ಕಾಂಗ್ರೆಸ್ ಹೊರತು ಪಡಿಸಿದ “ಇಂಡಿಯಾ” ಕೂಟದ ಘಟಕ ಪಕ್ಷಗಳು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಮಿಕ, ರೈತ, ದಲಿತ, ಯುವಜನ, ಅಲ್ಪಸಂಖ್ಯಾತ ಸಂಘಟನೆಗಳು ಸೇರಿದಂತೆ ಸಮಾನ ಮನಸ್ಕ ಜನಪರ ಸಾಮಾಜಿಕ ಸಂಘಟನೆಗಳು ಮಂಗಳೂರಿನ ಪುರಭವನದಲ್ಲಿ ಎಪ್ರಿಲ್ 15 ರಂದು “ಬಿಜೆಪಿ ಸೋಲಿಸಿ, ಭಾರತ ಉಳಿಸಿ” ಘೋಷಣೆಯಡಿ ಬೃಹತ್ “ಜನ ಸಮಾವೇಶ” ಹಮ್ಮಿಕೊಂಡಿವೆ. ಬೆಳಿಗ್ಗೆ 10 :00 ರಿಂದ ಮಧ್ಯಾಹ್ನ 1:00 ಗಂಟೆಯವರಗೆ ನಡೆಯಲಿರುವ ಈ ಸಮಾವೇಶದಲ್ಲಿ ಸುಮಾರು 40 ಸಂಘಟನೆಗಳು ಪಾಲ್ಗೊಳ್ಳಲಿವೆ ಎಂದು ಸಮಾವೇಶ ಆಯೋಜಿಸಿರುವ ಜಂಟಿ ಸಮಿತಿ ತಿಳಿಸಿದೆ.
ಹತ್ತು ವರ್ಷಗಳ ನರೇಂದ್ರ ಮೋದಿ ಕೂಟದ ಆಡಳಿತ ದೇಶದ ಜನಸಾಮಾನ್ಯರನ್ನು ಅತೀವ ಸಂಕಷ್ಟಕ್ಕೆ ತಳ್ಳಿದೆ. ರೈತರು, ಕಾರ್ಮಿಕರು ತಮ್ಮ ಹಕ್ಕುಗಳನ್ನು ಕಳೆದು ಕೊಂಡು ಬೀದಿಗೆ ಬಂದಿದ್ದಾರೆ. ನಿರುದ್ಯೋಗ, ಭ್ರಷ್ಟಾಚಾರ ಎಂದೂ ಕಾಣದ ಮಟ್ಟಕ್ಕೆ ಏರಿಕೆಯಾಗಿದೆ. ಮತೀಯವಾದಿ ಕಾರ್ಪೊರೇಟ್ ಸರ್ವಾಧಿಕಾರದ ಈ ಸರಕಾರ ದೇಶದ ಮೇಲೆ ಅಘೋಷಿತ ತುರ್ತು ಪರಿಸ್ಥಿತಿಯನ್ನು ಹೇರಿದೆ. ದಕ್ಷಿಣ ಕನ್ನಡ ಜಿಲ್ಲೆಯಂತೂ ಕಳೆದ 33 ವರ್ಷಗಳ ಬಿಜೆಪಿ ಸತತ ಗೆಲುವಿನಿಂದ ದಕ್ಷಿಣ ಕನ್ನಡ ಜಿಲ್ಲೆ ನಲುಗಿಹೋಗಿದೆ. ಆರೋಗ್ಯ, ಶಿಕ್ಷಣ, ಉದ್ಯೋಗ ಸೃಷ್ಟಿ ಜಿಲ್ಲೆಯಲ್ಲಿ ಮರೀಚಿಕೆಯಾಗಿದ್ದು ಅಭಿವೃದ್ದಿ ಕೆಲವೆ ವರ್ಗಕ್ಕೆ ಸೀಮಿತಗೊಂಡಿದೆ. ಸದಾ ಕೋಮು ಉದ್ವಿಗ್ನತೆಯಿಂದಾಗಿ ಜಿಲ್ಲೆಯಲ್ಲಿ ಜನ ಸಾಮಾನ್ಯರ ಸಮಸ್ಯೆಗಳು ಚರ್ಚೆಗೇ ಬರದ ಸ್ಥಿತಿ ಉದ್ಭವವಾಗಿದೆ. ಬಿಜೆಪಿ ಶಾಸಕ, ಸಂಸದರು ಉದ್ರೇಕಕಾರಿ ಭಾಷಣಕ್ಕಷ್ಟೆ ಸೀಮಿತಗೊಂಡಿದ್ದಾರೆ.
ದೇಶ ಹಾಗೂ ದ.ಕ. ಜಿಲ್ಲೆ ಇಂದು ಅತ್ಯಂತ ಸಂಕಷ್ಟದ ಸ್ಥಿತಿಯನ್ನು ಹಾದು ಹೋಗುತ್ತಿದ್ದು, ಬಿಜೆಪಿಯನ್ನು ಈ ಚುನಾವಣೆಯಲ್ಲಿ ಸೋಲಿಸುವುದು ದೇಶದ ಮೇಲೆ ಕಾಳಜಿ ಇರುವ ಪ್ರತಿಯೊಬ್ಬರ ಆದ್ಯತೆಯಾಗಿದೆ. ಈ ಹಿನ್ನಲೆಯಲ್ಲಿ ಜಿಲ್ಲೆಯ ಎಡ ಪಕ್ಷಗಳು, ಆಮ್ ಆದ್ಮಿ ಪಕ್ಷ ಸೇರಿದಂತೆ ರೈತ, ಕಾರ್ಮಿಕ, ಯುವಜನ, ದಲಿತ ಸಂಘಟನೆಗಳು, ಸಮಾನ ಮನಸ್ಕ ಜನಪರ ಸಾಮಾಜಿಕ ಸಂಘಟನೆಗಳು ಜಂಟಿ ಸಮಿತಿಯನ್ನು ರಚಿಸಿಕೊಂಡು ಬಿಜೆಪಿ ಸೋಲಿಸಲು ಒಂದಾಗಿ ದುಡಿಯುವ ನಿಟ್ಟಿನಲ್ಲಿ ಈ ರಾಜಕೀಯ ಸಮಾವೇಶ ಹಮ್ಮಿಕೊಂಡಿದ್ದು, “ಇಂಡಿಯಾ” ಕೂಟದ ಅಭ್ಯರ್ಥಿಗೆ ಬೆಂಬಲ ಘೋಷಿಸಲು ನಿರ್ಧರಿಸಿವೆ ಎಂದು ಎಡ ಹಾಗೂ ಜಾತ್ಯಾತೀತ ಪಕ್ಷಗಳು ಹಾಗೂ ಸಮಾನ ಮನಸ್ಕ ಸಂಘಟನೆಗಳ ಜಂಟಿ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ಪ್ರಕಟನೆಯಲ್ಲಿ ತಿಳಿಸಿದ್ದಾರೆ