ಹಟ್ಟಿಗೆ ನುಗ್ಗಿ ದನ ಕಳವು ಪ್ರಕರಣ: ಮೂಡುಬಿದಿರೆಯ ಇಬ್ಬರ ಬಂಧನ

ಕರಾವಳಿ

ನಗರ ಪೊಲೀಸ್ ಕಮಿಷನರ್ ವ್ಯಾಪ್ತಿಯ ಹಲವು ಕಡೆ ದನ ಕಳವು ಪ್ರಕರಣದಲ್ಲಿ ಭಾಗಿಯಾಗಿರುವ ಇಬ್ಬರನ್ನು ಬಜಪೆ ಮತ್ತು ಮೂಡುಬಿದಿರೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದು, ಓರ್ವ ಪರಾರಿಯಾಗಿದ್ದಾನೆ. ಮೂಡುಬಿದಿರೆ ಕೊಡಂಗಲ್ ನಿವಾಸಿ ಮೊಹಮ್ಮದ್ ಶರೀಫ್ ಮತ್ತು ಮೂಡುಬಿದಿರೆ ಹಿದಾಯತ್ ನಗರ ನಿವಾಸಿ ಹಸೈನಾರ್ ಬಂಧಿತ ಆರೋಪಿಗಳು. ಹಂಝಾ ಪರಾರಿಯಾದ ಆರೋಪಿ.

ಬಡಗ ಎಡಪದವು ಗ್ರಾಮದ ತಿಪ್ಪೆಬೆಟ್ಟು ನಿವಾಸಿ ಸುಜಾತ ಎಂಬವರ ಮನೆಯ ಹಟ್ಟಿಯಲ್ಲಿ ಕಟ್ಟಿ ಹಾಕಿದ್ದ ದನಗಳ ಪೈಕಿ 2 ಹಸುಗಳು ಮತ್ತು 1 ಕರುವನ್ನು ಕಳವು ಮಾಡಿದ್ದು, ಈ ಬಗ್ಗೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಫೆಬ್ರವರಿ 8 ರಂದು ಬೆಳಿಗ್ಗೆ 7.15 ಗಂಟೆಗೆ ಮುಳ್ಳೂರು ಕ್ರಾಸ್ ಬಳಿ ಬಿಳಿ ಬಣ್ಣದ ಕಾರಿನಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿರುವುದನ್ನು ಕಂಡಾಗ ಸಂಶಯಗೊಂಡ ಪೊಲೀಸರು ಕಾರಿನ ಬಳಿ ತೆರಳಿದಾಗ ಪರಾರಿಯಾಗಲು ಯತ್ನಿಸಿದ್ದಾರೆ. ಆದರೆ ಪೊಲೀಸರು ತಮ್ಮ ವಾಹನವನ್ನು ಕಾರಿಗೆ ಅಡ್ಡ ನಿಲ್ಲಿಸಿ ಹಿಡಿಯಲು ಪ್ರಯತ್ನಿಸಿದಾಗ ಹಂಝಾ ಪರಾರಿಯಾಗಿದ್ದಾನೆ. ಉಳಿದ ಇಬ್ಬರನ್ನು ಪೊಲೀಸರು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳು ತಮ್ಮ ಕೃತ್ಯವನ್ನು ಒಪ್ಪಿಕೊಂಡಿದ್ದು, ಕದ್ದ ದನವನ್ನು ತೋಡಾರಿನ ಅನ್ಸಾರ್ ಎಂಬಾತನಿಗೆ ಮಾರಾಟ ಮಾಡಿರುವುದಾಗಿ ಒಪ್ಪಿಕೊಂಡಿರುತ್ತಾರೆ. ಆರೋಪಿಗಳಿಂದ ಕಾರನ್ನು ವಶಪಡಿಸಿಕೊಳ್ಳಲಾಗಿದೆ.

ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರವಾಲ್ ಮಾರ್ಗದರ್ಶನದಂತೆ ಡಿಸಿಪಿಗಳಾದ ಗೋಯೆಲ್ ಮತ್ತು ದಿನೇಶ್ ಕುಮಾರ್ ನಿರ್ದೇಶನದಂತೆ ಎಸಿಪಿ ಮನೋಜ್ ಕುಮಾರ್ ಮತ್ತು ಪೊಲೀಸ್ ನಿರೀಕ್ಷಕ ಸಂದೀಪ್ ಜಿ ಎಸ್ ನೇತೃತ್ವದಲ್ಲಿ ಮತ್ತು ಮೂಡುಬಿದಿರೆ ಠಾಣಾ ನಿರೀಕ್ಷಕ ಸಂದೇಶ್ ತಂಡ ಮತ್ತು ಬಜಪೆ ಪಿಎಸ್ಐ ರೇವಣ ಸಿದ್ದಪ್ಪ, ಪಿಎಸ್ಐ ಗುರಪ್ಪ ಕಾಂತಿ, ಕುಮಾರೇಶನ್, ಬಜಪೆ ಎಎಸ್ಐ ರಾಮಪೂಜಾರಿ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.