ಕುಲಶೇಖರ ಹಾಲಿನ ಡೇರಿ ಬಳಿಯ ಮನೆಯೊಂದರಲ್ಲಿ 87 ವರ್ಷದ ಮಾವ ಪದ್ಮನಾಭ ಎಂಬವರಿಗೆ ಸೊಸೆ ಹಲ್ಲೆ ನಡೆಸಿದ ಘಟನೆಯ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾವನಿಗೆ ಹಲ್ಲೆ ನಡೆಸಿದ ಆರೋಪಿಯಾಗಿರುವ ಮಂಗಳೂರಿನ ಮೆಸ್ಕಾಂ ಸಿಬ್ಬಂದಿ ಉಮಾಶಂಕರಿ ಎಂಬುವರನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಹಲ್ಲೆಗೊಳಗಾದ ಪದ್ಮನಾಭ ಅವರ ಮಗ ಪ್ರೀತಮ್ ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ. ಪ್ರೀತಂ ಅವರ ಹೆಂಡತಿ ಮೆಸ್ಕಂ ಉದ್ಯೋಗಿ ಉಮಾಶಂಕರಿಯವರೊಂದಿಗೆ ಪದ್ಮನಾಭ ಅವರು ಕುಲಶೇಖರದ ಮನೆಯಲ್ಲಿ ವಾಸವಿದ್ದಾರೆ. ನೀವು ಯಾಕೆ ಈ ಮನೆಯಲ್ಲಿದ್ದೀರಿ, ಎಂದು ಸೊಸೆ ಆಗಾಗ ನನ್ನ ಜೊತೆ ತಗಾದೆ ತೆಗೆಯುತ್ತಿದ್ದಳು. ಧರಿಸಿದ್ದ ಅಂಗಿಯನ್ನು ತೆಗೆದು ಸೋಫಾದ ಮೇಲೆ ಇಟ್ಟಿದ್ದಕ್ಕೆ ಶನಿವಾರ ಜಗಳ ತೆಗೆದ ಸೊಸೆ ವಾಕಿಂಗ್ ಸ್ಟಿಕ್‌ನಿಂದ ಕಾಲಿಗೆ, ಸೊಂಟಕ್ಕೆ ಹಲ್ಲೆ ನಡೆಸಿದ್ದಾಳೆ. ಹಲ್ಲೆಯನ್ನು ತಡೆದಾಗ ಅವರನ್ನೇ ಸೋಫಾ ಸೆಟ್ ಮೇಲೆ ದೂಡಿ, ಸತ್ತು ಹೋಗು ಎಂದು ತುಳುವಿನಲ್ಲಿ ಬೈದಿದ್ದಳು ಎಂದು ಸಂತ್ರಸ್ತ ಪದ್ಮನಾಭ ಅವರು ಆರೋಪಿಸಿದ್ದಾರೆ.
ಹಲ್ಲೆಯಿಂದ ಅವರ ಬಲ ಮೊಣಕೈಗೆ ಗಾಯವಾಗಿದ್ದು ಹಾಗೂ ಎಡಕಣ್ಣಿನ ಹುಬ್ಬಿನ ಬಳಿ ಊದಿದ ಎಂದು ಪೊಲೀಸ್ ಮೂಲಗಳಿಂದ ಬಯಲಾಗಿದೆ. ಸೊಸೆ ಉಮಾಶಂಕರಿ ತಮ್ಮನ್ನು ಕೊಲೆ ಮಾಡಬಹುದು ಎಂಬ ಭಯದಿಂದ ಪದ್ಮನಾಭ ಅವರು ಮಾರ್ನಮಿಕಟ್ಟೆಯಲ್ಲಿರುವ ತಮ್ಮ ರಮೇಶ್ ಮನೆಗೆ ಹೋಗಿದ್ದರು. ಬಳಿಕ ಮೂಡುಬಿದಿರೆಯಲ್ಲಿರುವ ಮಗಳು ಪ್ರಿಯಾಗೆ ಫೋನ್ ಮಾಡಿ ವಿಷಯ ತಿಳಿಸಿದ್ದರು. ಹಲ್ಲೆಯ ದೃಶ್ಯಗಳು ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದ್ದು, ಅವುಗಳ ವಿಡಿಯೋವನ್ನು ಪ್ರೀತಮ್ ತನ್ನ ಸೋದರಿ ಪ್ರಿಯಾ ಅವರಿಗೆ ಕಳುಹಿಸಿದ್ದರು. ವೃದ್ಧ ತಂದೆಗೆ ಅತ್ತಿಗೆ ಉಮಾಶಂಕರಿ ಹಲ್ಲೆ ನಡೆಸಿದ ಬಗ್ಗೆ ಪ್ರಿಯಾ ನೀಡಿದ ದೂರಿನ ಆಧಾರದ ಮೇರೆಗೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.