ಸಕ್ಕರೆ ನಾಡಿನ ಬಂಧುಗಳೇ ಕರಾವಳಿಯ ಈ ವಿವೇಕದ ಕಿವಿಮಾತು ಕೇಳಿ. ಸಕ್ಕರೆ ನಾಡಿನ ಮಂಡ್ಯದ ಸ್ನೇಹಿತರಿಗೊಂದು ಪತ್ರ

ಕರಾವಳಿ

ನೀವು ನಾಡಿಗೆ ಸಕ್ಕರೆ ಹಂಚುವವರು. ನೀವು ಸದಾ ಸಕ್ಜರೆಯನ್ನೇ ಹಂಚಬೇಕು. ನಿಮ್ಮ ಬದುಕೂ ಸಿಹಿಯಾಗಿರಬೇಕು: ಎಂ.ಜಿ ಹೆಗಡೆ

ಮಂಗಳೂರಿನಿಂದ ಶ್ರೀ ಎಂ. ಜಿ. ಹೆಗಡೆಯವರು ಮಂಡ್ಯ ಜಿಲ್ಲೆಯ ಜನತೆಗೆ ತಮ್ಮ ಅನುಭವದ ಹಿನ್ನೆಲೆಯಲ್ಲಿ ಬರೆದ ಪತ್ರ. ದಯಮಾಡಿ ಶಾಂತಚಿತ್ತರಾಗಿ ಓದಿ.

ಸಕ್ಕರೆ ನಾಡು ಎಂದು ಪ್ರಸಿದ್ಧಿಯಾದ ಮಂಡ್ಯದ ಸ್ನೇಹಿತರೇ ನಮಸ್ಕಾರ. ನಾನು ಕರಾವಳಿಯ ಮಂಗಳೂರಿನವ. ಸರ್ವ ಜಾತಿ ಮತದ ಜನರು ಸೌಹಾರ್ದತೆಯಿಂದ ಬದುಕುತ್ತಿದ್ದ ನಾಡು ಒಮ್ಮೆ ಮತೀಯ ಮತ್ತು ಭಾವನಾತ್ಮಕ ಸಂಗತಿಗಳಿಗೆ ಬಲಿಯಾದರೆ ಎನಾಗುತ್ತದೆ ಎಂಬುವುದಕ್ಕೆ ಸಾಕ್ಷಿ ನಾನು.

ಒಂದು ಕಾಲದಲ್ಲಿ ಇಂತಹ ಮತೀಯ ಸಂಗತಿಗಳೇ ಶ್ರೇಷ್ಠವೆಂದು ಅದರ ಹಿಂದೆ ಹೋಗಿ ಅಲ್ಲಿನ ಸಾಮರಸ್ಯದ ಬದುಕಿಗೆ ಧಕ್ಕೆ ತಂದ ಪಾಪದಲ್ಲಿ ನನ್ನ ಪಾಲೂ ಇದೆ. ಈ ಪತ್ರ ನಾನು ಮಾಡಿದ ಪಾಪಕ್ಕೆ ಕೊಂಚ ಪ್ರಾಯಶ್ಚಿತ್ತ ಆದೀತೂ ಎಂದೂ ಭಾವಿಸುತ್ತೇನೆ.

ಕರಾವಳಿಯಲ್ಲಿ ಪದೇ ಪದೇ ನಡೆದ ಕೋಮು ದಳ್ಳುರಿಯ ಸುದ್ದಿ ಕೇಳಿದವರೇ ನೀವು. ಇಲ್ಲಿ ಹಂತ ಹಂತವಾಗಿ ಬೆಳೆದ ಕೋಮುವಾದದಿಂದ ಅನೇಕ ಹಿಂದೂ ಮತ್ತು ಮುಸ್ಲಿಂ ಯುವಕರು ಸ್ಮಶಾನಯಾತ್ರೆ ಮಾಡಿದ್ದರೆ, ಸಾವಿರಾರು ಯುವಕರು ಕ್ರಿಮಿನಲ್ ಪ್ರಕರಣದಲ್ಲಿ ಜೈಲು ಸೇರಿದ್ದಾರೆ. ಅತ್ಯಂತ ಖಚಿತವಾಗಿ ನಾನು ಕಳೆದ 25 ವರ್ಷಗಳಿಂದ ಹೇಳಿಕೊಂಡು ಬಂದ ಒಂದು ವಿವರ ನಿಮಗೆ ಹೇಳಲೇ ಬೇಕಾಗಿದೆ. ಹೀಗೆ ಜೈಲು ಸೇರಿದವರು ಮತ್ತು ಸ್ಮಶಾನ ಸೇರಿದವರು, ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದ ವರ್ಗದ ಯುವಕರು ಮಾತ್ರ. ನೀವು ಈಗ ಹನುಮ ಧ್ವಜದ ಹೋರಾಟ ಎಂದು ಭಾವನಾತ್ಮಕವಾಗಿ ಬೀದಿಗೆ ಇಳಿಯತೊಡಗಿದ್ದೀರಿ.

