ಮೋದಿ, ಮೀಡಿಯಾ ಗಪ್ ಚುಪ್..!
ಮಾಧ್ಯಮಗಳು ಮುಚ್ಚಿಟ್ಟ ಅಥವಾ ಮಾತಾಡದೆ ಇರುವ ಸಂಗತಿ ಇದು. ಮೋದಿ ಸರಕಾರ ಮುಚ್ಚಿಟ್ಟಿದ್ದ ಸತ್ಯ ಬಯಲಾದರೂ, ಅದರ ವಿರುದ್ಧ ಚರ್ಚಿಸದೇ ಸರಕಾರದ ಪರ ತುತ್ತೂರಿ ಊದುತ್ತಿರುವ ಮಾಧ್ಯಮಗಳು. ಮಾಧ್ಯಮಗಳ ಪರಿಸ್ಥಿತಿ ಕಾಣುವಾಗ ಅಯ್ಯೋ ಅನಿಸುತ್ತಿದೆ.
ರಾಷ್ಟ್ರೀಯ ಮಟ್ಟದ ಕೆಲವೇ ಕೆಲವು ಬೆರಳೆಣಿಕೆಯ ದೃಶ್ಯ ಮಾಧ್ಯಮಗಳು ಈ ಸುದ್ದಿಯನ್ನು ಮುನ್ನೆಲೆಗೆ ತರದೇ ಇದ್ದಿದ್ದರೆ ಬಹುಶಃ ಇಂತಹದ್ದೊಂದು ಘಟನೆ ನಡೆದಿದೆ ಅನ್ನುವುದು ಹೊರ ಜಗತ್ತಿಗೆ ತಿಳಿಯುತ್ತನೇ ಇರಲಿಲ್ಲ. ಕೆಲವೇ ಕೆಲವು ಮಾಧ್ಯಮಗಳು ಬಿಚ್ಚಿಟ್ಟ ಸತ್ಯವನ್ನು ಸರಕಾರ ಅಧಿಕೃತವಾಗಿ ತಳ್ಳಿ ಹಾಕಿಲ್ಲ. ಈ ದಿಸೆಯಲ್ಲಿ ನೋಡುವುದಾದರೆ ಆ ವರದಿಗಳು ಸತ್ಯ ಎಂದೇ ತಿಳಿದು ಬರುತ್ತದೆ.
1962 ರಲ್ಲಿ ಚೀನಾದೊಂದಿಗೆ ಭಾರತ ಯುದ್ದವನ್ನು ನಡೆಸಿತ್ತು. ಭಾರತ ಆ ಯುದ್ಧದಲ್ಲಿ ಸೋಲು ಕಂಡಿತ್ತು. ಆದರೆ ಮೇಜರ್ ಶೈತಾನ್ ಸಿಂಗ್ ಆ ಯುದ್ಧದಲ್ಲಿ ಹೋರಾಡಿದ ರೀತಿ ದಂತಕಥೆಯಾಗಿ ಉಳಿದಿದೆ.
ಶೈತಾನ್ ಸಿಂಗ್ ಅವರು ಮಡಿದ ಜಾಗದಲ್ಲಿ ಸ್ಮಾರಕ ವೊಂದನ್ನು ನಿರ್ಮಿಸಲಾಗಿತ್ತು. ಆದರೆ ಆರು ದಶಕಗಳ ನಂತರ ಅವರ ಸ್ಮಾರಕ ಚೀನಾದ ವಶವಾಗಿ ನೆಲಸಮವಾಗಿದೆ. ಮೇಜರ್ ಶೈತಾನ್ ಸಿಂಗ್ ಮಾರಣಾಂತಿಕವಾಗಿ ಗಾಯಗೊಂಡ ಸ್ಥಳದಲ್ಲಿ 1963 ರಿಂದಲೂ ಸ್ಮಾರಕ ಇತ್ತು. ಬುಲೆಟ್ ತೂರಿದ್ದ ಹೊಟ್ಟೆಯನ್ನು ಹಿಡಿದುಕೊಂಡ ಸ್ಥಿತಿಯಲ್ಲಿ ಶೈತಾನ್ ಸಿಂಗ್ ಮೃತದೇಹ ಪತ್ತೆಯಾಗಿತ್ತು. ಶೈತಾನ್ ಸಿಂಗ್ ನೆನಪಿನಲ್ಲಿ ಕಟ್ಟಲಾಗಿದ್ದ ಸ್ಮಾರಕವನ್ನು ಕೆಡವಲಾಗಿದೆ. ಚೀನಾ-ಭಾರತ ನಡುವಿನ ಬಫರ್ ಝೋನ್ ವಿಸ್ತರಣೆಯಾಗಿರುವುದೇ ಇದಕ್ಕೆ ಕಾರಣ. ಅಂದರೆ ಚೀನಾ ಸದ್ದಿಲ್ಲದೆ ತನ್ನ ವ್ಯಾಪ್ತಿಯನ್ನು ಹಿಗ್ಗಿಸಿಕೊಂಡಿರುವುದು ಸ್ಪಷ್ಟವಾಗಿದೆ. ಲಡಾಕ್ ಆಟೋನೋಮಷ್ ಹಿಲ್ ಡೆವಲಪ್ ಮೆಂಟ್ ಕೌನ್ಸಿಲ್ ನ ಮಾಜಿ ಸದಸ್ಯ ಸ್ಟಾಂಝಿನ್ ಅವರು ಎಕ್ಸ್ ಖಾತೆಯಲ್ಲಿ ಈ ಕುರಿತು ಬರೆದಿದ್ದಾರೆ.
