ಬಂಟ್ವಾಳ ಮೆಸ್ಕಾಂ ಸಹಾಯಕ ಇಂಜಿನಿಯರ್ ಸರ್ವಾಧಿಕಾರಿ ಧೋರಣೆ ವಿರುದ್ಧ ಆಕ್ರೋಶ-ಪ್ರತಿಭಟನೆಗೆ ಸಿದ್ಧತೆ

ಕರಾವಳಿ

ಬಂಟ್ವಾಳ ಮೆಸ್ಕಾಂ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಾಯಕ ಇಂಜಿನಿಯರ್ ( ವಿ) ಅರುಣೋದಯ ಅವರ ದುರ್ವರ್ತನೆ ಹಾಗೂ ಸರ್ವಾಧಿಕಾರಿ ಧೋರಣೆಯ ವಿರುದ್ಧ ಗುತ್ತಿಗೆದಾರರು ಹಾಗೂ ಗ್ರಾಹಕರು ವ್ಯಾಪಕ ಆಕ್ರೋಶ ಪಡಿಸಿದ್ದು ಪ್ರತಿಭಟನೆಗೆ ಸಜ್ಜಾಗುತ್ತಿದ್ದಾರೆ.
ಗುತ್ತಿಗೆದಾರರು ಮತ್ತು ಗ್ರಾಹಕರಿಗೆ ಸರಿಯಾಗಿ ಸ್ಪಂದಿಸದೆ ಉಢಾಪೆ ಉತ್ತರ ನೀಡುತ್ತಾ, ಕಡತಗಳನ್ನು ವಿಲೇವಾರಿ ಮಾಡುವಲ್ಲಿ ವಿಳಂಬ ಧೋರಣೆ ತೋರುತ್ತಾ, ಅನಗತ್ಯ ನಿರ್ಲಕ್ಷ್ಯ ವಹಿಸುತ್ತಿರುವ ಅರುಣೋದಯ ಅವರನ್ನು ವರ್ಗಾವಣೆ ಮಾಡಬೇಕು, ಇಲ್ಲವೇ ಶೀಘ್ರ ಶಿಸ್ತು ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಈಗಾಗಲೇ ಸಂಬಂಧಪಟ್ಟವರಿಗೆ ದೂರು ನೀಡಲಾಗಿದ್ದು ತಕ್ಷಣ ಸ್ಪಂದಿಸದಿದ್ದಲ್ಲಿ ನಾವು ಪ್ರತಿಭಟನೆ ನಡೆಸುತ್ತೇವೆ ಎಂದು ಗುತ್ತಿಗೆದಾರರು ಹಾಗೂ ಗ್ರಾಹಕರು ಎಚ್ಚರಿಸಿದ್ದಾರೆ.

ಅರುಣೋದಯ ಅವರು 2015 ರಿಂದ ಕಿರಿಯ ಇಂಜಿನಿಯರ್ ಆಗಿ ಬಂಟ್ವಾಳ ವಿಭಾಗೀಯ ತಾಂತ್ರಿಕ ಶಾಖೆಯಲ್ಲಿ ಕಾರ್ಯನಿರ್ವಹಿಸಿದ್ದು 2023ರಲ್ಲಿ ಸಹಾಯಕ ಇಂಜಿನಿಯರ್ ( ತಾಂತ್ರಿಕ) ಆಗಿ ಭಡ್ತಿಗೊಳ್ಳುವ ಸಂದರ್ಭ ಪ್ರಭಾವ ಬಳಸಿ ಮತ್ತೆ ಅದೇ ತಾಂತ್ರಿಕ‌ ಶಾಖೆಯಲ್ಲಿ 8 ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಸುದೀರ್ಘ ಕಾಲ ಒಂದೇ ಕಚೇರಿಯಲ್ಲಿ ಕಾರ್ಯ ನಿರ್ವಹಿಸುವುದು ದುರಂತವಲ್ಲವೇ? ಈ ಬಗ್ಗೆ ಮೇಲಾಧಿಕಾರಿಗಳು ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗುತ್ತಿಗೆದಾರರು ಮತ್ತು ಗ್ರಾಹಕರು ಪ್ರಶ್ನಿಸಿದ್ದಾರೆ.

