ಭಾರತ ದೇಶವು ಗಣರಾಜ್ಯೋತ್ಸವದ ಶುಭಗಳಿಗೆಯಲ್ಲಿ ಇರುವ ಹೊತ್ತಿಗೆ ಪ್ರತಿ ವರ್ಷ ನೀಡಲ್ಪಡುವ ಉತ್ತಮ ಸೇವೆ ಸಲ್ಲಿಸಿದ ಪೊಲೀಸ್ ಅಧಿಕಾರಿಗಳಿಗೆ ನೀಡುವ ವಿಶಿಷ್ಟ ಸೇವಾ ಪದಕ, ಶ್ಲಾಘನೀಯ ಸೇವಾ ಪದಕ ಸೇರಿ ರಾಷ್ಟ್ರಪತಿ ಪದಕಕ್ಕೆ ಕರ್ನಾಟಕ ರಾಜ್ಯದ 23 ಮಂದಿ ಪೊಲೀಸ್ ಅಧಿಕಾರಿಗಳು ಆಯ್ಕೆಯಾಗಿದ್ದಾರೆ.
ಈ ಪೈಕಿ 19 ಮಂದಿ ರಾಜ್ಯದಲ್ಲೇ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿಯಾಗಿದ್ದು, ಇಬ್ಬರು ಪ್ರಸ್ತುತ ನವದೆಹಲಿಯಲ್ಲಿ ಸೇವೆ ಸಲ್ಲಿಸುತ್ತಿರುವ ಕರ್ನಾಟಕ ಕೇಡರ್ ನ ಐಪಿಎಸ್ ಅಧಿಕಾರಿಗಳಾಗಿದ್ದಾರೆ.
ಕೇಂದ್ರ ಗೃಹ ಇಲಾಖೆಯ ಜಂಟಿ ನಿರ್ದೇಶಕರಾದ ಪಂಕಜ್ ಕುಮಾರ್ ಠಾಕೂರ್ ರವರು ಈ ಬಾರಿ ವಿಶಿಷ್ಟ ಸೇವಾ ಪದಕದ ಗೌರವಕ್ಕೆ ಆಯ್ಕೆಯಾಗಿದ್ದಾರೆ. ಪಂಕಜ್ ಕುಮಾರ್ ಠಾಕೂರ್ ಹೆಸರು ದ.ಕ ಜಿಲ್ಲೆಯ ಜನತೆಅಷ್ಟು ಬೇಗ ಮರೆಯುವಂತಿಲ್ಲ. ಪಣಂಬೂರು ಉಪ-ವಿಭಾಗದಲ್ಲಿ ಎಎಸ್ಪಿ ಯಾಗಿ ದಕ್ಷ, ಪ್ರಮಾಣಿಕತೆಯಿಂದ ಕಾರ್ಯನಿರ್ವಹಿಸಿ, ತದ ನಂತರ ದ.ಕ ಜಿಲ್ಲಾ ಎಸ್ಪಿಯಾಗಿ ಅಧಿಕಾರ ಸ್ವೀಕರಿಸಿ,ದಕ್ಷ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿ, ಅಂದು ಮಂಗಳೂರನ್ನು ಆಳುತ್ತಿದ್ದ ರೌಡಿ ಸಾಮ್ರಾಜ್ಯವನ್ನು ಮಟ್ಟ ಹಾಕಿ, ದೊ ನಂಬರ್ ದಂಧೆ, ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕಿ, ರೌಡಿಗಳು ಮಂಗಳೂರು ಬಿಟ್ಟು ಓಡಿಹೋಗುವಂತೆ ಮಾಡಿದ್ದ ಕೀರ್ತಿ ಠಾಕೂರ್ ರವರಿಗೆ ಸಲ್ಲುತ್ತದೆ. ಬಹುಶಃ ಮಂಗಳೂರಿಗೆ ಠಾಕೂರ್ ರಂತಹ ಅಧಿಕಾರಿ ಮತ್ತೊಬ್ಬರು ಬರಲಿಲ್ಲ ಎಂದು ಈಗಲೂ ಇಲ್ಲಿನ ಜನ ನೆನಪಿಸುವವರಿದ್ದಾರೆ. ಇದು ಪಂಕಜ್ ಕುಮಾರ್ ಠಾಕೂರ್ ರವರ ಕಾರ್ಯಕ್ಷಮತೆಗೆ ಹಿಡಿದ ಕೈಗನ್ನಡಿ.
ಇನ್ನು ಕೇಂದ್ರ ಗೃಹ ಇಲಾಖೆಯ ಉಪ ನಿರ್ದೇಶಕರಾದ ಕೌಶಲೇಂದ್ರ ಕುಮಾರ್ ಅವರು ಶ್ಲಾಘನೀಯ ಸೇವಾ ಪದಕ ಗೌರವಕ್ಕೆ ಪಾತ್ರರಾಗಿದ್ದಾರೆ. ಪಣಂಬೂರು ಉಪ-ವಿಭಾಗದ ಎಸಿಪಿ ಆಗಿ ಕರ್ತವ್ಯ ನಿರ್ವಹಿಸಿದ್ದ ಕೌಶಲೇಂದ್ರ ಕುಮಾರ್ ದಕ್ಷ, ಸೂಪರ್ ಕಾಫ್ ಅಧಿಕಾರಿ ಎಂದೇ ಜನಜನಿತರಾಗಿದ್ದರು. ಅಕ್ರಮ ಚಟುವಟಿಕೆ, ಧೋ ನಂಬರ್ ದಂಧೆ, ಕೋಮು ವೈಷಮ್ಯವನ್ನು ಮಟ್ಟ ಹಾಕುವ ಮೂಲಕ ತನ್ನದೇ ಆದ ಹವಾ ಸೃಷ್ಟಿಸಿದ್ದರು. ನಂತರ ಮೈಸೂರು ಎಸ್ಪಿಯಾಗಿ ದಕ್ಷತೆ, ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿದ್ದರು.
ಮಂಗಳೂರಿನಲ್ಲಿ ಸೇವೆ ಸಲ್ಲಿಸಿದ ಇಬ್ಬರು ಐಪಿಎಸ್ ಅಧಿಕಾರಿಗಳು ಈ ಬಾರಿ ಗಣರಾಜ್ಯೋತ್ಸವದ ದಿನದಂದು ಗೌರವಕ್ಕೆ ಪಾತ್ರರಾಗಿರುವುದು ಜಿಲ್ಲೆಯ ಜನತೆ ಹೆಮ್ಮೆ ಪಡುವಂತಹ ವಿಷಯ.