ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಮರಳು ಮಾಫಿಯಾ ಅಟ್ಟಹಾಸ; ಪ್ರಶ್ನಿಸಬೇಕಾದವರು ಮೌನಕ್ಕೆ ಶರಣು.!

ಕರಾವಳಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಅಕ್ರಮ ಮರಳು ಮಾಫಿಯಾ ಅಟ್ಟಹಾಸ ಮಿತಿಮೀರುತ್ತಿದೆ. ಜಿಲ್ಲೆಯ ಪ್ರಮುಖ ನದಿ ತಟಗಳಲ್ಲಿ ಪಕ್ಷ ಭೇದ ಮರೆತು ಅಕ್ರಮ ಮರಳುಗಾರಿಕೆಯಲ್ಲಿ ಪುಡಿ ರಾಜಕಾರಣಿಗಳು ತೊಡಗಿದ್ದು, ತಮ್ಮ ಪ್ರಭಾವ ಬಳಸಿ ಕಾನೂನನ್ನು ತಮಗೆ ಬೇಕಾದಂತೆ ಬದಲಾಯಿಸಿಕೊಂಡಿದ್ದಾರೆ. ಬಳ್ಳಾರಿಯಲ್ಲಿ ಧೂಳೆಬ್ಬಿಸಿದ ಗಣಿಗಾರಿಕೆಯಂತೆ ಜಿಲ್ಲೆಯಲ್ಲಿ ಮರಳು ಮಾಫಿಯಾ ಬೃಹತ್ ದಂಧೆಯಾಗಿ ಬೆಳೆಯುತ್ತಿದ್ದು ಕಾನೂನು ಪಾಲಕರು ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದ್ದಾರೆ.

ಕೆಲವು ವರ್ಷಗಳ ಹಿಂದೆ ಮೂಲರಪಟ್ನ ಸೇತುವೆ ಕುಸಿಯಲು ಮುಖ್ಯ ಕಾರಣ ಆಗಿದ್ದು ಇದೇ ಅಕ್ರಮ ಮರಳುಗಾರಿಕೆ. ಅದೇ ಅಲ್ಲ ಹಲವು ಕಡೆ ಈ ಅಕ್ರಮ ಮರಳುಗಾರಿಕೆಯ ಪರಿಣಾಮ ಹಲವು ಅನಾಹುತಕ್ಕೆ ಕಾರಣವಾಗಿದೆ. ಇದೆಲ್ಲ ಅರಿವಿದ್ದರೂ ಸಂಬಂಧಪಟ್ಟ ಇಲಾಖೆ ‘ಮಾಮೂಲಿ’ ಬೆನ್ನ ಹಿಂದೆ ಬಿದ್ದು ಅಕ್ರಮ ವನ್ನು ಸಕ್ರಮಗೊಳಿಸುವ ಹಂತಕ್ಕೆ ತಲುಪಿರುವುದು ಖೇದಕರ.

ಮಂಗಳೂರು ಹೊರವಲಯದ ಬೊಂದೆಲ್ ಮಂಜಲ್ ಪಾದೆ, ಮಳಲಿ ,ಶಂಭೂರು, ಅದ್ಯಪಾಡಿ, ಮರವೂರು, ಉದ್ದಬೆಟ್ಟು, ಮಲ್ಲೂರು, ಇಡ್ಮಾ, ಅಮ್ಮುಂಜೆ, ಈ ಪ್ರದೇಶಗಳಲ್ಲಿ ಅಕ್ರಮ ಮರಳುಗಾರಿಕೆ ನಿರಾಂತಕವಾಗಿ ನಡೆಯುತ್ತಿದ್ದು, ಇಲ್ಲಿ ರಾತ್ರಿಯಿಂದ ಬೆಳಗಿನ ಜಾವ ತನಕ ಅಕ್ರಮ ಮರಳುಗಾರಿಕೆ ಮಾಡಿ ದಂಧೆಕೋರರು ನದಿ ಒಡಲನ್ನು ಬಗೆದು ನುಂಗಿ ನೀರು ಕುಡಿಯುತ್ತಾರೆ. ಹೆದ್ದಾರಿಯಲ್ಲಿ ಮರಳು ಲಾರಿಗಳನ್ನು ಸಲೀಸಾಗಿ ನೋಡಿಕೊಳ್ಳುವ ಅಕ್ರಮಕೋರರ ಹತ್ತಿರ ಯಾವುದೇ ಅಧಿಕಾರಿಯಾಗಲಿ, ಸಂಬಂಧಪಟ್ಟ ಇಲಾಖೆ ಸುಳಿಯದೆ, ಇವರ ಎಲ್ಲಾ ಅಕ್ರಮಗಳಿಗೆ ಅಭಯ ಹಸ್ತ ನೀಡುತ್ತಿದ್ದಾರೆ. ಇಲ್ಲಿ ಮಾತ್ರವಲ್ಲ ಜಿಲ್ಲೆಯ ಹಲವು ಕಡೆಗಳಲ್ಲಿ ಇದೇ ಪರಿಸ್ಥಿತಿ ಮುಂದುವರಿದಿದ್ದು, ವಿರೋಧ ಪಕ್ಷಗಳು ಕೂಡ ಮೌನಕ್ಕೆ ಶರಣಾಗಿದೆ. ಚುನಾವಣಾ ಸಮಯದಲ್ಲಿ ಕಾರ್ಯಕರ್ತರನ್ನು ಬಡಿದಾಡಿಸುವ ನಾಯಕರು ಅಕ್ರಮ ಮರಳುಗಾರಿಕೆಯಲ್ಲಿ ಪಕ್ಷ ಭೇದ ಮರೆತು ಜೊತೆಯಾಗಿಯೇ ದಂಧೆ ನಡೆಸುತ್ತಿದ್ದಾರೆ. ನೇತ್ರಾವತಿ, ಪಾಲ್ಗುಣಿ, ಶಾಂಭವಿ, ನಂದಿನಿ ಹೀಗೆ ಜಿಲ್ಲೆಯ ಹಲವಾರು ನದಿ, ತೊರೆಗಳ ಒಡಲು ಅಕ್ರಮ ಮರಳುಗಾರಿಕೆಯಿಂದ ಬರಿದಾಗುತ್ತಿದೆ.

