ಸಾಲ ಮರುಪಾವತಿಸದ್ದಕ್ಕೆ ಧರ್ಮಸ್ಥಳ ಸಂಘದವರಿಂದ ಹಲ್ಲೆ, ನಿಂದನೆ; ಮನನೊಂದ ಮಹಿಳೆ ಆತ್ಮಹತ್ಯೆ

ಕರಾವಳಿ

ಶೃಂಗೇರಿ: ಸಾಲದ ಕಂತು ಮರು ಪಾವತಿಸದ ಹಿನ್ನೆಲೆಯಲ್ಲಿ ಧರ್ಮಸ್ಥಳ
ಸಂಘದವರು ಮನೆಗೆ ಬಂದು ಗಲಾಟೆ
ಮಾಡಿ ನಿಂದಿಸಿದ ಕಾರಣಕ್ಕೆ ಮನನೊಂದ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ
ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪಟ್ಟಣದಲ್ಲಿ ಶುಕ್ರವಾರ ವರದಿಯಾಗಿದೆ.

ಶೃಂಗೇರಿ ಪಟ್ಟಣದ ಹನುಮಂತ ನಗರದ ನಿವಾಸಿ 29 ವರ್ಷ ಪ್ರಾಯದ ಅರ್ಪಿತಾ ಮೃತ ಮಹಿಳೆ. ಅರ್ಪಿತಾ ಕಳೆದ 6 ತಿಂಗಳ ಹಿಂದೆ ಧರ್ಮಸ್ಥಳ ಸಂಘದಲ್ಲಿ
ಒಂದು ಲಕ್ಷ ರೂ. ಸಾಲ ಪಡೆದಿದ್ದು, ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡದ ಕಾರಣದಿಂದ
ಸಂಘದ ಸದಸ್ಯರು ಶುಕ್ರವಾರ ಬೆಳಗ್ಗೆ ಅರ್ಪಿತಾ ಮನೆ ಬಳಿ ಬಂದು ಗಲಾಟೆ ಮಾಡಿದ್ದಾರೆ ಎನ್ನಲಾಗಿದೆ. ಈ ವೇಳೆ ಎರಡೂ ಕಡೆಯವರಿಂದ
ವಾಗ್ವಾದ ನಡೆದಿದೆ. ಈ ವೇಳೆ ಸಂಘದವರು, ಸಾಲ
ಕಟ್ಟಲಾಗದಿದ್ದರೆ, ಎಲ್ಲಾದರು ಹೋಗಿ ಸಾಯಿ ಎಂದು ನಿಂದಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ ಅರ್ಪಿತಾ ಮೇಲೆ ಹಲ್ಲೆಯನ್ನೂ ಮಾಡಿದ್ದಾರೆ ಎಂದು ಕುಟುಂಬಸ್ಥರು
ಆರೋಪಿಸಿದ್ದಾರೆ. ಹಲ್ಲೆ, ನಿಂದನೆಯಿಂದ ಮನನೊಂದ ಅರ್ಪಿತಾ ಮನೆಯಲ್ಲಿ ತನ್ನ ಮಗುವಿನೊಂದಿಗೆ ಒಬ್ಬಳೇ
ಇದ್ದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಘಟನೆ ಸಂಬಂಧ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಈ ಪ್ರಕರಣವನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ಮೃತ ಕುಟಂಬಕ್ಕೆ 25ಲಕ್ಷ ಪರಿಹಾರ ನೀಡಬೇಕು, ಅವರ ಸಾವಿಗೆ ಕಾರಣಕರ್ತರಾದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದಿಂದ 25 ಲಕ್ಷ ಪರಿಹಾರ ನೀಡಬೇಕು ತಪ್ಪಿತಸ್ಥರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಚಿಕ್ಕಮಗಳೂರು ಜಿಲ್ಲಾ ದಲಿತ ಸಂಘರ್ಷ ಸಮಿತಿಯ ಸಂಘಟನೆ ಕಾರ್ಯದರ್ಶಿ ಹಾಗೂ ವಿದ್ಯಾರಣ್ಯಪುರ ಗ್ರಾಮ ಪಂಚಾಯತಿ ಸದಸ್ಯ ಶಬರೀಶ್ ಒತ್ತಾಯಿಸಿದ್ದಾರೆ.

ಈ ರೀತಿಯ ಘಟನೆಗಳು ರಾಜ್ಯದಲ್ಲಿ ಹಲವು ಕಡೆ ನಡೆದಿದ್ದು, ಪೈನಾನ್ಸ್ ನವರು ಗೂಂಡಾಗಿರಿ ಮಾಡುವುದರ ಮೂಲಕ ಆರ್‌ಬಿಐ ಗೈಡ್ ಲೈನ್ಸ್ ಉಲ್ಲಂಘನೆ ಮಾಡುವುದುರೊಂದಿಗೆ ಹತ್ತು ವರ್ಷಗಳ ಕಾಲಕ್ಕೆ ಸಾಲ ತೆಗೆದುಕೊಂಡಿದ್ದರೆ, 3-4 ವರ್ಷಕ್ಕೆ ಬಂದು ಸಾಲ ಕಟ್ಟುವಂತೆ ಕಿರುಕುಳ ನೀಡುವುದು ಮಾಮೂಲಾಗಿದೆ. ಯಾರದೋ ಅಪರಿಚಿತ ವ್ಯಕ್ತಿಗಳ ಕೈಯಲ್ಲಿ ಪೊಲೀಸ್ ಅಧಿಕಾರಿ ಎಂದು ಪೋನ್ ಮಾಡಿಸಿ ಬೆದರಿಕೆ ಒಡ್ಡುತ್ತಿದ್ದು. ಮೈಕ್ರೋ ಪೈನಾನ್ಸ್ ನ ಗೂಂಡಾಗಳು ನೈತಿಕ ಪೊಲೀಸ್ ಗಿರಿ ಮಾಡುತ್ತಿದ್ದು. ಸರ್ವೆ ಸಾಮಾನ್ಯವಾಗಿದೆ. ವಾಹನಗಳಿಗೆ ಸಾಲ ನೀಡಿದ ಪೈನಾನ್ಸ್ ಗಳು, ಬ್ಯಾಂಕ್ ಗಳು ಸಹಾ ಗೂಂಡಾಗಳನ್ನು ವಾಹನ ಜಪ್ತಿ ಮಾಡಲು ನೇಮಿಸುತ್ತಿದ್ದು ಆ ಗೂಂಡಾಗಳೂ ಮಧ್ಯದಾರಿಯಲ್ಲೆ ವಾಹನ ಕಿತ್ತುಕೊಂಡು ಹೋಗುವುದು ಸರ್ವೆ ಸಾಮಾನ್ಯವಾಗಿದ್ದು ಸರ್ಕಾರ ಕೂಡಲೇ ಇಂಥಹ ಪೈನಾನ್ಸ್ ಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಜರುಗಿಸುವುದರೊಂದಿಗೆ ಇದಕ್ಕೆಲ್ಲಾ ರಾಜ್ಯಸರ್ಕಾರ ಅಂತ್ಯ ಹಾಡಬೇಕೆಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ.

ವರದಿ: ಎಂ.ಎ ಸಲಾವುದ್ದೀನ್