ಮಂಡ್ಯದಲ್ಲಿ ವಿಶ್ವವಿದ್ಯಾಲಯ
ಸರ್ ಎಂ. ವಿಶ್ವೇಶ್ವರಯ್ಯ ಸ್ನಾತಕೋತ್ತರ ಕೇಂದ್ರ ಸಾಕಷ್ಟು ಪದವಿ ಕಾಲೇಜುಗಳು, ಇಂಜಿನಿಯರಿಂಗ್ ಕಾಲೇಜುಗಳು, ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಮಿಮ್ಸ್) – ವೈದ್ಯಕೀಯ ಕಾಲೇಜು
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪ್ರಾದೇಶಿಕ ಉನ್ನತ ಕೇಂದ್ರ, ಕೃಷಿ ವಿಶ್ವವಿದ್ಯಾಲಯದ ಕೇಂದ್ರ,
ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಹೊರ ಆವರಣ ಕೇಂದ್ರ ಶೈಕ್ಷಣಿಕ ವ್ಯವಸ್ಥೆಯಿದೆ. ಶ್ರೀರಂಗಪಟ್ಟಣ, ಟಿಪ್ಪೂ ಅರಮನೆ, ಕೋಟೆ
ಕುಂತಿ ಬೆಟ್ಟ, ರಂಗನ ತಿಟ್ಟು, ಚೆನ್ನ ಕೇಶವ ಸ್ವಾಮಿ ಗುಡಿ, ಸೇರಿದಂತೆ ಅನೇಕ ದೇವಸ್ಥಾನಗಳು, ಫಾಲ್ಸ್ ಗಳು, ಕೃಷ್ಣರಾಜ ಸಾಗರ ಆಣೆಕಟ್ಟು ಬೃಂದಾವನ ಹೀಗೆ ಬೇಕಾದಷ್ಟು ಪ್ರವಾಸಿ ತಾಣಗಳಿವೆ. ಅನೇಕ ಸಾಹಿತಿಗಳನ್ನು, ಒಳ್ಳೆಯ ರಾಜಕೀಯ ನಾಯಕರನ್ನೂ ನಿಮ್ಮ ಜಿಲ್ಲೆ ನೀಡಿದೆ.

ಈ ಹಿಂದೆ ನಿಮ್ಮ ಊರಿನಲ್ಲಿ ಹಿಂದೂ ದೇವಸ್ಥಾನಗಳು ಅಭಿವೃದ್ಧಿಯಾಗಿದೆಯಲ್ಲವೇ. ಬೇಕಾದಷ್ಟು ಧಾರ್ಮಿಕ ಕಾರ್ಯಕ್ರಮ ಆಗಿದೆಯಲ್ಲವೇ. ನಿಮ್ಮ ದೇವಸ್ಥಾನದ ಮೇಲೆ ದೇವರ ಧ್ವಜ ಹಾರಿಸಿದ್ದರೆ ಯಾರೂ ಬಂದು ತಡೆದದ್ದೂ ಇಲ್ಲ ಅಲ್ಲವೇ. ಯೋಚಿಸಿ. ಈಗ ಏಕಾಏಕಿ ಈ ಸಾರ್ವಜನಿಕ ಸ್ಥಳದಲ್ಲಿ ಅದೂ ರಾಷ್ಟ್ರ ಧ್ವಜ ಹಾರಿಸಲೆಂದು ಪರವಾನಿಗೆ ಪಡೆದು, ಹನುಮ ಧ್ವಜ ಹಾರಿಸಬೇಕೆಂಬ ಬೇಡಿಕೆಯ ಹಿಂದಿರುವ ಹುನ್ನಾರ ನೀವು ಅರ್ಥ ಮಾಡಿಕೊಳ್ಳಬೇಕಿದೆ.

