2024 ಏಪ್ರಿಲ್ ನಂತರ ಟೋಲ್​ಗಳಲ್ಲಿ ಹಂತ-ಹಂತವಾಗಿ ಫಾಸ್ಟ್ ಟ್ಯಾಗ್ ಕಣ್ಮರೆಯಾಗಲಿದೆ

ರಾಷ್ಟ್ರೀಯ

ಟೋಲ್ ಗೇಟ್‌ಗಳಲ್ಲಿ ವಾಹನ ಚಾಲಕರು ಕಾಯುವ ಸಮಯವನ್ನು ಕಡಿಮೆ ಮಾಡಿ, ತ್ವರಿತ ಪಾವತಿಗೆ ಅವಕಾಶ ಕಲ್ಪಿಸುವ ಫಾಸ್ಟ್ ಟ್ಯಾಗ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿತ್ತು. ಆದರೆ ಕೇಂದ್ರ ಸರ್ಕಾರ ಶೀಘ್ರದಲ್ಲೇ ಇದಕ್ಕೆ ಫುಲ್​ಸ್ಟಾಪ್​ ಹಾಕಲು ತೀರ್ಮಾನಿಸಿದೆ. ಏಪ್ರಿಲ್​ ವೇಳೆಗೆ ಈ ವ್ಯವಸ್ಥೆ ಸ್ಥಗಿತಗೊಳ್ಳುವ ಸಾಧ್ಯತೆಯಿದೆ. ಫಾಸ್ಟ್ ಟ್ಯಾಗ್ ವ್ಯವಸ್ಥೆಯನ್ನು ತೆಗೆದುಹಾಕಿ ಜಿಪಿಎಸ್​ ಆಧಾರಿತ ವ್ಯವಸ್ಥೆಯನ್ನು ಪರಿಚಯಿಸುವುದಾಗಿದೆ. ಜಿಪಿಎಸ್ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆಯನ್ನು ಏಪ್ರಿಲ್ ವೇಳೆಗೆ ದೇಶಾದ್ಯಂತ ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ.

2024ರ ಲೋಕಸಭೆ ಚುನಾವಣಾ ನಡೆಯಲಿದ್ದು, ನೀತಿ ಸಂಹಿತೆ ಜಾರಿಯಾಗುವ ಮುನ್ನವೇ ಕೇಂದ್ರ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಅವರು ಈ ಜಿಪಿಎಸ್ ಆಧಾರಿತ ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ ವ್ಯವಸ್ಥೆಯನ್ನು ದೇಶದಲ್ಲಿ ಜಾರಿಗೆ ತರಲು ಶ್ರಮಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಕೇಂದ್ರವು ಈಗಾಗಲೇ ಸಲಹೆಗಾರರನ್ನು ಸಹ ನೇಮಿಸಿದೆ ಎಂದು ವರದಿಯಾಗಿದೆ. 2021 ರಲ್ಲಿ ಪಾಸ್ಟ್ ಟ್ಯಾಗ್ ಜಾರಿಗೆ ಬಂದಿತ್ತು. 2024 ಏಪ್ರಿಲ್ ನಂತರ ಟೋಲ್​ಗಳಲ್ಲಿ ಹಂತ ಹಂತವಾಗಿ ಫಾಸ್ಟ್ ಟ್ಯಾಗ್ ಕಣ್ಮರೆಯಾಗಲಿದೆ.

ಜಿಪಿಎಸ್ ಆಧಾರಿತ ವ್ಯವಸ್ಥೆಯನ್ನು ಅಳವಡಿಸಿದ ನಂತರ ಸ್ವಯಂಚಾಲಿತ ನಂಬರ್ ಪ್ಲೇಟ್ ಗುರುತಿಸುವಿಕೆ ವ್ಯವಸ್ಥೆಯ ಮೂಲಕ ಟೋಲ್ ಕಡಿತಗೊಳಿಸಲಾಗುತ್ತದೆ. ಇಡೀ ಪ್ರಕ್ರಿಯೆಯು ಉಪಗ್ರಹಕ್ಕೆ ಸಂಪರ್ಕ ಹೊಂದಿರುತ್ತದೆ. ಟೋಲ್ ವಿಚಾರದಲ್ಲಿ ಹೊಸ ತಂತ್ರಜ್ಞಾನ ಅಳವಡಿಸುವ ಉದ್ದೇಶದಿಂದ ಕೇಂದ್ರ ಹೊಸ ವ್ಯವಸ್ಥೆ ಜಾರಿಗೆ ತರಲು ಸಿದ್ಧವಾಗಿದೆ.