ಸಿಎಎ ಮೂಲಕ ಜನರ ಗಮನ ದಿಕ್ಕು ತಪ್ಪಿಸುವ ಹುನ್ನಾರ: ಬಿ.ಕೆ ಇಮ್ತಿಯಾಜ್

ಕರಾವಳಿ

ಭಾರತ ದೇಶದ ಜನ ಸಂದಿಗ್ಧ ಪರಿಸ್ಥಿತಿಯಲ್ಲಿ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಜನರ ಬದುಕು ಭವಣೆಯ ಬಗ್ಗೆ ಚರ್ಚೆಯಾಗಬೇಕಾಗಿದೆ ಸಂಸತ್ ಚುನಾವಣೆಯ ಹೊಸ್ತಿಲಲ್ಲಿರುವ ಸಂದರ್ಭದಲ್ಲೇ ಭಾರತದ ಬಹುತ್ವಕ್ಕೆ ಅಪಾಯ ಒಡ್ಡುವ, ಆರೆಸ್ಸೆಸ್ಸಿನ ಅಜೆಂಡಾ ಜಾರಿಗೊಳಿಸುವ ಮೋದಿ ಸರಕಾರದ ಸಂವಿಧಾನ ವಿರೋಧಿ ಪೌರತ್ವ ತಿದ್ದುಪಡಿ ಕಾಯಿದೆಯನ್ನು ಜಾರಿಗೊಳಿಸಿರುವ ತೀರ್ಮಾನವು ಜನರ ಗಮನವನ್ನು ಧಿಕ್ಕು ತಪ್ಪಿಸುವ ಹುನ್ನಾರ ಇದರ ಹಿಂದೆ ಅಡಗಿದೆ ಎಂದು ಪೌರತ್ವ ತಿದ್ದುಪಡಿ ಕಾಯಿದೆಯ ಜಾರಿಗೊಳಿಸುವ ನೀತಿಯನ್ನು ವಿರೋಧಿಸಿ ಇಂದು (ತಾ/14/03/2024) ಮಂಗಳೂರಿನ ಕ್ಲಾಕ್ ಟವರ್ ಬಳಿ ಡಿವೈಎಫ್ಐ ದ.ಕ ಜಿಲ್ಲಾ ಸಮಿತಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.

ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಮಾತನಾಡುತ್ತಾ ಧರ್ಮ ನಿರಪೇಕ್ಷತೆಯ ನಾಡಿನಲ್ಲಿ ಪೌರತ್ವ ಪಡೆಯಲು ಮತಧರ್ಮ ಮಾನದಂಡವಾಗಿಸಿರುವುದು ಸಂವಿಧಾನ ವಿರೋಧಿ ನಡೆ. ಈ ಹಿಂದೆ ಸಿಎಎ ಜಾರಿಗೊಳಿಸುವ ಸಂದರ್ಭದಲ್ಲಿ ದೇಶದಲ್ಲಿ ನಡೆದ ಹಿಂಸಾಚಾರಕ್ಕೆ ನೂರಾರು ಅಮಾಯಕರು ಪ್ರಾಣವನ್ನು ಕಳೆದಿದ್ದಾರೆ. ದ.ಕ ಜಿಲ್ಲೆಯಲ್ಲೂ ಪೋಲೀಸರ ಗೋಲಿಬಾರ್ ಗೆ ಇಬ್ಬರು ಅಮಾಯಕ ಮುಸಲ್ಮಾನರನ್ನು ಬಲಿ ಪಡೆದಿದ್ದನ್ನು ಈ ಜಿಲ್ಲೆಯ ಜನ ಇನ್ನು ಮರೆತಿಲ್ಲ. ಜನರ ಗಮನ ಬೇರೆಡೆ ಸೆಳೆಯಲು ನಡೆಸುವ ಕುತಂತ್ರ ಇದರ ಹಿಂದಿದೆ. ಈ ಬರುವ ಚುನಾವಣೆಯಲ್ಲಿ ಯುವಜನರ ಉದ್ಯೋಗ, ಶಿಕ್ಷಣ, ಆರೋಗ್ಯ ಮತ್ತು ಬದುಕುವ ಪ್ರಶ್ನೆಯ ಕುರಿತು, ಹಸಿವಿನ ಸೂಚ್ಯಂಕದಲ್ಲಿ ಹಿಂದೆ ಸರಿದ ವಿಚಾರಗಳ ಕುರಿತು ಚರ್ಚೆಯಾಗಬೇಕಿದೆ ಎಂದರು.

ಪ್ರತಿಭಟನೆಯಲ್ಲಿ ಡಿವೈಎಫ್ಐ ಜಿಲ್ಲಾ ಮುಖಂಡರುಗಳಾದ ನವೀನ್ ಕೊಂಚಾಡಿ, ಅಡ್ವಕೇಟ್ ನಿತಿನ್ ಕುತ್ತಾರ್, ತಯ್ಯೂಬ್ ಬೆಂಗರೆ, ಜಗದೀಶ್ ಬಜಾಲ್, ರಿಜ್ವಾನ್ ಹರೇಕಳ, ಅಶ್ರಫ್ ಹರೇಕಳ, ಯೋಗೀಶ್ ಜಪ್ಪಿನಮೊಗರು,‌ಅಸುಂತಾ ಡಿಸೋಜ, ಹನೀಫ್ ಬೆಂಗರೆ, ನೌಶದ್ ಬೆಂಗರೆ,‌ ಮನೋಜ್ ಉರ್ವಸ್ಟೋರ್, ಶ್ರೀನಾಥ್ ಕಾಟಿಪಳ್ಳ, ಸೈಫರ್ ಆಲಿ, ಯೋಗಿತಾ‌ ಉಳ್ಳಾಲ,‌ಭಾರತೀ ಬೋಳಾರ ಮುಂತಾದವರು ಉಪಸ್ಥಿತರಿದ್ದರು.