ಕಳೆದ ಹತ್ತು ವರ್ಷಗಳಲ್ಲಿ ದೇಶದ ಜನರಿಗೆ ಮಂಕುಬೂದಿ ಎರಚಿ,ಹತ್ತು ಹಲವು ಸುಳ್ಳು ಆಶ್ವಾಸನೆಗಳನ್ನು ನೀಡಿ ಅಧಿಕಾರ ನಡೆಸಿದ ನರೇಂದ್ರ ಮೋದಿ ನೇತೃತ್ವದ ಸರಕಾರ ಎಲ್ಲಾ ವಿಭಾಗದ ಜನತೆಗೆ ಮೋಸ ಮಾಡಿ ಲಕ್ಷಾಂತರ ಕೋಟಿ ರೂಪಾಯಿ ಹಣವನ್ನು ಚುನಾವಣಾ ಬಾಂಡ್ ಹೆಸರಿನಲ್ಲಿ ಲಪಟಾಯಿಸಿ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಮುಳುಗಿದೆ.ಇಂತಹ ಕಾರ್ಪೊರೇಟ್ ಹಿಂದುತ್ವದ ದುಷ್ಟಕೂಟವನ್ನು ದೇಶದ ಜನತೆ ಒಂದಾಗಿ ಸೋಲಿಸದಿದ್ದರೆ ಬಾರತಕ್ಕೆ ಭವಿಷ್ಯವಿಲ್ಲ ಎಂದು CPIM ದ.ಕ.ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸುನಿಲ್ ಕುಮಾರ್ ಬಜಾಲ್ ರವರು ಆತಂಕ ವ್ಯಕ್ತಪಡಿಸಿದರು. ಉಳ್ಳಾಲ ತಾಲೂಕು ಮಟ್ಟದ CPIM ಸ್ಥಳೀಯ ಶಾಖಾ ಕಾರ್ಯದರ್ಶಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಮೂರನೇ ಬಾರಿಗೆ ಮತ್ತೆ ಅಧಿಕಾರದ ಗದ್ದುಗೆಯನ್ನು ಏರುವುದಾಗಿ ಬಡಾಯಿ ಕೊಚ್ಚಿಕೊಳ್ಳುತ್ತಿರುವ ಬಿಜೆಪಿ, ಇಡಿ ಐಟಿ ಧಾಳಿಗಳ ಮೂಲಕ ಯಾತಕ್ಕಾಗಿ ಪ್ರತಿಪಕ್ಷಗಳನ್ನು ಮಣಿಸಲು ಹೊರಟಿದೆ ? ಮಾತ್ರವಲ್ಲದೆ ಹಿಂದುತ್ವದ ಹೆಸರಿನಲ್ಲಿ ಮತ್ತೆ ದೇಶವನ್ನು ವಿಭಜಿಸಲು ಹೊರಟ ಬಿಜೆಪಿ ಸಂಘಪರಿವಾರದ ಕುತಂತ್ರಗಳನ್ನು ಜನತೆ ಸರಿಯಾದ ದಾರಿಯಲ್ಲಿ ಅರ್ಥೈಸಬೇಕಾಗಿದೆ ಎಂದು ಹೇಳಿದರು.

ಸಭೆಯ ಅಧ್ಯಕ್ಷತೆಯನ್ನು ವಹಿಸಿದ CPIM ಜಿಲ್ಲೆಯ ಹಿರಿಯ ನಾಯಕರಾದ ಕ್ರಷ್ಣಪ್ಪ ಸಾಲಿಯಾನ್ ರವರು ಮಾತನಾಡುತ್ತಾ, ದೇಶದ ಪ್ರಮುಖ ಆಧಾರ ಸ್ತಂಭಗಳಾದ ಕಾರ್ಮಿಕ ವರ್ಗ ಹಾಗೂ ರೈತಾಪಿ ಜನತೆಯ ಬದುಕಿನಲ್ಲಿ ಚೆಲ್ಲಾಟವಾಡುವ ಮೋದಿ ಸರಕಾರ ದೇಶದ ಅರ್ಥಿಕತೆಯನ್ನೇ ಸರ್ವನಾಶ ಮಾಡಿದೆ.ಸಾರ್ವಜನಿಕ ಉದ್ದಿಮೆಗಳನ್ನು ಕಾರ್ಪೊರೇಟ್ ಸಂಸ್ಥೆಗಳ ಕೈಗೊಪ್ಪಿಸಿ ಮತ್ತೆ ದೇಶವನ್ನು ಗುಲಾಮಗಿರಿಯತ್ತ ಸಾಗಿಸಲು ಹುನ್ನಾರ ನಡೆಸುತ್ತಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ CPIM ಉಳ್ಳಾಲ ತಾಲ್ಲೂಕು ಕಾರ್ಯದರ್ಶಿ ಯು.ಜಯಂತ ನಾಯಕ್ ರವರು ಮಾತನಾಡಿ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕೂಟವನ್ನು ಸೋಲಿಸಿ, ಜಾತ್ಯಾತೀತ ಶಕ್ತಿಗಳ ಗೆಲುವಿಗೆ ಕಮ್ಯುನಿಸ್ಟರು ಶಕ್ತಿಮೀರಿ ಶ್ರಮಿಸಬೇಕೆಂದು ಹೇಳಿದರು.
ಮಾರ್ಚ್ 31 ರಂದು ತೊಕ್ಕೋಟು ಯುನಿಟಿ ಹಾಲ್ ನಲ್ಲಿ ನಡೆಯಲಿರುವ ಮಂಗಳೂರು ವಿಧಾನಸಭಾ ಕ್ಷೇತ್ರದ ರಾಜಕೀಯ ಸಮಾವೇಶ, ಸ್ಥಳೀಯ ಪ್ರದೇಶಗಳಲ್ಲಿ ರಚಿಸಲ್ಪಡುವ ಸಿದ್ದತಾ ಸಭೆಗಳು ಹಾಗೂ ಎಪ್ರಿಲ್ 7ರಂದು ಜಿಲ್ಲೆಯಾದ್ಯಂತ ಯೋಜಿಸಲಾಗಿರುವ ಜನತೆಯ ಮಹಾಭಿಯಾನ ಮನೆ ಮನೆ ಭೇಟಿ ಕಾರ್ಯಕ್ರಮಗಳನ್ನು ಉಳ್ಳಾಲ ತಾಲೂಕಿನಲ್ಲಿ ಯಶಸ್ವಿಗೊಳಿಸಲು ಸಭೆಯು ಸರ್ವಾನುಮತದಿಂದ ಅಂಗೀಕರಿಸಿತು. ಸಭೆಯಲ್ಲಿ CPIM ಜಿಲ್ಲಾ ನಾಯಕರಾದ ಪದ್ಮಾವತಿ ಶೆಟ್ಟಿ, ತಾಲೂಕು ಮುಖಂಡರಾದ ಸುಂದರ ಕುಂಪಲ, ಲೋಕಯ್ಯ ಪನೀರ್, ವಿಲಾಸಿನಿ ತೊಕ್ಕೋಟು, ರೋಹಿದಾಸ್,ಚಂದ್ರಹಾಸ ಪಿಲಾರ್,ಜಯಂತ ಅಂಬ್ಲಮೊಗರು,ಶೇಖರ್ ಕುಂದರ್ ಮುಂತಾದವರು ಉಪಸ್ಥಿತರಿದ್ದರು.