ಕೋಳಿ ಅಂಕ ಜೂಜಾಟಕ್ಕೆ ಇನ್ಮುಂದೆ ನಿಷೇಧ.. ಡಿಜಿಪಿ ಖಡಕ್ ಆದೇಶ

ಕರಾವಳಿ

ಸಂಪ್ರದಾಯದ ಹೆಸರಿನಲ್ಲಿ ಜಾತ್ರೋತ್ಸವ, ಕಂಬಳದಲ್ಲಿ ಕೋಳಿ ಅಂಕ ಜೂಜಾಟಕ್ಕೆ ನೋ ಪರ್ಮೀಶನ್.!

ನಿರಂತರವಾಗಿ ನಡೆಯುತ್ತಿರುವ ಕೋಳಿ ಅಂಕ, ಜೂಜಿಗೆ ಕೊನೆಗೂ ಅಂಕುಶ ಬಿದ್ದಿದೆ. ಈ ಬಗ್ಗೆ ರಾಜ್ಯ ಪೊಲೀಸ್ ನಿರ್ದೇಶಕರು (ಡಿಜಿಪಿ) ಕೋಳಿ ಅಂಕ ಜೂಜಿಗೆ ನಿಷೇಧ ಹೇರಿ ಆದೇಶ ಹೊರಡಿಸಿದ್ದಾರೆ. ರಾಷ್ಟ್ರೀಯ ಪರಿಸರ ಒಕ್ಕೂಟ ಕೋಳಿ ಅಂಕದಿಂದ ಆಗುತ್ತಿರುವ ಪರಿಣಾಮಗಳ ಬಗ್ಗೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ದೂರು ನೀಡಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಡಿಜಿಪಿ ಅವರು, ಕೋಳಿ ಅಂಕವು ಪ್ರಾಣಿ ಹಿಂಸೆ ತಡೆ ಕಾಯ್ದೆ-1960 ಕಲಂ 11 ರ ಪ್ರಕಾರ ಅಪರಾಧ. ಈ ಕಾಯಿದೆಯನ್ನು ಎಲ್ಲಾ ಠಾಣಾ ವ್ಯಾಪ್ತಿಗಳಲ್ಲಿ ಕಡ್ಡಾಯವಾಗಿ ಅನುಷ್ಠಾನಕ್ಕೆ ತರಬೇಕೆಂದು ಆದೇಶದಲ್ಲಿ ತಿಳಿಸಿದ್ದಾರೆ.

ಕರಾವಳಿ ಭಾಗಗಳಲ್ಲಿ ಸಂಪ್ರದಾಯದ ಹೆಸರಿನಲ್ಲಿ ಕೋಳಿ ಅಂಕ ಜೂಜಾಟ ಭರ್ಜರಿಯಾಗಿ ನಡೆಯುತ್ತಿರುತ್ತದೆ. ಜಾತ್ರೆ, ಕೋಲ, ನೇಮ, ರಥೋತ್ಸವ ಕಾರ್ಯಕ್ರಮಕ್ಕೆ ಸಂಘಟಕರು ಸೀಮಿತ ಅವಧಿಗೆ ಸ್ಥಳೀಯ ಠಾಣೆಯಿಂದ ಮೌಖಿಕವಾಗಿ ಅನುಮತಿ ಪಡೆದರೆ ಇದು ಕೆಲವೊಮ್ಮೆ ವಾರ, ತಿಂಗಳುಗಳ ಕಾಲ ನಡೆಯುವುದು ಇದೆ. ಕೇವಲ ಕೋಳಿ ಅಂಕ ಒಂದರಲ್ಲೇ ಕರಾವಳಿಯಲ್ಲಿ ಪ್ರತಿ ನಿತ್ಯ ಕೋಟಿಗಟ್ಟಲೆ ರೂಪಾಯಿಯಲ್ಲಿ ಜೂಜಾಟ ನಡೆಯುತ್ತಿದೆ. ಕೆಲವೊಂದು ಭಾಗಗಳಲ್ಲಿ ಪೆಂಡಾಲ್ ಹಾಕಿ ಅಲ್ಲಿಯೇ ಊಟ, ನಿದ್ದೆ ಮಾಡುವ ವ್ಯವಸ್ಥೆ ಮಾಡಿ ದಿನದ 24 ತಾಸು ಎಗ್ಗಿಲ್ಲದೆ ಕೋಳಿ ಅಂಕ ಜೂಜಾಟ ರಾಜಾರೋಷವಾಗಿ ನಡೆಯುತ್ತಿರುತ್ತದೆ. ವಿದ್ಯಾರ್ಥಿಗಳು, ಯುವ ಸಮುದಾಯ ಬಹುತೇಕವಾಗಿ ಈ ಜೂಜಿಗೆ ಬಲಿಯಾಗುತ್ತಿದ್ದು, ಕನಿಷ್ಠ 100 ರೂಪಾಯಿಂದ 5 ಲಕ್ಷದವರೆಗೆ ಬೆಟ್ಟಿಂಗ್ ಕೂಡ ನಡೆಯುತ್ತಿರುತ್ತದೆ. ಕರಾವಳಿ ಭಾಗದ ದೊಡ್ಡ ದೊಡ್ಡ ಜಾತ್ರೆಗಳಲ್ಲಿ ಒಂದೊಂದು ಕೋಳಿಗಳ ಮೇಲೆ 1 ರಿಂದ 5 ಲಕ್ಷ ರೂಪಾಯಿ ವರೆಗೆ ಬೆಟ್ಟಿಂಗ್ ನಡೆಯುತ್ತದೆ. ರಾಜ್ಯದಲ್ಲಿ ಪ್ರತಿ ನಿತ್ಯ 10 ಸಾವಿರಕ್ಕೂ ಅಧಿಕ ಕೋಳಿಗಳು ಬಲಿಯಾಗುತ್ತಿವೆ. ಇದರಲ್ಲಿ ಶೇಕಡಾ 60 ರಷ್ಟು ಕರಾವಳಿಯ ಪಾಲಿದೆ.

ಇನ್ನು ಜಾತ್ರೋತ್ಸವ, ಕಂಬಳ ಗಳಲ್ಲೂ ಕೋಳಿ ಅಂಕದ ಜೂಜಾಟದ ಕರಿ ನೆರಳು ಗೋಚರಿಸುತ್ತದೆ. ಇಲ್ಲಿ ಕೋಳಿ ಅಂಕ, ಜೂಜಾಟ ಅವ್ಯಾಹತವಾಗಿ ನಡೆಯುತ್ತಿದೆ. ಕೆಲವರು ಇದನ್ನು ಸಂಪ್ರದಾಯದ ಹೆಸರಿನಲ್ಲಿ ದಂಧೆಯಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಣ ಪಣವಿಟ್ಟು ನಡೆಯುವ ಈ ಜೂಜು ಆಟಕ್ಕೆ ವಿದ್ಯಾರ್ಥಿಗಳು, ಯುವ ಸಮುದಾಯ, ಕೂಲಿ ಕಾರ್ಮಿಕರು ಮಾರುಹೋಗಿದ್ದಾರೆ.