ನಮ್ಮ ದೇಹಗಳು ಛಿದ್ರವಾದರೂ ಸರಿ, ದೇಶ ಛಿದ್ರಗೊಳ್ಳಲು ಬಿಡಲಾರೆವು: ಬಸವರಾಜ ಪೂಜಾರ

ಕರಾವಳಿ

ದೇಶದ ಐಕ್ಯತೆ, ಸೌಹಾರ್ದತೆ ಉಳಿಸಲು ಡಿವೈಎಫ್ಐ ಎಂತಹ ತ್ಯಾಗಕ್ಕೂ ಸಿದ್ಧ, ಕೋಮುವಾದಿ ಶಕ್ತಿಗಳಿಗೆ ಎಚ್ಚರಿಕೆ

ದೇಶದ ಐಕ್ಯತೆ, ಸಮಗ್ರತೆ, ಸಾರ್ವಭೌಮತ್ವದ ರಕ್ಷಣೆಗಾಗಿ ಡಿವೈಎಫ್ಐ ಸಂಗಾತಿಗಳು ಅಪಾರ ಪ್ರಮಾಣದ ತ್ಯಾಗ ಬಲಿದಾನಗಳನ್ನು ಗೈದಿದ್ದಾರೆ. ನಮ್ಮ ದೇಹಗಳು ಛಿದ್ರವಾದರೂ ಸರಿಯೇ ದೇಶವನ್ನು ಛಿದ್ರಗೊಳ್ಳಲು ಡಿವೈಎಫ್ಐ ಸಂಗಾತಿಗಳಾದ ನಾವು ಬಿಡಲಾರೆವು ಎಂದು ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಹೇಳಿದರು.

ಪೆಬ್ರವರಿ 23ರ ಶುಕ್ರವಾರ ನಗರದ ಬಜಾಲ್ ಪ್ರದೇಶದಲ್ಲಿ ಡಿವೈಎಫ್ಐ ಹುತಾತ್ಮ ನಾಯಕ ಶ್ರೀನಿವಾಸ್ ಬಜಾಲ್ ಅವರು ಹುತಾತ್ಮರಾದ ಸ್ಥಳದಲ್ಲಿ ಪುಷ್ಪಾರ್ಪಣೆ ಮಾಡಿ, ಡಿವೈಎಫ್ಐ 12ನೇ ಕರ್ನಾಟಕ ರಾಜ್ಯ ಸಮ್ಮೇಳನದ ಧ್ವಜ ಸ್ಥಂಭ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಯುವಜನರಿಗೆ ವರ್ಷಕ್ಕೆರಡು ಕೋಟಿ ಉದ್ಯೋಗದ ಆಮೀಷವೊಡ್ಡಿ ದಶಕದಿಂದ ದೇಶದಲ್ಲಿ ಆಡಳಿತ ನಡೆಸುತ್ತಿರುವ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ, ಯುವಜನರಿಗೆ ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವ ಬದಲು, ಯುವಜನರನ್ನು ಕೋಮು ವಿಷಬೀಜ ಬಿತ್ತಿ ಒಡೆಯಲು ಮುಂದಾಗುತ್ತಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ.

ದೇಶದಲ್ಲಿ ಇಂದಿಗೂ ಶಿಕ್ಷಣ, ಉದ್ಯೋಗ, ಆಹಾರ, ಆರೋಗ್ಯ ಸಮರ್ಪಕವಾಗಿ ಎಲ್ಲರಿಗೂ ದೊರೆಯುತ್ತಿಲ್ಲ. ಹಸಿವು, ಬಡತನಗಳಿಂದಾಗಿ ಜನತೆ ಆತ್ಮಹತ್ಯೆ ಮೊರೆಹೋಗುತ್ತಿದ್ದು, ಇದನ್ನು ತಡೆಗಟ್ಟುವ ಕೆಲಸವನ್ನು ಮೋದಿ ಸರಕಾರ ಮಾಡದಿರುವುದು ನಾಚಿಕೆಗೇಡು ಎಂದರು.

ದೇಶದ ಅಂತಃಸತ್ವ ಸಾಮರಸ್ಯ, ಸೌಹಾರ್ದ ಶಾಂತಿ ಕದಡಲು ಮತೀಯ ಶಕ್ತಿಗಳಿಗೆ ಸ್ವತಃ ಕೇಂದ್ರ ಸರಕಾರ ಕುಮ್ಮಕ್ಕು ನೀಡುತ್ತಿದ್ದು, ಯುವಜನರು ಈ ಅಪಾಯದ ಸುಳಿಗೆ ಸಿಲುಕದೆ, ಇವರಿಗೆ ಬರುವ ಚುನಾವಣೆಯಲ್ಲಿ ಉದ್ಯೋಗ, ಶಿಕ್ಷಣ, ಆರೋಗ್ಯ, ವಸತಿ ಯಂತಹ ಗಂಭಿರ ಸಮಸ್ಯೆಗಳನ್ನು ಮುನ್ನೆಲೆಗೆ ತರುವ ಮೂಲಕ ತಕ್ಕ ಪಾಠಕಲಿಸಲು ಮುಂದಾಗುವಂತೆ ಕರೆ ನೀಡಿದರು.