ಪ್ರಸ್ತುತ ಇವರು ಹೆಚ್.ಟಿ. ಮತ್ತು ಎಲ್.ಟಿ ಸ್ಥಾವರಗಳ ಹೊಸ ಸಂಪರ್ಕದ ಕಡತಗಳ ಪರಿಶೀಲನಾ ಕಾರ್ಯ ನಿರ್ವಹಿಸುತ್ತಿದ್ದು ಕಡತಗಳನ್ನು ಉದ್ಧೇಶಪೂರ್ವಕವಾಗಿ ವಿಳಂಬ ಮಾಡುವುದರೊಂದಿಗೆ ಪ್ರಶ್ನಿಸಿದರೆ ಉಢಾಪೆಯ, ಬೇಜಬಾಬ್ಧಾರಿತನದ ಉತ್ತರ ಕೊಡುತ್ತಾರೆ ಎಂದು ಆರೋಪಿಸಿರುವ ಗುತ್ತಿಗೆದಾರರು ಹಾಗೂ ಗ್ರಾಹಕರು ಇವರ ಕಾರ್ಯವೈಖರಿ ಬಗ್ಗೆ ಸುಮಾರು ವರ್ಷದಿಂದ ಬೇಸತ್ತು ಜನಸಂಪರ್ಕ ಸಭೆಯಲ್ಲಿ ಮತ್ತು ಮೇಲಾಧಿಕಾರಿಗಳಿಗೆ ಈಗಾಗಲೇ ಹಲವು ಬಾರಿ ಮೌಖಿಕ ದೂರು ನೀಡಿದ್ದಾರೆ. ಆದರೆ ಯಾವುದೇ ಸ್ಪಂದನೆ ದೊರೆತಿಲ್ಲ. ಮೇಲಾಧಿಕಾರಿಗಳಿಂದ ಕೆಳಹಂತದವರೆಗೆ ಉತ್ತಮ ರೀತಿಯಲ್ಲಿ ಸೇವೆ ಮಾಡುವ ಅತೀ ಹೆಚ್ಚು ಮಂದಿ ಇರುವ ಮೆಸ್ಕಾಂ ಬಂಟ್ವಾಳ ವಿಭಾಗಕ್ಕೆ ಇಂತಹ ಒಬ್ಬ ಅಧಿಕಾರಿಯಿಂದಾಗಿ ಕೆಟ್ಟ ಹೆಸರು ಬರುತ್ತಿದೆ ಎಂದು ಗ್ರಾಹಕರು ದೂರಿದ್ದಾರೆ.

ಅರ್ಜಿಯನ್ನು ಮತ್ತು ಅಂದಾಜು ಪಟ್ಟಿಯನ್ನು ವಿನಾಕಾರಣ ಸಂಬಂಧಪಟ್ಟ ಸೆಕ್ಷನ್ ಗೆ ವಾಪಸ್ಸು ಹಾಕುವುದು ಇವರ ಕೆಟ್ಟ ಚಟವಾಗಿದ್ದು ಕಾರಣ ಕೇಳಿದರೆ ಇನ್ನಷ್ಟು ಸತಾಯಿಸುವ ಕೀಳು ಮಟ್ಟದ ವರ್ತನೆಯ ಈ ಅಧಿಕಾರಿಯ ನಡವಳಿಕೆಯನ್ನು ಸಹಿಸುವುದು ಅಸಾಧ್ಯವಾಗಿದೆ. ಒಂದೊಂದು ಬಾರಿ ಕಡತಗಳನ್ನು ಗುತ್ತಿಗೆದಾರರ ಎದುರಿಗೆ ಬಿಸಾಡುವ ಅಮಾನವೀಯ ವರ್ತನೆಯನ್ನು ತೋರುತ್ತಾರೆ.
ಗುತ್ತಿಗೆದಾರರು ಹಾಗೂ ಗ್ರಾಹಕರೊಂದಿಗೆ ಸರಿಯಾದ ರೀತಿಯಲ್ಲಿ ಸ್ಪಂದಿಸದೆ ದುರಾಂಕಾರ ಪ್ರದರ್ಶಿಸುತ್ತಿರುವ ಈ ಅಧಿಕಾರಿ ಅನಗತ್ಯವಾಗಿ ಒಂದಲ್ಲೊಂದು ಕಾನೂನು ಹೇಳುವ ಮೂಲಕ ಸಮಸ್ಯೆಯನ್ನು ಸೃಷ್ಠಿಸುತ್ತಾರೆ. ಕೆಲಸದಲ್ಲಿ ಇಷ್ಟ ಇಲ್ಲದೆ ಇದ್ದರೆ ಇಂತಹವರು ಯಾಕೆ ಬರುತ್ತಾರೆ? ಇತರರ ಕರ್ತವ್ಯಕ್ಕೆ ಯಾಕೆ ಅಡ್ಡಿಪಡಿಸುತ್ತಾರೆ? ಇಂತಹ ಅಧಿಕಾರಿಗಳ ವಿರುದ್ಧ ಮೇಲಾಧಿಕಾರಿಗಳು ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗುತ್ತಿಗೆದಾರರ ಸಹಿತ ಗ್ರಾಹಕರು ದೂರಿನಲ್ಲಿ ಪ್ರಶ್ನಿಸಿದ್ದಾರೆ.

