ಪ್ರಾಥಮಿಕ ಶಾಲಾ ಹಂತದಲ್ಲಿ ಶಾಲೆ ಬಿಟ್ಟ ಮಕ್ಕಳ ಸಂಖ್ಯೆ ದ್ವಿಗುಣ; ವರ್ಷದಿಂದ ವರ್ಷಕ್ಕೆ ಹೆಚ್ಚಳ ಕಳವಳಕಾರಿ

ರಾಜ್ಯ

ಪ್ರಾಥಮಿಕ ಶಾಲಾ ಹಂತದಲ್ಲಿ ಶಾಲೆ ಬಿಟ್ಟ ಮಕ್ಕಳ ಸಂಖ್ಯೆ ಮೂರು ವರ್ಷದಲ್ಲೇ ಅತ್ಯಧಿಕ 9,461 ಮಕ್ಕಳನ್ನು ಗುರುತಿಸಲಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಸಂಖ್ಯೆ 2023-24 ರಲ್ಲಿ ಡಬಲ್ ಆಗಿರುವುದು ಅಂಕಿ ಸಂಖ್ಯೆಗಳಿಂದ ದೃಢಪಟ್ಟಿದೆ.

ಪ್ರತಿ ವರ್ಷ ಶಾಲೆ ಬಿಟ್ಟ ಮಕ್ಕಳನ್ನು ಸರಕಾರ ಸಮೀಕ್ಷೆ ಮಾಡಿ ಗುರುತಿಸುತ್ತದೆ. ಮಕ್ಕಳ ಮೇಲೆ ಎಷ್ಟೇ ನಿಗಾವಹಿಸಿದರೂ ಡ್ರಾಪ್ ಔಟ್ ಆಗುತ್ತಿದ್ದು,2021-22 ನೇ ಸಾಲಿನಿಂದ 2023-24 ನೇ ಸಾಲಿನವರೆಗೆ ಶಾಲೆ ಬಿಟ್ಟ ಮಕ್ಕಳ ಅಂಕಿ ಸಂಖ್ಯೆ ನೋಡಿದರೆ ಕಳೆದ ವರ್ಷ ಹೆಚ್ಚಾಗಿದೆ ಎಂದು 2023-24 ನೇ ಸಾಲಿನ ಆರ್ಥಿಕ ಸಮೀಕ್ಷೆಯು ಅಂಕಿ ಸಂಖ್ಯೆಗಳೇ ಸಾಬೀತುಪಡಿಸಿವೆ.

ಸಮಗ್ರ ಶಿಕ್ಷಣ ಕರ್ನಾಟಕ 2023-24 ನೇ ಸಾಲಿನಲ್ಲಿ 6 ರಿಂದ 14 ವರ್ಷದ ಮಕ್ಕಳನ್ನು ಸಮೀಕ್ಷೆ ನಡೆಸಿ, ಒಟ್ಟು 9,461 ಮಕ್ಕಳು ಶಾಲೆ ಬಿಟ್ಟ ಮಕ್ಕಳು ಎಂದು ಗುರುತಿಸಿದೆ. ಇದು 2021-22 ರಲ್ಲಿ 9,111 ರಷ್ಟು ಮಕ್ಕಳಿದ್ದರೆ, 2022-23 ರಲ್ಲಿ 4,245 ಮಕ್ಕಳು ಎಂದು ಗುರುತಿಸಲಾಗಿತ್ತು. ಹಿಂದಿನ ವರ್ಷಕ್ಕೆ ಹೋಲಿಸಿದರೆ 2023-24 ನೇ ಸಾಲಿನಲ್ಲಿ ಬರೋಬ್ಬರಿ 5,216 ಮಕ್ಕಳು ಶಾಲೆ ಬಿಟ್ಟ ಮಕ್ಕಳು ಹೆಚ್ಚಾಗಿರುವುದು ತೀರಾ ಕಳವಳಕಾರಿ ಅಂಶ ಬಯಲಾಗಿದೆ.

ಶಾಲೆ ಬಿಟ್ಟ ಮಕ್ಕಳು ಬಹುತೇಕ ಬಾಗಲಕೋಟೆ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಚಾಮರಾಜನಗರ, ಕಲಬುರಗಿ, ಚಿಕ್ಕಾಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಕ್ಷಿಣ ಕನ್ನಡ, ದಾವಣಗೆರೆ, ಧಾರವಾಡ, ಗದಗ, ಹಾವೇರಿ, ಹಾಸನ, ಕೊಪ್ಪಳ, ಮಂಡ್ಯ, ಮೈಸೂರು, ರಾಯಚೂರು, ಶಿವಮೊಗ್ಗ, ಉಡುಪಿ, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಹೆಚ್ಚು ಶಾಲೆ ಬಿಟ್ಟ ಮಕ್ಕಳೆಂದು ಗುರುತಿಸಲಾಗಿದೆ.