ನಿಜಕ್ಕೂ ಬ್ರಾಹ್ಮಣರು ಭೂಸುಧಾರಣಾ ಕಾಯ್ದೆಯ ಸಂತ್ರಸ್ತರೇ.? ಫಲಾನುಭವಿಗಳೇ.?
✍️. ನವೀನ್ ಸೂರಿಂಜೆ ಪತ್ರಕರ್ತ
ಭೂ ಸುಧಾರಣಾ ಕಾಯ್ದೆಯಡಿಯಲ್ಲಿ ಬ್ರಾಹ್ಮಣರು ಭೂಮಿಯನ್ನು ಕಳೆದುಕೊಂಡಿದ್ದರ ಶಾಪ ಅರಸು ಕುಟುಂಬವನ್ನು ತಟ್ಟಿದೆ ಅಂತ ಎಚ್ ಡಿ ದೇವೇಗೌಡರು ಹೇಳಿದ್ದರೆಂದು ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ನಿಜಕ್ಕೂ ಬ್ರಾಹ್ಮಣರು ಭೂಸುಧಾರಣಾ ಕಾಯ್ದೆಯ ಸಂತ್ರಸ್ತರೇ ? ಫಲಾನುಭವಿಗಳೇ ? ಈವರೆಗೆ ಬಂಟರು, ಒಕ್ಕಲಿಗರಂತಹ ಬಲಾಡ್ಯ ಜಾತಿಗಳನ್ನು ಮಾತ್ರ ಭೂಸುಧಾರಣಾ ಕಾಯ್ದೆಯ ಸಂತ್ರಸ್ತರೆಂದು ಬಿಂಬಿಸಲಾಗುತ್ತಿತ್ತು. ಈಗ ಆ ಸಾಲಿಗೆ ಬ್ರಾಹ್ಮಣರನ್ನೂ ಸೇರಿಸಲಾಗಿದೆ. ವಾಸ್ತವವಾಗಿ ಬ್ರಾಹ್ಮಣರು ಭೂಸುಧಾರಣಾ ಕಾಯ್ದೆಯ ಫಲಾನುಭವಿಗಳು. ಊರೊಂದರಲ್ಲಿ ಶ್ಯಾನುಭೋಗ, ಪಟೇಲನನ್ನು ಹೊರತುಪಡಿಸಿದರೆ ಉಳಿದೆಲ್ಲಾ ಬ್ರಾಹ್ಮಣರು ಭೂಸುಧಾರಣೆಯ ತುಂಡು ಲಾಭವನ್ನಾದರೂ ಪಡೆದಿರುತ್ತಾರೆ.
ಪಟೇಲರು, ಶಾನುಭೋಗರನ್ನು ಹೊರತುಪಡಿಸಿದರೆ ಅರ್ಚಕ, ಪುರೋಹಿತ ವೃತ್ತಿ ಮಾಡುತ್ತಿದ್ದ ಬ್ರಾಹ್ಮಣರಿಗೆ ಭೂಮಿ ಇರುತ್ತಿರಲಿಲ್ಲ. ಬ್ರಾಹ್ಮಣರಿಗೆ ಉಂಬಳಿಯಾಗಿ ಊರಿನ ಒಡೆಯರೋ, ದೇವಸ್ಥಾನದ ಆಡಳಿತದವರೋ ಅರ್ಚಕರಿಗೆ ಬಿಟ್ಟುಕೊಡುತ್ತಿದ್ದರು. ಅರ್ಚಕ ವೃತ್ತಿ ಮಾಡುವವರೆಗೆ ಆ ಭೂಮಿಯಲ್ಲಿ ಬ್ರಾಹ್ಮಣ ಬೆಳೆ ಬೆಳೆಯಬಹುದಿತ್ತು. ಭೂಸುಧಾರಣಾ ಕಾಯ್ದೆ ಬಂದಾಗ ಉಂಬಳಿ ಭೂಮಿಗಳೆಲ್ಲವೂ ಬ್ರಾಹ್ಮಣರ ಅಧಿಕೃತ ಜಮೀನುಗಳಾದರು.
ಪೇಜಾವರ ಮಠ ಸೇರಿದಂತೆ ನೂರಾರು ಮಠಗಳಿಗೆ ಹಿಂದಿನ ರಾಜಮನೆತನಗಳು ಊರೂರನ್ನೇ ಬರೆದು ಕೊಟ್ಟಿದ್ದವು. ಇಡೀ ಊರಿನ ಜನ ಬೆಳೆ ಬೆಳೆದು ಗೇಣಿಯನ್ನು ಮಠಕ್ಕೆ ಕೊಡಬೇಕಿತ್ತು. ಅಲ್ಲಿ ಜಾತಿ ಬೇದವಿರಲಿಲ್ಲ. ಭೂಸುಧಾರಣಾ ಕಾಯ್ದೆ ಬಳಿಕ ಮಠಗಳ ಭೂಮಿ ಜನಗಳ ಪಾಲಾಯ್ತು. ಆ ರೀತಿ ಭೂಮಿ ಪಡೆದುಕೊಂಡ ಊರುಗಳಲ್ಲಿ ಬ್ರಾಹ್ಮಣರೂ, ಬಂಟರೂ ಸೇರಿದಂತೆ ಎಲ್ಲಾ ಜಾತಿಗಳವರಿದ್ದರು.