ಒಂದೇ ಕಚೇರಿಯಲ್ಲಿ ಸುದೀರ್ಘ ಕಾಲದಿಂದ ಬೀಡುಬಿಟ್ಟು ಜನರನ್ನು ಹಿಂಸಿಸುತ್ತಿರುವುದು ಮೇಲಾಧಿಕಾರಿಗಳಿಗೆ ಕಾಣುತ್ತಿಲ್ಲವೇ? ಅಥವಾ ಮೇಲಾಧಿಕಾರಿಗಳ ಮಾತಿಗೂ ಈ ಅಧಿಕಾರಿ ಬೆಲೆ ಕೊಡುತ್ತಿಲ್ಲವೇ? ಅಥವಾ ಯಾವುದಾದರೂ ಪ್ರಭಾವವನ್ನು ಬಳಸಿಕೊಂಡು ಇಲ್ಲೇ ನೆಲೆಯಾಗಿದ್ದಾರೆಯೇ ಇತ್ಯಾದಿ ಸಾಲು ಸಾಲು ಪ್ರಶ್ನೆಗಳು ಗುತ್ತಿಗೆದಾರರನ್ನು ಮತ್ತು ಗ್ರಾಹಕರನ್ನು ಕಾಡುತ್ತಿದೆ.
ಗುತ್ತಿಗೆದಾರರು ಯಾವುದೇ ವಿಚಾರಕ್ಕೆ ವಿಚಾರಿಸಲು ಬಂದರೆ ಬೇಜವಾಬ್ಧಾರಿತನದಿಂದ ಉಢಾಪೆಯಾಗಿ ಉತ್ತರಿಸುತ್ತಾರೆ. ಕರ್ತವ್ಯದ ಸಮಯದಲ್ಲಿ ಇವರ ಮುಂದೆ ಗುತ್ತಿಗೆದಾರರು ಬಂದರೆ 45 ನಿಮಿಷ ನಿರಂತರ ಮೊಬೈಲ್ ನಲ್ಲಿ ಮಾತನಾಡುವ ಮೂಲಕ ಗುತ್ತಿಗೆದಾರರನ್ನು ಕಡೆಗಣಿಸುತ್ತಾರೆ. ಇಂತಹ ವರ್ತನೆಗಳೆಲ್ಲವೂ ನಿಲ್ಲಬೇಕು. ಈ ಬಗ್ಗೆ ಈಗಾಗಲೇ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ಬಂಟ್ವಾಳದ ನಿಯೋಗ ಕಾರ್ಯನಿರ್ವಾಹಕ ಅಭಿಯಂತರಿಗೆ ತಿಳಿಸಿದ್ದು ಅವರು ಮೌಖಿಕ ಎಚ್ಚರಿಕೆಯನ್ನು ನೀಡಿದರೂ ಈ ಸಿಬ್ಬಂದಿ ಗಂಭೀರವಾಗಿ ಪರಿಗಣಿಸಿಲ್ಲ ಎಂದು ದೂರಲಾಗಿದೆ.

ಇದು ಕೇವಲ ಒಂದಿಬ್ಬರು ಗುತ್ತಿಗೆದಾರರ ಸಮಸ್ಯೆಯಾಗಿರದೆ ಬಹುತೇಕ ಗುತ್ತಿಗೆದಾರರು ಈ ಅಧಿಕಾರಿಯಿಂದ ಮಾನಸಿಕ ಹಿಂಸೆಯನ್ನು ಅನುಭವಿಸುತ್ತಿದ್ದಾರೆ. ಇವರ ವರ್ತನೆಯ ಬಗ್ಗೆ ಸಹ ಸಿಬ್ಬಂದಿಗಳಿಗೂ ಅಸಮಾಧಾನವಿದ್ದು
ಮೆಸ್ಕಾಂನ ಇತಿಹಾಸದಲ್ಲೇ ಇಂತಹ ದುರಾಂಕಾರಿ ಮತ್ತು ಅಸಭ್ಯ ವರ್ತನೆಯ ಅಧಿಕಾರಿಯನ್ನು ನಾವು ನೋಡುತ್ತಿರುವುದು ಪ್ರಥಮ ಎನ್ನುವ ಗುತ್ತಿಗೆದಾರರು ಮತ್ತು ಗ್ರಾಹಕರು ಇದೀಗ ಅಧಿಕಾರಿಯ ವಿರುದ್ದ ಪ್ರತಿಭಟನೆಗೆ ಮುಂದಾಗಿದ್ದಾರೆ.
ಈಗಾಗಲೇ ರಾಜ್ಯದ ಇಂಧನ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಮಾಜಿ ಸಚಿವರು ಹಾಗೂ ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ನೀಡಲಾಗಿದ್ದು ತಕ್ಷಣ ಅಧಿಕಾರಿಯ ವಿರುದ್ಧ ಕ್ರಮ ಜರುಗಿಸದಿದ್ದಲ್ಲಿ ಉಗ್ರ ರೀತಿಯಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಬಂಟ್ವಾಳ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ಹಾಗೂ ಗ್ರಾಹಕರ ವಲಯ ಎಚ್ಚರಿಕೆ ನೀಡಿದೆ.