ್ನು ಹತ್ತಿದ ಮೂಡಬಿದ್ರೆ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ, ಮಂಗಳೂರು ನಗರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಹಲವಾರು ಪೊಲೀಸ್ ಠಾಣೆಗಳಲ್ಲಿ ಕಳ್ಳತನ ನಡೆಸಿರುವ ಪ್ರಕರಣದಲ್ಲಿ ಭಾಗಿಯಾಗಿರುವ ಮೂಡಬಿದ್ರೆ ತಾಲೂಕು ಪುಚ್ಚಮೊಗರು ನಿವಾಸಿ ಹರೀಶ್ ಪೂಜಾರಿ ಎಂಬಾತನನ್ನು ವಶಕ್ಕೆ ಪಡೆದು, ಆರೋಪಿಯಿಂದ ಕಳ್ಳತನಕ್ಕೆ ಉಪಯೋಗಿಸಿದ ಹೋಂಡ ಆಕ್ಟಿವಾ ಸ್ಕೂಟರ್ ಹಾಗೂ ಸುಮಾರು 50,000 ರೂ ಮೌಲ್ಯದ Sony LED-T.Vಯನ್ನು ಸ್ವಾಧೀನ ಪಡಿಸಿಕೊಂಡಿರುತ್ತಾರೆ. ಸ್ವಾಧೀನ ಪಡಿಸಿಕೊಂಡ ಸೊತ್ತುಗಳ ಅಂದಾಜು ಮೌಲ್ಯ 1,50,000 ಆಗಿರುತ್ತದೆ.
ಆರೋಪಿ ಹರೀಶ್ ಪೂಜಾರಿ ವಿರುದ್ಧ ಈ ಮೊದಲು ಮೂಡಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2 ಕಳ್ಳತನ ಪ್ರಕರಣಗಳು ದಾಖಲಾಗಿದ್ದು, ಬಜ್ಪೆ, ಕದ್ರಿ, ಬರ್ಕೆ,ಮಂಗಳೂರು ಗ್ರಾಮಾಂತರ, ಬಂಟ್ವಾಳ ನಗರ ಹಾಗೂ ಜಿಲ್ಲೆಯ ವಿವಿದ ಪೊಲೀಸ್ ಠಾಣೆಗಳಲ್ಲಿ ಒಟ್ಟು 12 ಕಳ್ಳತನ ಪ್ರಕರಣಗಳು ದಾಖಲಾಗಿರುತ್ತದೆ.
ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಅನುಪಮ್ ಅಗರ್ವಾಲ್ ರವರ ಮಾರ್ಗದರ್ಶನದಲ್ಲಿ, DCP ಗಳಾದ ಸಿದ್ಧಾರ್ಥ ಗೊಯಲ್, ದಿನೇಶ್ ಕುಮಾರ್, ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಮನೋಜ್ ಕುಮಾರ್ ನಾಯಕ್ ರವರ ನಿರ್ದೇಶನದಂತೆ, ಮೂಡಬಿದ್ರೆ ಪೊಲೀಸ್ ಠಾಣಾ ನಿರೀಕ್ಷಕರಾದ ಸಂದೇಶ್ ಪಿ.ಜಿ,ರವರ ನೇತ್ರತ್ವದಲ್ಲಿ, ಪೊಲೀಸ್ ಉಪ ನಿರೀಕ್ಷಕ ದಿವಾಕರ್ ರೈ, ಅಪರಾಧ ವಿಭಾಗದ ಸಿಬ್ಬಂದಿಗಳಾದ ಮೊಹಮ್ಮದ್ ಹುಸೇನ್, ಆಕಿಲ್ ಅಹಮ್ಮದ್, ನಾಗರಾಜ್, ವೆಂಕಟೇಶ್, ಚಂದ್ರಹಾಸ ರೈ ಈ ಕಳ್ಳತನ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.