ಠಾಣೆಗೆ ಬಂದ ಮಹಿಳೆಗೆ ಕಿರುಕುಳ: ಕಾವೂರು ಪೊಲೀಸ್ ಠಾಣೆಯ ಮುಖ್ಯ ಪೇದೆ ಸಂತೋಷ್ ಅಮಾನತು

ಕರಾವಳಿ

ಪ್ರಕರಣವೊಂದರ ದೂರು ನೀಡಲು ಪೊಲೀಸ್ ಠಾಣೆಗೆ ಬಂದ ಮಹಿಳೆಗೆ ಅಸಹ್ಯ ಸಂದೇಶ ಕಳುಹಿಸಿ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಹೆಡ್ ಕಾನ್ ಸ್ಟೇಬಲ್ ನ್ನು ಅಮಾನತುಗೊಳಿಸಿ ಪೊಲೀಸ್ ಕಮೀಷನರ್ ಆದೇಶಿಸಿದ್ದಾರೆ. ಕಾವೂರು ಪೊಲೀಸ್ ಠಾಣೆ ಹೆಡ್ ಕಾನ್ ಸ್ಟೇಬಲ್ ಸಂತೋಷ್ ಅಮಾನತುಗೊಂಡ ಸಿಬ್ಬಂದಿ.

ಮಹಿಳೆ ಪ್ರಕರಣವೊಂದಕ್ಕೆ ಸಂಬಂಧಿಸಿ ದೂರು ನೀಡಲು ಪೊಲೀಸ್ ಠಾಣೆಗೆ ತೆರಳಿದ್ದು, ಈ ವೇಳೆ ಮಹಿಳೆಯ ಮೊಬೈಲ್ ನಂಬರ್ ಪಡೆದ ಹೆಡ್ ಕಾನ್ ಸ್ಟೇಬಲ್ ಸಂತೋಷ್ ಆಕೆಗೆ ಅಸಭ್ಯ ರೀತಿಯಲ್ಲಿ ಸಂದೇಶ ಕಳುಹಿಸಿ ಮಾನಸಿಕ ಕಿರುಕುಳ ನೀಡುತ್ತಿದ್ದ. ಇಷ್ಟು ಮಾತ್ರವಲ್ಲದೆ ಈ ಬಗ್ಗೆ ಯಾರಲ್ಲಾದರೂ ದೂರು ನೀಡಿದರೆ ಜೀವನ ಪರ್ಯಂತ ಕೊರಗುವಂತೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಈ ಘಟನೆಗಳಿಂದ ನೊಂದ ಮಹಿಳೆ ಪೊಲೀಸ್ ಕಮಿಷನರ್ ಅನುಪಮ್ ಅಗರವಾಲ್ ಗೆ ದೂರು ನೀಡಿದ್ದರು.

ಮಹಿಳೆ ದೂರನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಕಮಿಷನರ್ ಮೆಲ್ನೋಟಕ್ಕೆ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಹೆಡ್ ಕಾನ್ ಸ್ಟೇಬಲ್ ನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸಿ ವರದಿ ನೀಡುವಂತೆ ಮಂಗಳೂರು ಉತ್ತರ ವಿಭಾಗದ ಎಸಿಪಿ ಗೆ ಆದೇಶ ಮಾಡಿದ್ದಾರೆ.