ಶೋಯಿಬ್​ನಿಂದ ಒಂದೇ ಒಂದು ರೂಪಾಯಿ ಜೀವನಾಂಶ ಪಡೆಯದಿರಲು ಸಾನಿಯಾ ನಿರ್ಧಾರ.!

ಅಂತಾರಾಷ್ಟ್ರೀಯ

ಭಾರತೀಯ ಟೆನ್ನಿಸ್​ ತಾರೆ ಸಾನಿಯಾ ಮಿರ್ಜಾ ಮತ್ತು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯಿಬ್​​ ಮಲಿಕ್ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ಒಂದು ವರ್ಷದಿಂದಲೂ ಹರಿದಾಡುತ್ತಲೇ ಇತ್ತು. ಆದರೆ, ಸಾನಿಯಾ ಆಗಲಿ, ಶೋಯಿಬ್​ ಆಗಲಿ ಅಧಿಕೃತವಾಗಿ ಮಾತನಾಡಿರಲಿಲ್ಲ. ಆದರೆ, ಅವರ ನಡೆ-ನುಡಿ ಮಾತ್ರ ಇಬ್ಬರ ವೈವಾಹಿಕ ಜೀವನದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸುತ್ತಿತ್ತು. ಇತ್ತೀಚೆಗಷ್ಟೇ ಸಾನಿಯಾ, ಮದುವೆ ಮತ್ತು ಡಿವೋರ್ಸ್​ ಬಗ್ಗೆಯೂ ಇನ್​ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದರು. ಇದು ಕೂಡ ವದಂತಿ ಎಂದೇ ಹೇಳಲಾಗಿತ್ತು. ಆದರೆ ದಿಢೀರ್​ ಬೆಳವಣಿಗೆ ಎನ್ನುವಂತೆ ಪಾಕಿಸ್ತಾನದ ಖ್ಯಾತ​ ನಟಿ ಸನಾ ಜಾವೇದ್​ರನ್ನು ಮದುವೆಯಾಗುವ ಮೂಲಕ ಶೋಯಿಬ್,​ ಡಿವೋರ್ಸ್​ ವದಂತಿಗೆ ಅಧಿಕೃತ ಮುದ್ರೆ ಒತ್ತಿದ್ದಾರೆ.

ಸಾನಿಯಾಗೆ ಡಿವೋರ್ಸ್​ ನೀಡದೆ ಸನಾ ಜಾವೇದ್​ರನ್ನು ಶೋಯಿಬ್​ ಮದುವೆ ಆಗಿದ್ದಾರೆ ಎಂದು ಹೇಳಲಾಗಿದೆ. ಶೋಯಿಬ್ ಮಲಿಕ್ ಮೂರನೇ ಮದುವೆ ಬಗ್ಗೆ ಸಾನಿಯಾ ಮಿರ್ಜಾ ತಂದೆ ಇಮ್ರಾನ್ ಮಿರ್ಜಾ ಮಾತನಾಡಿ, ಸಂಪ್ರದಾಯದಂತೆ ಸಾನಿಯಾ ತನ್ನ ಪತಿಗೆ ವಿಚ್ಛೇದನ ನೀಡಿದ್ದಾರೆ ಎಂದಿದ್ದಾರೆ. ಇದರ ಬೆನ್ನಲ್ಲೇ ಸಾನಿಯಾಗೆ ಸಿಗುವ ಜೀವನಾಂಶದ ಕುರಿತಾದ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಜೋರಾಗಿದೆ. ಗಂಡನಿಂದ ಬೇರೆಯಾದ ಬಳಿಕ ಪತ್ನಿ, ಜೀವನಾಂಶ ಕೇಳುವುದು ಸಹಜ ಪ್ರಕ್ರಿಯೆಯಾಗಿದೆ. ಈ ವಿಚಾರದಲ್ಲಿ ಸಾನಿಯಾ ವಿರುದ್ಧ ನಿಲುವು ತೆಳೆದಿದ್ದಾರೆ ಎನ್ನಲಾಗಿದೆ. ಮಾಜಿ ಪತಿ ಶೋಯಿಬ್​ನಿಂದ ಒಂದೇ ಒಂದು ರೂಪಾಯಿ ಪಡೆಯದಿರಲು ಸಾನಿಯಾ ಬಯಸಿದ್ದಾರೆ ಎಂದು ಹೇಳಲಾಗಿದೆ. ಒಂದು ಪೈಸೆಯನ್ನೂ ತೆಗೆದುಕೊಳ್ಳದೆ ವಿಚ್ಛೇದನದ ಪತ್ರಕ್ಕೆ ಸಹಿ ಮಾಡಿ ಅಲ್ಲಿಂದ ಹೊರ ಬಂದಿದ್ದಾರೆ ಎಂಬ ಸುದ್ದಿ ಇದೀಗ ಹರಿದಾಡುತ್ತಿದೆ. ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಇದು ಭಾರತೀಯ ಹೆಣ್ಣಿನ ಪವರ್​ ಎಂದು ಕಾಮೆಂಟ್​ ಮೂಲಕ ಕೊಂಡಾಡುತ್ತಿದ್ದಾರೆ ಮತ್ತು ಮಲಿಕ್​ ಓರ್ವ ಹೆಣ್ಣುಬಾಕ ಎಂದು ನಿಂದಿಸುತ್ತಿದ್ದಾರೆ.