ನಕಲಿ ದಾಖಲೆ ಸೃಷ್ಠಿಸಿ ಹಲವು ಬ್ಯಾಂಕ್‌ಗಳಿಗೆ ಕೋಟ್ಯಂತರ ರೂಪಾಯಿ ವಂಚಿಸಿದ ಆರೋಪ: ದಂಪತಿ ವಿರುದ್ದ ಪ್ರಕರಣ ದಾಖಲು

ರಾಜ್ಯ

ಒಂದೇ ಆಸ್ತಿಯ ದಾಖಲೆ ಪತ್ರಗಳನ್ನು ಬಳಸಿ ವಿವಿಧ ಹಣಕಾಸು ಸಂಸ್ಥೆಗಳಲ್ಲಿ ಅಡಮಾನವಿಟ್ಟು ನಗರದ ದಂಪತಿಯೊಬ್ಬರು ಕೋಟ್ಯಂತರ ರೂಪಾಯಿ ವಂಚಿಸಿರುವ ಪ್ರಕರಣ ನಡೆದಿದೆ. ಬೆಂಗಳೂರು ನಗರದಲ್ಲೇ ಇಲ್ಲದ ಆಸ್ತಿಯ ಬಗ್ಗೆ ನಕಲಿ ದಾಖಲೆ ಸೃಷ್ಟಿ ಮಾಡಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಬ್ಯಾಂಕ್ ಅಧಿಕಾರಿಗಳು ದಂಪತಿ ನೀಡಿದ್ದ ದಾಖಲೆ ಪತ್ರದಲ್ಲಿ ನಮೂದಿಸಿದಂತೆ ಬೆಂಗಳೂರು ದಕ್ಷಿಣ ಬೇಗೂರಿನಲ್ಲಿ ಆಸ್ತಿಯನ್ನು ಜಪ್ತಿ ಮಾಡಲು ಹೋದಾಗ, ದಂಪತಿಗಳು ಅನೇಕ ಹಣಕಾಸು ಸಂಸ್ಥೆಗಳಿಗೆ ನಿವೇಶನವನ್ನು ಒತ್ತೆ ಇಟ್ಟು ವಂಚಿಸಿರುವುದು ಬೆಳಕಿಗೆ ಬಂದಿದೆ. ಅಧಿಕಾರಿಗಳು ಬೇಗೂರು ಸಬ್ ರಿಜಿಸ್ಟ್ರಾರ್ ಕಚೇರಿ, ಬಿಬಿಎಂಪಿ ಮತ್ತು ಬಿಡಿಎಗಳಲ್ಲಿ ದಾಖಲೆಗಳನ್ನು ಪರಿಶೀಲಿಸಿದಾಗಲೇ ಬೇಗೂರಿನಲ್ಲಿ ವಿವಿಧ ಸಂಖ್ಯೆಗಳಲ್ಲಿ ತೋರಿಸಿರುವ ಜಮೀನು/ಸೈಟ್‌ಗಳ ದಾಖಲೆಗಳು ನಕಲಿ ಎಂದು ತಿಳಿದುಬಂದಿದೆ.

ಇದೀಗ ವಂಚನೆ ಮಾಡಿರುವ ಕೆ ಎಸ್ ನಾಗೇಶ್ ಮತ್ತು ಸುಮಾ ಬಿ ಎಸ್ ದಂಪತಿಯಿಂದ ಸಾಲ ಮತ್ತು ಬಡ್ಡಿಯ ಮೊತ್ತವನ್ನು ವಸೂಲಿ ಮಾಡಿಕೊಳ್ಳಲು 15 ಕ್ಕೂ ಹೆಚ್ಚು ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳು ಸರದಿ ಸಾಲಿನಲ್ಲಿ ನಿಂತಿವೆ. ಈ ದಂಪತಿಗಳು ತಮ್ಮ ಕಂಪೆನಿ ಹೆಸರಲ್ಲಿ ಯಂತ್ರೋಪಕರಣಗಳ ಖರೀದಿಗೆ ಸಾಲ ಪಡೆದಿದ್ದರು. ದಂಪತಿಗಳು ಪಡೆದುಕೊಂಡ ಎಲ್ಲಾ ಸಾಲಗಳಿಗೆ, ಪತಿಯು ಅರ್ಜಿದಾರರಾಗಿದ್ದರೆ ಪತ್ನಿಯು ಇತರರೊಂದಿಗೆ ಜಾಮೀನುದಾರರಾಗಿರುತ್ತಾರೆ, ಇನ್ನು ಕೆಲವುಗಳಿಗೆ ಪತ್ನಿ ಅರ್ಜಿದಾರರಾಗಿದ್ದು ಪತಿ ಜಾಮೀನುದಾರರಾಗಿದ್ದಾರೆ. ಜಯನಗರ ಪೊಲೀಸ್ ಠಾಣೆಯಲ್ಲಿ ಎರಡು, ಪುಟ್ಟೇನಹಳ್ಳಿ ಮತ್ತು ಶೇಷಾದ್ರಿಪುರಂ ಠಾಣೆಗಳಲ್ಲಿ ತಲಾ ಒಂದು ಮತ್ತು ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ನಾಲ್ಕು, ಒಟ್ಟು ಎಂಟು ಪ್ರಕರಣಗಳು ದಾಖಲಾಗಿವೆ.