ಬಜಾಲ್ ಪ್ರದೇಶದಿಂದ ತೊಕ್ಕೊಟ್ಟು ಪ್ರದೇಶದವರೆಗೆ ಧ್ವಜಸ್ಥಂಭವನ್ನು , ಮತ್ತೊಬ್ಬ ಸಂಗಾತಿ ಭಾಸ್ಕರ್ ಕುಂಬಳ್ಳೆ ಹುತಾತ್ಮರಾದ ಸ್ಥಳದಿಂದ ಹುತಾತ್ಮ ಜ್ಯೋತಿ ಯನ್ನು ಬೆಳಗಿಸಿ ಸುನೀಲ್ ಕುಮಾರ್ ಬಜಾಲ್ ಮಾತನಾಡಿ ಪ್ರತಿಭಾನ್ವಿತ ವಿದ್ಯಾರ್ಥಿ ಸಂಗಾತಿ ಭಾಸ್ಕರ್ ಕುಂಬ್ಳೆಯನ್ನು ಕೋಮುವಾದಿಗಳು ಕೊಲೈಗೈದರು. ದೇಶಪ್ರೇಮಿ ಸಂಘಟನೆ ಡಿವೈಎಫ್ಐ ನಾಯಕರಾಗಿದ್ದ ಭಾಸ್ಕರ ಕುಂಬ್ಳೆಯವರ ಆಶಯವನ್ನು ಮುನ್ನಡೆಸುತ್ತೇವೆ ಎಂದರು.

ಈ ದೇಶದ ಐಕ್ಯತೆ, ಸೌಹಾರ್ದತೆ ಉಳಿಸಲು ಡಿವೈಎಫ್ಐ ಎಂತಹ ತ್ಯಾಗಕ್ಕೂ ಸಿದ್ಧವಾಗುತ್ತದೆ ಎಂದು ಕೋಮುವಾದಿ ಶಕ್ತಿಗಳಿಗೆ ಎಚ್ಚರಿಕೆ ನೀಡಿದರು.

ಡಿವೈಎಫ್ಐ ಹುತಾತ್ಮ ಸಂಗಾತಿಗಳನ್ನು ಸ್ಮರಿಸುವ, ಐಕ್ಯತೆ,ಸೌಹಾರ್ದತೆ ಗಟ್ಟಿಗೊಳಿಸುವ ಘೋಷಣೆಗಳು ಮೊಳಗಿದವು.

ಡಿವೈಎಫ್ಐ ಜಿಲ್ಲಾಧ್ಯಕ್ಷರಾದ ಬಿ.ಕೆ ಇಮ್ತಿಯಾಜ್, ಜಿಲ್ಲಾ ಕಾರ್ಯದರ್ಶಿ ಸಂತೋಷ ಬಜಾಲ್ ಹುತಾತ್ಮ ಜ್ಯೋತಿ ಮತ್ತು ದ್ವಜ ಸ್ಥಂಭದ ನಾಯಕತ್ವ ವಹಿಸಿದ್ದರು.

ಬಜಾಲ್ ಪಕ್ಕಲಡ್ಕ ದಿಂದ ತೊಕ್ಕೊಟ್ಟುವರೆಗೆ ಕಾಂ ಶ್ರೀನಿವಾಸ್ ಬಜಾಲ್ ನೆನಪಿನಲ್ಲಿ ಧ್ವಜ ಸ್ತಂಭ ಹಾಗೂ ಕಾಂ ಭಾಸ್ಕರ ಕುಂಬ್ಳೆ ನೆನಪಿನಲ್ಲಿ ಹುತಾತ್ಮ ಜ್ಯೋತಿ ಸಮರ್ಪಣಾ ಮೆರವಣೆಗೆ ವೇಳೆ ನೂರಾರು ಕಾರ್ಯಕರ್ತರು ಬೈಕ್ ರ‌್ಯಾಲಿ ನಡೆಸಿದರು.

ಈ ವೇಳೆ ಡಿವೈಎಫ್ಐ ಜಿಲ್ಲಾ‌ ಮುಖಂಡರಾದ ಮನೋಜ್ ವಾಮಂಜೂರು, ನಿತಿನ್ ಕುತ್ತಾರ್, ನವೀನ್ ಕೊಂಚಾಡಿ, ಜಗದೀಶ್ ಬಜಾಲ್, ತಯ್ಯೂಬ್ ಬೆಂಗರೆ, ರಜಾಕ್ ಮೊಂಟೆಪದವು, ರಿಜ್ವಾನ್ ಹರೇಕಳ, ಯೋಗೀಶ್ ಜಪ್ಪಿನಮೊಗರು, ದೀಪಕ್ ಬಜಾಲ್ , ದೀರಾಜ್ ಬಜಾಲ್, ಮುಹಾಝ್, ಫಿಜಿ ರಫೀಕ್, ಅಶ್ರಫ್ ಹರೇಕಳ, ಮಿಥುನ್ ಕುತ್ತಾರ್ , ರಾಮಚಂದ್ರ ಬಬ್ಬುಕಟ್ಟೆ ಮುಂತಾದವರು ಉಪಸ್ಥಿತರಿದ್ದರು.