ನೀವು ಯಾವುದೇ ರಾಜಕೀಯ ಪಕ್ಷದ ಹಿಂದೆ ಹೋಗಿ ನನ್ನ ಆಕ್ಷೇಪ ಕಿಂಚಿತ್ತೂ ಇಲ್ಲ. ಆದರೆ ಇಂತಹ ಭಾವನಾತ್ಮಕ ಸಂಗತಿಗಳನ್ನು ಮುಂದಿಟ್ಟು ಸಾರ್ವಜನಿಕವಾಗಿ ರಾಜಕೀಯ ಹೋರಾಟ ಎಂದಾದರೆ ಸಾವಿರ ಬಾರಿ ಯೋಚಿಸಬೇಕು. ಬಿಜೆಪಿ ಅಂತಲ್ಲ. ನಾಳೆ ಜನತಾ ದಳ ಎಸ್ ಡಿ ಪಿ ಐ ಕಾಂಗ್ರೆಸ್ ಪಕ್ಷ ಸೇರಿದಂತೆ ಯಾವುದೇ ಪಕ್ಷವಾದರೂ ಸರಿ ಇಂತಹ ಹಿಂದೂ ಮುಸ್ಲಿಂ ಭಾವನಾತ್ಮಕ ವಿಷಯ ಇಟ್ಟು ಕೊಂಡು ಚುನಾವಣೆ ಸಮಯದಲ್ಲಿ ಗಲಭೆ ಎಬ್ಬಿಸುವ ಯಾವುದೇ ಸಂಗತಿಗಳನ್ನು ನೀವು ಈಗಲೇ ತಿರಸ್ಕರಿಸುವುದು ಒಳಿತು.
ಇಲ್ಲವಾದರೆ ನಿಮ್ಮ ಬಡವರ ಮನೆಯ ಮಕ್ಕಳು ಹೆಣವಾಗುವುದು, ಜೈಲು ಸೇರುವುದು ನಿಮ್ಮಲ್ಲೂ ಪ್ರಾರಂಭವಾಗುತ್ತದೆ. ಇದು ಮುಂದುವರಿದರೆ ನೆನಪಿಡಿ, ಚುನಾವಣೆ ಹತ್ತಿರ ಬಂದಂತೆ ಇನ್ನೂ ಕೆಟ್ಟ ಘಟನೆಗಳಿಗೆ ನೀವೇ ಸಾಕ್ಷಿಯಾಗುತ್ತೀರಿ.

2006 ರ ಮಂಗಳೂರು ಕೋಮು ಗಲಭೆ ವಿವರ ತೆಗೆದು ನೋಡಿ. ಸುಮಾರು 500 ಮಂದಿ ಯುವಕರು ಜೈಲಿಗೆ ಸೇರಿದ್ದು ಅವರೆಲ್ಲರೂ ಬಡವರ ಮನೆಯ ಮಕ್ಕಳು.

ಈಗ ಮೊನ್ನೆ ನಡೆದ ನಿಮ್ಮ ಊರಿನ ಧ್ವಜದ ಪ್ರತಿಭಟನೆಯಲ್ಲಿ ಇದ್ದವರು ಯಾರು. ನನಗೆ ಗೊತ್ತಿಲ್ಲ. ನಿಮ್ಮ ಊರಿನ ರಾಜಕೀಯ ನಾಯಕರ ಮನೆಯ ಮಕ್ಕಳು, ಶ್ರೀಮಂತ ವರ್ಗದವರು, ಉತ್ತಮ ಉದ್ಯೋಗದಲ್ಲಿರುವವರು, ವೈಧ್ಯಕೀಯ ತಂತ್ರಜ್ಞಾನ ಇತ್ಯಾದಿ ಕಲಿಯುವ ವಿದ್ಯಾರ್ಥಿಗಳು ನಿಮ್ಮ ಜೊತೆಗಿದ್ದರೋ? ಖಂಡಿತ ಇರಲಿಕ್ಕಿಲ್ಲ. ಮುಂದಿನ ದಿನಗಳಲ್ಲೂ ಇರುವುದಿಲ್ಲ. ಹಾಗಾದಾರೆ ಇವರಿಗಿಲ್ಲದ ಸಮಸ್ಯೆ ನಿಮಗೆ ಮಾತ್ರ ಆಗುವುದು ಹೇಗೇ? ನಿಮ್ಮನ್ನು ಪ್ರಚೋದಿಸುವವರ ಬಳಿ ನಾಳೆ ಕೇಸ್ ಆದರೆ ಜಾಮೀನಿಗೆ ಬರ್ತಿರಾ ಅಂತಾ ಒಂದು ಮಾತು ಕೇಳಿನೋಡಿ. ಸತ್ಯದ ಹುಡುಕಾಟಕ್ಕೆ ದೂರ ಹೋಗಬೇಕಿಲ್ಲ. ನಿಮಗೇ ಸಿಗುತ್ತದೆ.

ದೀರ್ಘ ಕಾಲದ ನಂತರ ಕರಾವಳಿಯಲ್ಲಿ ಭಾವನಾತ್ಮಕ ವಿಷಯಕ್ಕೆ ಹೊಡೆದಾಡಲು ಯುವಕರು ಕಡಿಮೆಯಾಗಿದ್ದಾರೆ. ಜನ ಬೆಂಬಲ ಕಡಿಮೆಯಾಗುತ್ತಿದೆ. ಇದಕ್ಕೆ ನಿಮ್ಮ ಊರು ಹೊಸ ಪ್ರಯೋಗ ಶಾಲೆಯಾಗಬೇಕೆ?

