ಗುರುಪುರ ಬ್ಲಾಕ್ ಕಾಂಗ್ರೆಸ್ ನಲ್ಲಿ ನಾಯಕತ್ವದ ಕೊರತೆ; ನಾಯಕರೋ.. ನಾಲಾಯಕರೋ.!

ಕರಾವಳಿ

ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಪೈಕಿ ಸುರತ್ಕಲ್ ಗಿಂತ ಕಾಂಗ್ರೆಸ್ ಗಟ್ಟಿಯಾಗಿರುವುದು ಗುರುಪುರ ಭಾಗದಲ್ಲಿ. ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಗೆ ಕೈ ಕೊಟ್ಟರೂ ಗುರುಪುರ ಬ್ಲಾಕ್ ಕಾಂಗ್ರೆಸ್ ಪಕ್ಷದ ಮಾನ ಮರ್ಯಾದೆ ಉಳಿಸುತ್ತಿತ್ತು. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸುರತ್ಕಲ್ ಭಾಗದಲ್ಲಿ ಕಾಂಗ್ರೆಸ್ 28,000 ಕ್ಕಿಂತ ಅಧಿಕ ಮತಗಳ ಹಿನ್ನಡೆ ಪಡೆದರೆ, ಗುರುಪುರ ಭಾಗದಲ್ಲಿ ಆದ ಹಿನ್ನಡೆ ಕೇವಲ 5-6 ಸಾವಿರದ ಆಸುಪಾಸು. ಒಂದು ಕಾಲದಲ್ಲಿ ಗುರುಪುರ ಕಾಂಗ್ರೆಸ್ ಪಕ್ಷದ ಸುಭದ್ರಕೋಟೆಯಂತಿತ್ತು. ಆದರೆ ಇದೀಗ ಕೋಟೆ ಕೊಳ್ಳೆಹೊಡೆದು ದಿಂಢಿ ಬಾಗಿಲು ಮುಚ್ಚಿದಂತಿದೆ ಇಲ್ಲಿನ ಅವಸ್ಥೆ.! ಛೋಟಾ ಪುಢಾರಿಗಳೆಲ್ಲಾ ನಾಯಕರೆನಿಸಿಕೊಂಡಿದ್ದಾರೆ.

ಬ್ಲಾಕ್ ಅಧ್ಯಕ್ಷರ ಕಾರ್ಯವೈಖರಿ ಬಗ್ಗೆ ಕಾರ್ಯಕರ್ತರಲ್ಲೇ ಅಸಮಾದಾನವಿದೆ. ಹಿರಿಯರ, ನಿಷ್ಠಾವಂತ ಕಾರ್ಯಕರ್ತರ ಮಾತಿಗೆ ಕಿಮ್ಮತ್ತೆ ಇಲ್ಲದಂತಾಗಿದೆ. ಬ್ಲಾಕ್ ಅಧ್ಯಕ್ಷರ ಬೇಜವಾಬ್ದಾರಿತನದಿಂದ ಅಡ್ಯಾರ್, ಗುರುಪುರ ಪಂಚಾಯತ್ ಗಳಲ್ಲಿ ಅಧಿಕಾರ ತಪ್ಪಿತು ಎನ್ನುವ ಅಪವಾದವಿದೆ. ಕಾರ್ಯಕರ್ತರನ್ನು, ಪಕ್ಷದ ನಿಷ್ಠಾವಂತರನ್ನು ಗಣನೆಗೆ ತೆಗೆದುಕೊಳ್ಳದಿರುವುದರಿಂದಲೇ ಗುರುಪುರ ಬ್ಲಾಕ್ ಗೆ ಇಂಥಾಹ ಗತಿ ಬಂದಿದೆ. ಬ್ಲಾಕ್ ಅಧ್ಯಕ್ಷರು ಪಕ್ಷವನ್ನು ಗಟ್ಟಿಗೊಳಿಸುವ ಬದಲು ತನ್ನ ಪಟ್ಟವನ್ನೇ ಗಟ್ಟಿಗೊಳಿಸುತ್ತಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಗುರುಪುರ ಭಾಗದ ಕಾಂಗ್ರೆಸ್ ಪಕ್ಷದಲ್ಲಿ ಬಣ ರಾಜಕಾರಣ ಮೇಳೈಸುತ್ತಿದೆ. ಒಬ್ಬ ನಾಯಕನನ್ನು ಕಂಡರೆ ಇನ್ನೊಬ್ಬನಿಗೆ ಆಗುವುದಿಲ್ಲ. ಆ ರೀತಿಯ ಪರಿಸ್ಥಿತಿ ಗುರುಪುರ ಕಾಂಗ್ರೆಸ್ ನಲ್ಲಿದೆ. ನಾಯಕರೆನಿಸಿಕೊಂಡವರ ಇಂತಹ ವರ್ತನೆ ಕಾರ್ಯಕರ್ತರೆಡೆಯಲ್ಲಿ ಬೇಸರ ಮೂಡಿಸಿದೆ ಅನ್ನುವ ಮಾತುಗಳು ಕೇಳಿ ಬರುತ್ತಿವೆ. ನಾಯಕರೆನಿಸಿಕೊಂಡವರಿಗೆ ಸ್ವಸಮುದಾಯದ ಹತ್ತಾರು ಓಟು ಬೀಳಿಸುವ ಕೆಫಾಸಿಟಿ ಇಲ್ಲ. ಅದು ಬಿಡಿ, ತಮ್ಮ ಜಾತಿಯವರನ್ನು ಕರೆದುಕೊಂಡು ಬರುವ ಶಕ್ತಿ ಅವರಿಗಿಲ್ಲ. ಯಾವುದೇ ಜಾತಿಯ ನಾಯಕರ ಹಿಂದೆ ನೋಡಿದರೆ ಅಲ್ಪಸಂಖ್ಯಾತರ ಯುವಕರು ಮಾತ್ರ ಕಾಣ ಸಿಗುತ್ತಾರೆ. ಅಲ್ಪ ಸಂಖ್ಯಾತರನ್ನು ಹಿಂಬಾಲಕರನ್ನಾಗಿಸಿ ಇವರು ನಾಯಕರೆನಿಸಿಕೊಂಡಿದ್ದಾರೆ.

