ಒಂದೆರಡು ದಿನಗಳು ಅಥವಾ ನಾಲ್ಕು ಗಂಟೆಗಳಲ್ಲಿ ಆದ ಬೆಳವಣಿಗೆ ಅಲ್ಲ; ಕಳೆದ ಐದಾರು ತಿಂಗಳಿಂದಲೂ ಆ ಪ್ರಯತ್ನ ನಡೆದಿತ್ತು: ಜಗದೀಶ್ ಶೆಟ್ಟರ್‌

ರಾಜ್ಯ

ನನ್ನನ್ನು ಮತ್ತೆ ವಾಪಾಸು ಬಿಜೆಪಿ ಕರೆತರುವ ಪ್ರಯತ್ನ ಒಂದೆರಡು ದಿನಗಳು ಅಥವಾ ನಾಲ್ಕು ಗಂಟೆಗಳಲ್ಲಿ ಆದ ಬೆಳವಣಿಗೆ ಅಲ್ಲ. ಕಳೆದ ಐದಾರು ತಿಂಗಳಿಂದಲೂ ಆ ಪ್ರಯತ್ನ ನಡೆದಿತ್ತು ಎಂದ ಜಗದೀಶ ಶೆಟ್ಟರ್‌. ಬಿಜೆಪಿಗೆ ಮತ್ತೆ ಕರೆತರಬೇಕು ಎಂಬ ಒತ್ತಡ ಕಾರ್ಯಕರ್ತರಿಂದಲೂ ಇತ್ತು.ಲನನ್ನನ್ನೂ ಭೇಟಿ ಮಾಡಿ ಬಿಜೆಪಿಗೆ ಮರಳುವಂತೆ ಒತ್ತಾಯಿಸಿದ್ದರು. ಕಾರ್ಯಕರ್ತರ ಆಶಯ, ಧ್ವನಿ, ರಾಜ್ಯ ನಾಯಕರು ಮತ್ತು ರಾಷ್ಟ್ರೀಯ ನಾಯಕರ ಕರೆಗೆ ಸ್ಪಂದಿಸಿ ಮರಳಿದ್ದೇನೆ. ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡುವುದಾಗಿ ಹಿರಿಯರು ಹೇಳಿದ್ದಾರೆ’ ಎಂದು ಶುಕ್ರವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಬಿಜೆಪಿ ಕಳೆದ ಲೋಕಸಭಾ ಚುನಾವಣೆಯಲ್ಲಿ 25 ಸ್ಥಾನಗಳನ್ನು ಗೆದ್ದಿತ್ತು. ಅದಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಪ್ರಯತ್ನ ಮಾಡುತ್ತೇವೆ. ಅದಕ್ಕಾಗಿ ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ. ಪಕ್ಷದ ಸೂಚನೆಯಂತೆ ಸಂಘಟನಾತ್ಮಕ ಕಾರ್ಯದಲ್ಲಿ ತೊಡಗಿಸಿಕೊಳ್ಳುವೆ’ ಎಂದು ಅವರು ಹೇಳಿದರು. ಇದು ನಮ್ಮ ಮನೆ, ನಾವು ಕಟ್ಟಿ ಬೆಳೆಸಿದ ಮನೆ. ನಮ್ಮ ಕುಟುಂಬ ಬಿಜೆಪಿ ಜತೆ ಆತ್ಮೀಯತೆ ಹೊಂದಿದೆ. ವಿಧಾನಸಭೆ ಚುನಾವಣೆ ವೇಳೆ ಕೆಲವೊಂದು ಘಟನೆಗಳು ನಡೆದ ಕಾರಣ ಕಾಂಗ್ರೆಸ್‌ ಸೇರಿದ್ದೆ. ಮೋದಿಯವರು 10 ವರ್ಷಗಳ ಉತ್ತಮ ಆಡಳಿತ ನೀಡಿದ್ದಾರೆ. ಒಳ್ಳೆಯ ಕೆಲಸಗಳನ್ನೂ ಮಾಡಿದ್ದಾರೆ. ಅವರು ಮತ್ತೊಮ್ಮೆ ಪ್ರಧಾನಿ ಆಗಬೇಕು. ಭಾರತವು ಆರ್ಥಿಕವಾಗಿ ಇನ್ನಷ್ಟು ಬಲಿಷ್ಠವಾಗಿ ಹೊರಹೊಮ್ಮಬೇಕು ಎಂಬ ಅಭಿಲಾಷೆ ದೇಶದ ಜನರದ್ದು. ಆ ಕಾರಣಕ್ಕೆ ಪಕ್ಷಕ್ಕೆ ಸಂತೋಷದಿಂದ ಬಂದಿದ್ದೇನೆ ಎಂದರು.