ಇಂತಹ ಕೋಮು ಗಲಭೆಯಿಂದಾಗಿ ಕಳೆದ 30 ವರ್ಷಗಳಿಂದ ದ. ಕ ಜಿಲ್ಲೆಯಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ಮಾಹಿತಿ ತಂತ್ರಜ್ಞಾನ ಕಂಪೆನಿಗಳು ಬರಲು ಹಿಂದೇಟು ಹಾಕುತ್ತಿವೆ. ಒಮ್ಮೆ ಕೋಮು ಗಲಭೆಯಾದರೆ 2 ವರ್ಷ ವ್ಯಾಪಾರ ವ್ಯವಹಾರದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ನಿಮ್ಮ ಊರು ಬೆಂಗಳೂರು ಮತ್ತು ಮೈಸೂರಿಗೆ ಸಮೀಪವಿದೆ. ಅಭಿವೃದ್ಧಿಯ ಪಥದಲ್ಲಿದೆ. ನಿಮ್ಮ ಸಕ್ಕರೆ ನಾಡು ಪ್ರೀತಿ ಸಹಬಾಳ್ವೆಯ ನಾಡು. ಒಮ್ಮೆ ಮತೀಯ ಹುಚ್ಚು ಶುರುವಾದರೆ ಹಳ್ಳಿ ಹಳ್ಳಿಯಲ್ಲಿ ಮನಸ್ಸುಗಳು ಒಡೆಯುತ್ತವೆ. ಅನಗತ್ಯ ಕ್ರೋಧಗೊಳ್ಳುತ್ತವೆ .
ಸಂಶಯದ ಸುಳಿ ಪ್ರತಿಯೊಬ್ಬರ ಬದುಕನ್ನೂ ಸುಡುತ್ತದೆ. ವ್ಯಾಪಾರ ವಹಿವಾಟು ಪದೇ ಪದೇ ಹೊಡೆತ ತಿನ್ನುತ್ತದೆ. ಬಂದ್ ಲಾಠಿ ಚಾರ್ಜ್ ನಿತ್ಯದ ಕೆಲಸವಾಗುತ್ತದೆ. ನೆಮ್ಮದಿ ಸುಡುಗಾಡಿನ ಸಮಾಧಿಯ ಮೇಲಿನ ಹೂವಾಗುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಸುಳ್ಳುಗಳು ಕೇಕೆ ಹಾಕಲು ನಿಮ್ಮಲ್ಲಿ ಪ್ರಾರಂಭವಾಗಿದೆ. ಅದು ಬೆಂಕಿಗೆ ತುಪ್ಪ ಸುರಿಯುತ್ತದೆ.

ಇಂದು ಒಂದು ಧ್ವಜ ನಾಳೆ, ಮಂದಿರ, ಮಸೀದಿ ಹೀಗೆ ನಿಧಾನವಾಗಿ ಕಿಚ್ಚು ಹಬ್ಬುತ್ತದೆ. ಅಮಾಯಕರ ಶವಗಳನ್ನು ಮೆಟ್ಟಿಲಾಗಿಸಿಕೊಂಡು ಶಾಸಕ, ಎಂಪಿ ಗಳಾಗುವ ರಾಜಕೀಯ ನಾಯಕರ ತಂತ್ರ ನಿಮ್ಮೆಲ್ಲರ ಬದುಕನ್ನೂ ನಾಶಮಾಡುತ್ತದೆ. ಮತ್ತೆ ಪ್ರತೀ ಚುನಾವಣೆ ಬರುವಾಗ ಒಂದು ಗಲಾಟೆ ಎರಡು ಹೆಣ, ಸಿಟ್ಟು ಉದ್ರೇಖದಿಂದ ನಮ್ಮ ಓಟಿನ ಚಲಾವಣೆ ಆಗುತ್ತದೆ ಇಷ್ಟೆ.

ನೀವು ನಾಡಿಗೆ ಸಕ್ಕರೆ ಹಂಚುವವರು.
ನೀವು ಸದಾ ಸಕ್ಜರೆಯನ್ನೇ ಹಂಚಬೇಕು. ನಿಮ್ಮ ಬದುಕೂ ಸಿಹಿಯಾಗಿರಬೇಕು ಎಂಬುವುದಷ್ಟೇ ನನ್ನ ಆಸೆ. ಇಂತಹ ಸಮಸ್ಯೆ ಯಾವುದೇ ಸಂಘ ಸಂಸ್ಥೆ ರಾಜಕೀಯ ಪಕ್ಷದವರು ಮಾಡಿದರೂ ಸರಿ. ಸಕ್ಕರೆ ಕಬ್ಬಿನ ಒಂದು ತುಂಡು ಕೊಟ್ಟು ಮರ್ಯಾದೆಯಿಂದ ಹೊರಗೆ ಕಳಿಸಿಬಿಡಿ.