ಸ್ಥಳೀಯ ನಾಯಕರೆನಿಸಿಕೊಂಡವರ ಬೇಜವಾಬ್ದಾರಿತನದಿಂದಾಗಿ ಕೆಲವು ಪಂಚಾಯತ್ ಗಳಲ್ಲಿ ಅಧಿಕಾರ ಕಳೆದುಕೊಳ್ಳುವಂತಾಯಿತು ಅನ್ನುವ ಮಾತು ಕೇಳಿ ಬರುತ್ತಿದೆ. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಉತ್ತರ ಕ್ಷೇತ್ರದ ಗುರುಪುರ ಬ್ಲಾಕ್ ನಲ್ಲಿ ಸರಿ-ಸುಮಾರು 5-6 ಸಾವಿರ ಮತಗಳ ಅಂತರದ ಹಿನ್ನಡೆಯಾಗಿತ್ತು. ಆದರೆ ಅದು ಈಗ ಸರಾಸರಿ ಮೂರು ಪಟ್ಟು ದಾಟಿದೆ. ಇದು ನಾಯಕರಿಗೆ ಅರ್ಥವಾಗುತ್ತಿಲ್ಲ. ಇದು ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ನಡೆಯುವ ಲೋಕಸಭಾ, ತಾ.ಪಂಚಾಯತ್, ಜಿಲ್ಲಾ ಪಂಚಾಯತ್, ಗ್ರಾಮ ಪಂಚಾಯತ್ ಚುನಾವಣೆಗಳಲ್ಲಿ ಪರಿಣಾಮ ಬೀರಿ, ಈ ಭಾಗದಲ್ಲಿ ಕಾಂಗ್ರೆಸ್ ಸಂಪೂರ್ಣ ಅಧ:ಪತನ ಗೊಳ್ಳುವುದರಲ್ಲಿ ಸಂಶಯವಿಲ್ಲ.