ಜೂನ್ 2020 ರಲ್ಲಿ ಗಾಲ್ವಾನ್ ಕಣಿವೆಯಲ್ಲಿ ಚೀನಾ-ಭಾರತ ಸೈನಿಕರು ಮುಖಾಮುಖಿಯಾಗಿದ್ದರು. ಎರಡು ದೇಶಗಳ ಸೈನಿಕರು ಕೊಲ್ಲಲ್ಪಟ್ಟರು. ನಂತರ ಬಫರ್ ಝೋನ್ ರಚಿಸಲಾಗಿದೆ. ಅಂದಿನಿಂದ ಉಭಯ ಸೈನಿಕರು ಹಲವು ಬಾರಿ ಮುಖಾಮುಖಿ ಆಗಿದ್ದಾರೆ. ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳು ಹಳಸಲು ಆರಂಭವಾಗಿದೆ. ಭಾರತ ತಾವು ಒಂದಿಂಚೂ ಪ್ರದೇಶಗಳನ್ನು ಕಳೆದುಕೊಂಡಿಲ್ಲ ಎಂದು ಹೇಳುತ್ತಾ ಬಂದಿದೆ. ಆದರೆ ಇದೆಲ್ಲದರ ನಡುವೆ 2022 ರ ಆರಂಭದಲ್ಲಿ ಎರಡೂ ಕಡೆಯವರು ಬಫರ್ ಝೋನ್ ಅನ್ನು ಜಾರಿಗೊಳಿಸಿದ್ದರು. ಸ್ಟಾಝಿಂನ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಮಾಹಿತಿ ಪ್ರಕಾರ ಅಕ್ಟೋಬರ್ 2020 ರವರೆಗೆ ಸ್ಮಾರಕ ಭಾರತದ ನಿಯಂತ್ರಣದಲ್ಲಿತ್ತು. 2021 ಫೆಬ್ರವರಿಯಲ್ಲಿ ಸ್ಮಾರಕವನ್ನು ಕೆಡವಲಾಯಿತು ಎಂದು ಮೂಲಗಳು ತಿಳಿಸಿವೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ನವೆಂಬರ್ ನಲ್ಲಿ ಮೂರು ಕಿಲೋಮೀಟರ್ ಮುಂದೆ ಹೊಸ ಸ್ಮಾರಕವೊಂದನ್ನು ಉದ್ಘಾಟಿಸಿದ್ದರು. ಆದರೆ ಹಳೆಯ ಸ್ಮಾರಕ ನೆನಪು ಮಾತ್ರ. ಜನವರಿಯಲ್ಲಿ ನವದೆಹಲಿಯಲ್ಲಿ ನಡೆದ ಪೊಲೀಸರ ವಾರ್ಷಿಕ ಸಮ್ಮೇಳನದಲ್ಲಿ ಮಂಡಿಸಿದ ಸಂಶೋಧನಾ ಪ್ರಬಂಧದಲ್ಲಿ ಲೇಕ್ ನ ಹಿರಿಯ ಪೊಲೀಸ್ ಅಧೀಕ್ಷಕರಾದ ಟಿ.ಡಿ ನಿತ್ಯಾ ಅವರು ಕೆಲವು ವಿಚಾರಗಳನ್ನು ಬಿಚ್ಚಿಟ್ಟಿದ್ದರು.
