ಮಂಗಳೂರು: ಸರಕಾರವು ಬ್ಯಾರಿ ಅಭಿವೃದ್ಧಿ ನಿಗಮ ಸ್ಥಾಪಿಸಲು ಒತ್ತಾಯಿಸಿ ಅಖಿಲ ಭಾರತ ಬ್ಯಾರಿ ಮಹಾಸಭಾದ ವತಿಯಿಂದ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ಜರುಗಿತು. ಕರ್ನಾಟಕ ರಾಜ್ಯ ಮತ್ತು ಇತರೆಡೆಗಳಲ್ಲಿ ವಾಸಿಸುತ್ತಿರುವ 25 ಲಕ್ಷ ಜನಸಂಖ್ಯೆಗೂ ಮಿಕ್ಕಿದ ಬ್ಯಾರಿ ಜನಾಂಗವು ಅನಾದಿಕಾಲದಿಂದ ವ್ಯತಸ್ಥ ಜೀವನ ಕ್ರಮದಿಂದ ತನ್ನನ್ನು ಗುರುತಿಸಿಕೊಂಡಿದ್ದು, ಕರಾವಳಿ ಜಿಲ್ಲೆಗಳಲ್ಲಿ ಅಗಾಧವಾಗಿ ಮತ್ತು ಇತರೆಡೆಗಳಲ್ಲಿ ವಿರಳವಾಗಿ ಸಾಮಾಜಿಕ ಬದುಕು ಸಾಗಿಸುತ್ತಿದ್ದು, ಈ ಜನಾಂಗದ ಸಮಗ್ರ ಅಭಿವೃದ್ಧಿಗೆ ಸರಕಾರ ಕರ್ನಾಟಕ ಬ್ಯಾರಿ ಅಭಿವೃದ್ಧಿ ನಿಗಮ ಸ್ಥಾಪಿಸಬೇಕೆಂದು ಆಗ್ರಹಿಸಲಾಗಿದೆ.
ಬ್ಯಾರಿ ಸಮುದಾಯವು ದ್ರಾವಿಡ ಜನಾಂಗದ ಮೂಲದಿಂದ ಉದ್ಭವವಾಗಿದ್ದು, ಜನರ ಆಡುಭಾಷೆ ತಮಿಳು ಭಾಷೆಯನ್ನೇ ಹೋಲುತ್ತಿದ್ದು, ಬ್ಯಾರಿ ಮೂಲನಿವಾಸಿ ಜನಾಂಗವಾಗಿರುತ್ತದೆ. ಹಾಲಿ ಬ್ಯಾರಿ ಜನಾಂಗವು ತನ್ನನ್ನು ಸಾಮಾಜಿಕವಾಗಿ ಮುಖ್ಯವಾಹಿನಿಯೊಂದಿಗೆ ಗುರುತಿಸಿಕೊಳ್ಳುವುದರೊಂದಿಗೆ ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯ ಕೊಡುಗೆಯ ಹೊರತಾಗಿಯೂ, ಸಾಮಾಜಿಕ ಹಿನ್ನಡೆ ಇರುವುದರ ಕಾರಣಕ್ಕಾಗಿ ಸರಕಾರದ ನೇರ ಸವಲತ್ತನ್ನು ಅಪೇಕ್ಷಿಸಲಾಗುತ್ತಿದೆ.
ಸರಕಾರವು ಬ್ಯಾರಿ ಅಭಿವೃದ್ಧಿ ನಿಗಮ ಸ್ಥಾಪಿಸಿ ವಾರ್ಷಿಕ ರೂಪಾಯಿ 200 ಕೋಟಿ ಕಡಿಮೆ ಇರದಂತೆ ಸರಕಾರದ ಬಜೆಟ್‌ನಲ್ಲಿ ಹಣ ಮೀಸಲು ಇಡಬೇಕೆಂದು ಒತ್ತಾಯಿಸುವುದರೊಂದಿಗೆ, ಸರಕಾರ ಬ್ಯಾರಿ ಜನಾಂಗದ ಅಭಿವೃದ್ಧಿಗೆ ಸಹಕರಿಸಬೇಕೆಂದು ಅಪೇಕ್ಷಿಸುತ್ತದೆ.
ಈ ನಿಟ್ಟಿನಲ್ಲಿ ಅಖಿಲ ಭಾರತ ಬ್ಯಾರಿ ಮಹಾಸಭಾ ಸಂಸ್ಥೆಯ ನಿಯೋಗವು ಈಗಾಗಲೇ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ಮಾನ್ಯ ವಿಧಾನಸಭಾಧ್ಯಕ್ಷರನ್ನು ಭೇಟಿ ಮಾಡಿ ನಿಗಮ ಸ್ಥಾಪನೆಗೆ ಬೇಡಿಕೆಯ ಮನವಿ ಸಲ್ಲಿಸಿರುತ್ತದೆ.
ಕರ್ನಾಟಕ ಸರಕಾರದ ಮಾನ್ಯ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಈ ಬಗ್ಗೆ ಪರಿಶೀಲಿಸುವುದಾಗಿ ಹೇಳಿರುತ್ತಾರೆ.
ರಾಜ್ಯ ಸರಕಾರ ಈಗಾಗಲೇ ವಿವಿಧ ಸಮುದಾಯದ ಅಭಿವೃದ್ಧಿಗೆ ನಿಗಮ ರಚನೆ ಮಾಡಿದಂತೆ ಬ್ಯಾರಿ ಜನಾಂಗದ ಅಭಿವೃದ್ಧಿಗೆ ಕೂಡಾ ನಿಗಮ ರಚನೆ ಮಾಡುವ ಮೂಲಕ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯುವ ಕಾರ್ಯವೆಸಗುತ್ತದೆ ಎಂಬ ಬಗ್ಗೆ ನಮಗೆ ಭರವಸೆ ಇದೆ.
