ಖಾಯಂ ಭಾಗ್ಯಜ್ಯೋತಿಗೆ ಡಿ-ಲಿಂಕ್ ಆಯ್ಕೆ ಮಾಡಿ, ಹೊಸ ಬಾಡಿಗೆ ಮನೆಯ ಆರ್ ಆರ್ ಸಂಖ್ಯೆಗೆ ನೋಂದಣಿ ಸೌಲಭ್ಯ

ರಾಜ್ಯ

ರಾಜ್ಯ ಸರಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಜ್ಯೋತಿ ವಿದ್ಯುತ್ ಯೋಜನೆಯ ನಿಯಮಾವಳಿಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದ್ದು, ಬಾಡಿಗೆ ಮನೆಯಲ್ಲಿರುವ ಯೋಜನೆ ಫಲಾನುಭವಿಗಳಿಗೆ ಡಿ ಲಿಂಕ್ ಆಯ್ಕೆ ನೀಡಲಾಗಿದೆ.

ಗೃಹಜ್ಯೋತಿ ಯೋಜನೆ ಫಲಾನುಭವಿಗಳು ಇನ್ನು ಮುಂದೆ ಬಾಡಿಗೆ ಮನೆ ಬದಲಾವಣೆ ಮಾಡಿದರೆ ಚಿಂತಿಸಬೇಕಿಲ್ಲ. ಮನೆ ಬದಲಾಯಿಸಿದವರು ಕೂಡಲೇ ಹಳೆ ಮನೆಯ ವಿಳಾಸದ ವಿದ್ಯುತ್ ಸಂಪರ್ಕವನ್ನು ರದ್ದುಪಡಿಸಿ, ಹೊಸ ಮನೆಯ ವಿಳಾಸಕ್ಕೆ ಯೋಜನೆಯ ಫಲ ಪಡೆಯಬಹುದು. ಇದಕ್ಕಾಗಿ ಇಂಧನ ಇಲಾಖೆಯು ಡಿ ಲಿಂಕ್ ಆಯ್ಕೆ ನೀಡಿದೆ.

ಗೃಹಜ್ಯೋತಿ ಯೋಜನೆ ಜಾರಿ ನಂತರ ಕೆಲ ಸಮಸ್ಯೆಗಳು ಎದುರಾಗಿದ್ದವು. ಬಾಡಿಗೆ ಮನೆಯಲ್ಲಿದ್ದವರು ನಾನಾ ಕಾರಣಕ್ಕೆ ಮನೆ ಬದಲಾಯಿಸಿದ ಸಂದರ್ಭದಲ್ಲಿ ಹೊಸ ಮನೆಯ ಆರ್ ಆರ್ ಸಂಖ್ಯೆಗೆ ತಮ್ಮ ಆಧಾರ್ ಜೋಡನೆ ಮಾಡಿ ಗೃಹಜ್ಯೋತಿ ಯೋಜನೆಯ ಸೌಲಭ್ಯ ಪಡೆಯಲು ಆಗುತ್ತಿರಲಿಲ್ಲ. ಜೊತೆಗೆ ಈ ಹಿಂದೆ ಇದ್ದ ಮನೆಯ ವಿದ್ಯುತ್ ಸಂಪರ್ಕಕ್ಕೆ ಜೋಡಣೆ ಯಾಗಿದ್ದ ಆಧಾರ್ ಸಂಖ್ಯೆಯನ್ನು ರದ್ದುಪಡಿಸಲು ಆಗುತ್ತಿರಲಿಲ್ಲ. ಈ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಹೊಸ ಬಾಡಿಗೆ ಮನೆಯ ಆರ್ ಆರ್ ಸಂಖ್ಯೆಗೆ ಸುಲಭವಾಗಿ ನೋಂದಣಿ ಸೌಲಭ್ಯ ಮಾಡಿಕೊಳ್ಳುವ ಸೌಲಭ್ಯ ಕಲ್ಪಿಸಲಾಗಿದ್ದು ಸೇವಾ ಸಿಂಧು ಪೋರ್ಟಲ್ ನಲ್ಲಿ ಬದಲಾವಣೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.

ಸೇವಾ ಸಿಂಧು ತಂತ್ರಾಂಶದಲ್ಲಿ ಇನ್ನೊಂದು ವಾರದಲ್ಲಿ ಈ ಸೇವೆ ಆರಂಭವಾಗಲಿದ್ದು, ಫಲಾನುಭವಿಗಳು ಬದಲಾವಣೆ ಮಾಡಿಕೊಳ್ಳಬಹುದು. ಯಾವುದೇ ವ್ಯಕ್ತಿ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದು, ಈಗಾಗಲೇ ಗೃಹಜ್ಯೋತಿ ಯೋಜನೆಯ ಲಾಭ ಪಡೆದು ಕೊಳ್ಳುತ್ತಿದ್ದರೆ ಮತ್ತು ಈಗ ಆ ಮನೆಯನ್ನು ಬದಲಾಯಿಸಿದರೆ ಹಳೆ ನೋಂದಣಿ ರದ್ದುಪಡಿಸಿಕೊಂಡು ಮತ್ತೆ ಹೊಸ ಮನೆಯ ಆರ್ ಆರ್ ಸಂಖ್ಯೆ ಜತೆಗೆ ಅರ್ಜಿ ಸಲ್ಲಿಸಬೇಕಾಗುತ್ತದೆ.ಇದಕ್ಕೆ ಡಿ ಲಿಂಕ್ ಪ್ರಕ್ರಿಯೆ ಮಾಡಬೇಕು. ಈ ಸಂಬಂಧ ಎಲ್ಲ ವಿದ್ಯುತ್ ಸರಬರಾಜು ಕಂಪನಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಇಂಧನ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಆದೇಶದಲ್ಲಿ ತಿಳಿಸಿದ್ದಾರೆ.