ಎಲ್.ಓ.ಸಿ ಪ್ರದೇಶದ 65 ಕೇಂದ್ರಗಳಲ್ಲಿ ಕೇವಲ 26 ರಷ್ಟು ಮಾತ್ರ ಈಗ ಭಾರತೀಯ ಸೈನಿಕರ ಸುಪರ್ದಿಯಲ್ಲಿದೆ. ಇದೆಲ್ಲ ನೋಡುವಾಗ ಚೀನಾ ಸದ್ದಿಲ್ಲದೆ ಭಾರತೀಯ ನೆಲೆಗಳನ್ನು ವಶಪಡಿಸಿಕೊಳ್ಳುತ್ತಿದೆ. ವಿಶ್ವ ಗುರು ಎಂದು ಬೀಗುವ ಮೋದಿ ಸುಮ್ಮನೆ ಕುಳಿತಿದ್ದಾರೆ.
ರೇಜಂಡ್ ಲಾ ಕದನ ಭಾರತದ ಮಿಲಿಟರಿ ಇತಿಹಾಸದಲ್ಲಿ ಅಚ್ಚಳಿಯದ ಕದನ ಆಗಿ ಉಳಿದಿದೆ. ಕೇವಲ ಬೆರಳೆಣಿಕೆಯ ಭಾರತೀಯ ಸೈನಿಕರು 1300 ರಷ್ಟು ಶಸ್ತ್ರಸಜ್ಜಿತ ಚೀನಾ ಸೈನಿಕರನ್ನು ಕೊಂದ ಇತಿಹಾಸ ಈ ಕದನಕ್ಕಿದೆ.
ರಾಜಸ್ಥಾನದ ಜೋಧ್ ಪುರದಲ್ಲಿ ಜನಿಸಿದ ಶೈತಾನ್ ಸಿಂಗ್ ರವರದ್ದು ಮಿಲಿಟರಿ ಕುಟುಂಬದ ಹಿನ್ನೆಲೆ ಹೊಂದಿದವರು. ಮಿಲಿಟರಿಯಾಗಿ ಸೇವೆ ಸಲ್ಲಿಸಿದ ಶೈತಾನ್ ಸಿಂಗ್ ತನ್ನ 37 ನೇ ವಯಸ್ಸಿನಲ್ಲಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದರು. ಈ ಕದನದಲ್ಲಿ ಮೇಜರ್ ಶೈತಾನ್ ಸಿಂಗ್ ಪರಾಕ್ರಮದ ಎದುರು ಚೀನೀ ಪಡೆ ದಂಗಾಗಿತ್ತು. ನೇರ ಯುದ್ಧದಲ್ಲಿ ಚೀನೀಯರು ಕೈ ಸುಟ್ಟುಕೊಂಡರು. ಶೈತಾನ್ ಸಿಂಗ್ ಪಡೆಯನ್ನು ಎದುರಿಸುವುದು ಕಷ್ಟ ಎಂದು ತಿಳಿದ ಚೀನೀಯರು ಹಿಂಬಾಗಿಲ ಮೂಲಕ ತಂತ್ರ ಹೂಡಿದ ಪರಿಣಾಮ ರಣಾಂಗಣದಲ್ಲಿ ಶೈತಾನ್ ಸಿಂಗ್ ಕೊನೆಯುಸಿರೆಳೆದರು. ಶೈತಾನ್ ಸಿಂಗ್ ಅಚಲ ದೇಶಭಕ್ತಿ ಇಂದಿನ ಯುವ ಜನತೆಗೆ ಸ್ಪೂರ್ತಿಯಾಗಬೇಕಿದೆ. ಆದರೆ ದೇಶಭಕ್ತಿಯನ್ನೇ ರಾಜಕಾರಣ ಮಾಡಿಕೊಂಡಿರುವ ಬಿಜೆಪಿ ಮೇಜರ್ ಶೈತಾನ್ ಸಿಂಗ್ ಸ್ಮಾರಕವನ್ನೇ ಹೊಡೆದುರುಳಿಸಿದಾಗ ಮೌನವಾಗಿದೆ. ಇದೆಂತಹ ದೇಶಭಕ್ತಿ ಬಿಜೆಪಿಯದ್ದು.!