ಸರಕಾರ ಹಾಲಿ ಬ್ಯಾರಿ ಜನಾಂಗವನ್ನು ಮತೀಯ ಅಲ್ಪಸಂಖ್ಯಾತರೊಂದಿಗೆ ಸೇರಿಸಲ್ಪಟ್ಟಿದ್ದು, ಇತರ ಅಲ್ಪಸಂಖ್ಯಾತ ಸಮುದಾಯವಾದ ಮುಸ್ಲಿಂ, ಕ್ರೈಸ್ತ, ಜೈನ, ಬುದ್ಧ, ಪಾರ್ಸಿ, ಸಿಖ್‌ಗಳೊಂದಿಗೆ ಮೀಸಲಿಡುವ ನಿಧಿ ಬ್ಯಾರಿ ಜನಾಂಗಕ್ಕೆ ಸಮರ್ಪಕವಾಗಿ ಪ್ರಯೋಜನವಾಗುತ್ತಿಲ್ಲ ಎಂಬುದು ಸತ್ಯ. ಆದುದರಿಂದ ಸುಮಾರು 25 ಲಕ್ಷದಷ್ಟು ಬ್ಯಾರಿ ಜನಾಂಗದ ಅಭಿವೃದ್ಧಿಗೆ ಪ್ರತ್ಯೇಕ ನಿಗಮದ ಅತೀ ಅಗತ್ಯ ಇದೆ.
ಸರಕಾರ ಈಗಾಗಲೇ ಹಲವಾರು ವರ್ಷದ ಹಿಂದೆ ಬ್ಯಾರಿ ಅಕಾಡೆಮಿಯನ್ನು ಸ್ಥಾಪಿಸಿದ್ದು, ಬ್ಯಾರಿ ಜನಾಂಗದ ಪ್ರತ್ಯೇಕ ಗುರುತಿಸುವಿಕೆಗೆ ಸಾಕ್ಷಿಯಾಗಿದೆ. ಬ್ಯಾರಿ ಜನಾಂಗದಲ್ಲಿ ಕೂಡಾ ಇತರೆ ಸಮುದಾಯಗಳಂತೆ ಶಿಕ್ಷಣ, ಉದ್ಯೋಗ, ಆಶ್ರಯ ವಂಚಿತ ಅಗಾಧ ಪ್ರಮಾಣದ ಜನಸಂಖ್ಯೆ ಇದ್ದು, ಬ್ಯಾರಿ ನಿಗಮ ಸ್ಥಾಪನೆಯಾದರೆ ಈ ಜನಾಂಗಕ್ಕೆ ತುಂಬಾ ಪ್ರಯೋಜನವಾಗಲಿದೆ.
ಸರಕಾರ ಈಗಾಗಲೇ ಕ್ರೈಸ್ತ, ವಿಶ್ವಕರ್ಮ, ಲಿಂಗಾಯತ ಮರಾಠಿ, ಕೊಡವ ನಿಗಮಗಳನ್ನು ರಚಿಸಿದಂತೆ ಬ್ಯಾರಿ ನಿಗಮವನ್ನು ಸ್ಥಾಪಿಸಲು ಒತ್ತಾಯಿಸುತ್ತೇವೆ.
ಬ್ಯಾರಿ ಜನಾಂಗದ ಹಿರಿಯ ಮುಖಂಡರು ಬ್ಯಾರಿ ನಿಗಮ ಸ್ಥಾಪನೆಯ ಬೇಡಿಕೆ ಮತ್ತು ಪ್ರಸ್ತಾವನೆಗೆ ಸಹಮತ ಸೂಚಿಸಿದ್ದು, ಮುಂದಿನ ದಿನಗಳಲ್ಲಿ ಅಖಿಲ ಭಾರತ ಮಟ್ಟದ ಬ್ಯಾರಿ ಸಮಾವೇಶದ ಯೋಜನೆಯನ್ನು ರೂಪಿಸಲಾಗುವುದು.
ಪತ್ರಿಕಾಗೋಷ್ಠಿಯಲ್ಲಿ ಅಖಿಲ ಭಾರತ ಬ್ಯಾರಿ ಮಹಾಸಭಾದ ಅಧ್ಯಕ್ಷರಾದ ಅಬ್ದುಲ್ ಅಝೀಝ್ ಬೈಕಂಪಾಡಿ, ಸಂಚಾಲಕರಾದ ಮೊಹಮ್ಮದ್ ಶಾಕಿರ್ ಹಾಜಿ, ಅಬ್ದುಲ್ ಜಲೀಲ್ (ಅದ್ದು) ಕೃಷ್ಣಾಪುರ,
ಮೊಹಮ್ಮದ್ ಹನೀಫ್ ಯು,
ಅಶ್ರಫ್ ಬದ್ರಿಯಾ, ಇ.ಕೆ. ಹುಸೈನ್, ಬಾವಾ ಪದರಂಗಿ,
ಹಮೀದ್ ಕಿನ್ಯಾ, ಮೊಹಮ್ಮದ್ ಸಾಲಿಹ್ ಬಜ್ಪೆ , ಅಬ್ದುಲ್ ಖಾದರ್ ಇಡ್ಮಾ,ಅಬ್ದುಲ್ ಲತೀಫ್ ಬ್ಲೂಸ್ಟಾರ್ ಮುಂತಾದವರು ಉಪಸ್ಥಿತರಿದ್ದರು.