ಇದಕ್ಕೆ ಪುಷ್ಟಿ ನೀಡುವಂತೆ ನಿನ್ನೆಯಷ್ಟೇ ಮೂಲ್ಕಿ ಠಾಣಾ ವ್ಯಾಪ್ತಿಯ ಅತಿಕಾರಿಬೆಟ್ಟು ಬಾನೊಟ್ಟು ಶಾಂಭವಿ ನದಿಯಲ್ಲಿ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದ ಜಾಗಕ್ಕೆ ಗಣಿ ಇಲಾಖೆ ದಾಳಿ ನಡೆಸಿದಾಗ ಅತಿಕಾರಿಬೆಟ್ಟು, ಬಳ್ಕುಂಜೆ, ಕರ್ನಿರೆ ಪ್ರದೇಶಗಳಲ್ಲಿ ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿದ್ದ ವಿವಿಧ ಪಕ್ಷಗಳ ಮುಖಂಡರು ಸ್ಥಳದಿಂದ ಪರಾರಿಯಾಗಿದ್ದಾರೆ. ಮುಲ್ಕಿ, ಕರ್ನಿರೆ, ಬಲ್ಕುಂಜೆ ನದಿಯ ಪರಿಸರ ಪ್ರದೇಶದಲ್ಲೆ ಪೈಪ್ ಲೈನ್, ಕೊಂಕಣ ರೈಲ್ವೆ ಸೇತುವೆ ಹಾದುಹೋಗಿರುತ್ತದೆ. ಹೀಗೆ ಮುಂದುವರಿದರೆ ಇದಕ್ಕೆ ಕಂಟಕ ತಪ್ಪಿದ್ದಲ್ಲ.! ಅಕ್ರಮದಂಧೆಕೋರರಿಗೆ ಪಕ್ಷ-ಭೇದ, ಜಾತಿ-ಧರ್ಮ, ಕೋಮು ಬೇಧ-ಬಾವವಿಲ್ಲ, ದೋಚುವುದರಲ್ಲಿ ಮಾತ್ರ ಒಗ್ಗಟ್ಟು ಪ್ರದರ್ಶಿಸುತ್ತಿದ್ದಾರೆ. ನಿರಂತರವಾಗಿ ಇಂತಹ ಅಕ್ರಮ ಚಟುವಟಿಕೆಗಳು ರಾಜಾರೋಷವಾಗಿ ಜಿಲ್ಲೆಯಲ್ಲಿ ನಡೆಯುತ್ತಿದ್ದರೂ ಪ್ರಶ್ನಿಸಬೇಕಾದ ವಿರೋಧ ಪಕ್ಷಗಳು ಕೂಡ ಕೈ ಜೋಡಿಸಿ ಮೌನಕ್ಕೆ ಶರಣಾಗಿದೆ. ಇದು ದುರಂತ ಅನ್ನದೇ ಬೇರೆ ವಿಧಿಯಿಲ್ಲ.