ಪ್ರಮುಖ ನಾಯಕರ ಸುತ್ತ ಗಿರಾಕಿ ಹೊಡೆಯುವವರಿಗೆ ಆಯಾಕಟ್ಟಿನ ಸ್ಥಾನಮಾನ ನೀಡುವ ಬದಲು, ಪಕ್ಷಕ್ಕಾಗಿ ದುಡಿಯುವ ನಿಷ್ಠಾವಂತ, ಪ್ರಾಮಾಣಿಕರಿಗೆ ಪಟ್ಟಕಟ್ಟಿ ಪಕ್ಷವನ್ನು ಸದೃಢಗೊಳಿಸುವ ಅಗತ್ಯವಿದೆ. ಹಿಂಬಾಲಕರ ಬಳಿ ಮತದಾರರನ್ನು ಸೆಳೆದು ಓಟು ಬ್ಯಾಂಕಾಗಿ ಪರಿವರ್ತಿಸುವ ಚಾಣಾಕ್ಯ ತಂತ್ರಗಾರಿಕೆ ಇಲ್ಲ. ಬಿಜೆಪಿಯವರ ಆರೋಪಕ್ಕೆ ಪ್ರತ್ಯುತ್ತರ ನೀಡುವ ದಮ್ಮು, ತಾಕತ್ತು ಇಲ್ಲದ ಸ್ಥಿತಿ ನಿರ್ಮಾನವಾಗಿದೆ. ಪಕ್ಷಕ್ಕಾಗಿ ಹಗಲು ರಾತ್ರಿ ನಿಷ್ಠಾವಂತರಾಗಿ ದುಡಿದ ತಳಮಟ್ಟದ ಕಾರ್ಯಕರ್ತರನ್ನು ಕಡೆಗಣಿಸಲಾಗುತ್ತಿದೆ. ಬಿಲ್ಲವ ಸಮುದಾಯದ ಜಿಲ್ಲಾಮಟ್ಟದ ಜಾತ್ಯಾತೀತ ನಾಯಕರೊಬ್ಬರನ್ನು ಕಡೆಗಣಿಸಲಾಗುತ್ತಿದೆ, ಇದು ಪಕ್ಷಕ್ಕೆ ತುಂಬಲಾರದ ನಷ್ಟ. ಪ್ರಮುಖ ನಾಯಕರೆನಿಸಿಕೊಂಡವರು ತಮ್ಮ ಸುತ್ತ-ಮುತ್ತ ಗಿರಾಕಿ ಹೊಡೆಯುವವರನ್ನು, ತಮಗೆ ಬಹು ಫರಾಕ್ ಅನ್ನುವವರನ್ನು ಮಾತ್ರ ನಾಯಕರೆಂದು ನಂಬುವುದನ್ನು ಇನ್ನಾದರೂ ಬಿಡಬೇಕು. ಜನಸಾಮಾನ್ಯರ ನಡುವೆ ಓಡಾಡುತ್ತಾ, ಜನ ಸಾಮಾನ್ಯರ ಸೇವೆ ಮಾಡುತ್ತಾ, ಮತದಾರರ ನಾಡಿ ಮಿಡಿತ ಅರಿಯಬಲ್ಲ, ಪಕ್ಷಕ್ಕಾಗಿ ಪ್ರಾಮಾಣಿಕರಾಗಿ ದುಡಿಯುವವರನ್ನು ಗುರುತಿಸಿ ಮುನ್ನೆಲೆಗೆ ತಂದರೆ ಮಾತ್ರ ಗುರುಪುರ ಭಾಗದಲ್ಲಿ ಕಾಂಗ್ರೆಸ್ ಗತ ಕಾಲದ ವೈಭವಕ್ಕೆ ಮರಳಬಹುದು. ಇಲ್ಲವಾದರೆ ಬಣ ರಾಜಕಾರಣಕ್ಕೆ ತುತ್ತಾಗಿ ಕಾಂಗ್ರೆಸ್ ಇಲ್ಲಿ ಕಂಗಾಲಾಗುವುದಂತು ಗ್ಯಾರಂಟಿ.!

ಉತ್ತರದ ಉತ್ತರಾಧಿಕಾರಿಗಳಿಗೆ ಕ್ಷೇತ್ರದ ಕಾರ್ಯಕರ್ತರ ಹಿಡಿತವಿಲ್ಲದೆ ಇರುವುದರಿಂದ ಮೂಲ ಕಾಂಗ್ರೆಸಿಗರು ಮೂಲೆ ಗುಂಪಾಗುತ್ತಿದ್ದಾರೆ. ಮೂಲ ಕಾಂಗ್ರೆಸಿಗರು ಮೂಲೆಗೆ ಸರಿಯುವುದರಿಂದ ಮರಿ ನಾಲಾಯಕರು ಬುಸ್ ಗುಟ್ಟುವ ತನಕ ಬೆಳೆದು ನಿಂತಿದ್ದಾರೆ. ಇದೀಗ ಈ ಭಾಗದ ಜಿಲ್ಲಾ ಪಂಚಾಯತ್ ಸದಸ್ಯರೊಬ್ಬರನ್ನು ಮುಂದಿನ ಚುನಾವಣೆಯಲ್ಲಿ ಸೋಲಿಸಲು ಮರಿ ನಾಲಾಯಕರು ಇದೀಗಲೇ ಮುಹೂರ್ತ ಪಿಕ್ಸ್ ಮಾಡಿದ್ದಾರಂತೆ ಎಂಬ ಗುಸು ಗುಸು ಕೇಳಿ ಬರುತ್ತಿದೆ. ಇದು ಮುಂದಿನ ದಿನಗಳಲ್ಲಿ ಗುರುಪುರ ಬ್ಲಾಕ್ ಕಾಂಗ್ರೆಸಿನ ಅಧಃಪತನಕ್ಕೆ ಕಾರಣವಾಗಬಹುದು.