ಗುತ್ತು, ಬರ್ಕೆ, ಬಾಳಿಕೆ, ಜೈನರ ಬೀಡು, ಮಠ, ದೇಗುಲ, ಗೌಡ ಮನೆತನ, ರಾಜ ಮನೆತನಗಳ ಭೂಮಿಯಲ್ಲಿ ತುಂಡು ಭೂಮಿಯನ್ನು ಗೇಣಿ(ಬಾಡಿಗೆ ರೀತಿ) ಪಡೆದು ಉಳುಮೆ ಮಾಡುತ್ತಿದ್ದ ಬಂಟರು, ಗೌಡರು, ಬ್ರಾಹ್ಮಣರೂ ಸೇರಿದಂತೆ ಎಲ್ಲಾ ಜಾತಿಗಳು ಹೊಲದೊಡೆಯರಾದರು.
ಬಂಟರು, ಗೌಡರು ಮೇಲ್ವರ್ಗವಾದರೂ ಅವರಿಗೂ ಭೂಮಿ ಇರಲಿಲ್ಲ. ಮೇಲ್ವರ್ಗದ ಕೆಲವೇ ಕೆಲವು ಮನೆತಗಳ ಬಳಿ ಮಾತ್ರ ಭೂಮಿ ಇತ್ತು. ಉಳಿದ ಬಂಟರು, ಗೌಡರು ಹೆಸರಿಗಷ್ಟೇ ಒಕ್ಕೆಲ್ಮೆ. ಮಾಡುತ್ತಿದ್ದದ್ದು ಗೇಣಿಯ ಉಳುಮೆಯೇ ! ಬಂಟರು ಉಳಿದ ಹಿಂದುಳಿದ ವರ್ಗದವರಂತೆ ಉಳುಮೆ ಮಾಡಿಯಾದರೂ ಭೂಮಿ ಪಡೆದುಕೊಂಡರು.
ಬಹುತೇಕ ಉಂಬಳಿ, ಮಠಗಳಿಂದ ಗೇಣಿ ಪಡೆದುಕೊಂಡಿದ್ದ ಬ್ರಾಹ್ಮಣರು ಖುದ್ದು ಉಳುಮೆಯನ್ನೂ ಮಾಡಿಲ್ಲ. ಕಾರ್ಮಿಕರಿಂದ ಉಳುಮೆ ಮಾಡಿಸುತ್ತಿದ್ದ ಬ್ರಾಹ್ಮಣರು ಗೇಣಿ ಚೀಟಿ ಕ್ಲೈಮ್ ಮಾಡಿಕೊಂಡು ಉಳುವವನೇ ಹೊಲದೊಡೆಯ ಕಾನೂನಿನ ಲಾಭ ಪಡೆದುಕೊಂಡರು.
ಆದರೂ ಉಳುವವನೇ ಹೊಲದೊಡೆಯ ಕಾನೂನನ್ನೂ, ದೇವರಾಜ ಅರಸು, ಸಿದ್ದರಾಮಯ್ಯರಂತವರನ್ನೂ, ಭೂಸುಧಾರಣಾ ಕಾಯ್ದೆಯ ಜಾರಿಗೆ ಬೀದಿಗಿಳಿದು ಭೂಮಿ ಒದಗಿಸಿಕೊಟ್ಟ ಕಮ್ಯೂನಿಷ್ಟರನ್ನೂ ಬ್ರಾಹ್ಮಣರೇಕೆ ದ್ವೇಷಿಸುತ್ತಾರೆ ? ಅವರೇಕೆ ಶಾಪ ಕೊಡುತ್ತಾರೆ ? ಯಾಕೆಂದರೆ ಬ್ರಾಹ್ಮಣರಂತೆಯೇ ಹಿಂದುಳಿದ ವರ್ಗಗಳಿಗೂ ಸಮಾನವಾಗಿ ಭೂಮಿ ಸಿಕ್ಕಿತ್ತು. ಆ ಮೂಲಕ ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಸಮಾನತೆ ಬರುವತ್ತಾ ಹೆಜ್ಜೆ ಹಾಕಲು ಸಾಧ್ಯವಾಯಿತು. ಇದು ಸನಾತನವಾದಕ್ಕೆ ವಿರುದ್ದವಾಗಿರುವುದರಿಂದ ಫಲಾನುಭವಿಗಳು ಶಾಪ ಹಾಕಿರಬಹುದು ಹಾಕಿರಬಹುದು. ಈಗ ಬಸ್ ನಲ್ಲಿ ಫ್ರೀ ಓಡಾಡುವ ಮಹಿಳೆಯರು ಬಸ್ ರಶ್ ಎಂದು ಸಿದ್ದರಾಮಯ್ಯರಿಗೆ ಬೈಯ್ಯವಂತೆ..!