ದಂತ ವೈದರನ್ನು ರಾಜ್ಯ ಸರ್ಕಾರಿ ಸೇವೆಗಳ ಅಡಿ ಬರುವ ತಾಲ್ಲೂಕು ಆರೋಗ್ಯ ಅಧಿಕಾರಿ ಹುದ್ದೆಗೆ ನಿಯೋಜಿಸುವಂತಿಲ್ಲ: ಹೈಕೋರ್ಟ್‌

ರಾಜ್ಯ

ದಂತ ವೈದರನ್ನು ರಾಜ್ಯ ಸರ್ಕಾರಿ ಸೇವೆಗಳ ಅಡಿ ಬರುವ ತಾಲ್ಲೂಕು ಆರೋಗ್ಯ ಅಧಿಕಾರಿ ಹುದ್ದೆಗೆ ನಿಯೋಜಿಸುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠ ಆದೇಶಿಸಿದೆ. ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕು ಆರೋಗ್ಯ ಕಚೇರಿಯ ವೈದ್ಯಾಧಿಕಾರಿಯಾಗಿ ತಮ್ಮನ್ನು ನಿಯೋಜಿಸಿದ್ದ ಆದೇಶ ಹಿಂಪಡೆದ ಸರ್ಕಾರದ ಕ್ರಮ ಪ್ರಶ್ನಿಸಿ ಹಿರಿಯ ದಂತ ವೈದ್ಯಾಧಿಕಾರಿ ಡಾ.ವಿದ್ಯಾವತಿ ಯು. ಪಾಟೀಲ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಎಂ ಐ ಅರುಣ್‌ ಮತ್ತು ಉಮೇಶ್‌ ಎಂ. ಅಡಿಗ ಅವರ ನೇತೃತ್ವದ ವಿಭಾಗೀಯ ಪೀಠ ವಜಾ ಮಾಡಿದೆ.

ಸರ್ಕಾರ 2021ರ ಜೂನ್‌ 1ರಂದು ಹೊರಡಿಸಿದ ಅಧಿಸೂಚನೆ ಪ್ರಕಾರ, ಜನರಲ್‌ ಡ್ಯೂಟಿ ಮೆಡಿಕಲ್‌ ಆಫೀಸರ್‌ ತಾಲ್ಲೂಕು ಆರೋಗ್ಯ ಅಧಿಕಾರಿ ಹುದ್ದೆ ಹೊಂದಲು ಅರ್ಹರಾಗಿರುತ್ತಾರೆ. 1992ರ ಜುಲೈ 17ರಂದು ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯವು ಹೊರಡಿಸಿದ ಅಧಿಸೂಚನೆ ಪ್ರಕಾರ ಜನರಲ್‌ ಡ್ಯೂಟಿ ಮೆಡಿಕಲ್‌ ಆಫೀಸರ್‌ ಎಂಬಿಬಿಎಸ್‌ ಪದವಿ ಪಡೆದಿರಬೇಕು. ಪ್ರಕರಣದಲ್ಲಿ ಅರ್ಜಿದಾರರು ದಂತ ವೈದ್ಯರಾಗಿದ್ದು, ಎಂಬಿಬಿಎಸ್‌ ಪದವಿ ಪಡೆದಿಲ್ಲ ಎಂದು ಪೀಠ ಆದೇಶದಲ್ಲಿ ಹೇಳಿದೆ. ಜನರಲ್‌ ಡ್ಯೂಟಿ ಮೆಡಿಕಲ್‌ ಆಫೀಸರ್‌ ಮತ್ತು ಹಿರಿಯ ದಂತ ವೈದ್ಯ ಆರೋಗ್ಯ ಅಧಿಕಾರಿ, ರಾಜ್ಯ ಸರ್ಕಾರ ಸೇವೆಗಳ ಅಡಿಯಲ್ಲಿ ಬರುವ ಹುದ್ದೆಗಳಾಗಿವೆ. ಹಿರಿಯ ದಂತ ಆರೋಗ್ಯ ಅಧಿಕಾರಿಯು ಬಿಡಿಎಸ್‌ ಪದವೀಧರರು. ಜನರಲ್‌ ಡ್ಯೂಟಿ ಮೆಡಿಕಲ್‌ ಆಫೀಸರ್‌ ಎಂಬಿಬಿಎಸ್‌ ಪದವೀಧರರು. ಈ ಹುದ್ದೆಗಳು ಬಿಟ್ಟು ಕರ್ನಾಟಕ ಸಿವಿಲ್‌ ಸೇವೆಗಳು ಕಾಯಿದೆ-2011ರ ಸೆಕ್ಷನ್‌ 2(ಜಿ) ಅಡಿಯ ಶೆಡ್ಯೂಲ್‌-1 ಅಡಿಯಲ್ಲಿ ಇತರೆ ಅಧಿಕಾರಿಗಳ ಹುದ್ದೆಗಳು ಇವೆ. ಅವರೆಲ್ಲರೂ ಆರೋಗ್ಯ ಅಧಿಕಾರಿಗಳಾಗಿಯೇ ಪರಿಗಣಿಸಲ್ಪಡುತ್ತಾರೆ. ಆದರೆ, ಅವರು ಜನರಲ್‌ ಡ್ಯೂಟಿ ಮೆಡಿಕಲ್‌ ಆಫೀಸರ್‌ಗಳು ಅಲ್ಲ. ಇದು ಪ್ರತ್ಯೇಕ ಕೆಟಗರಿಯಾಗಿದೆ. ಅವರು ವೈದ್ಯಾಧಿಕಾರಿಗಳಾಗಿಯೇ ಪರಿಗಣಿಸಲ್ಪಡುತ್ತಾರೆ ಎಂದು ಪೀಠ ಹೇಳಿದೆ.

ಅರ್ಜಿದಾರರು ಎಂಬಿಬಿಎಸ್‌ ಪದವೀಧರರಲ್ಲ. ಜನರಲ್‌ ಡ್ಯೂಟಿ ಮೆಡಿಕಲ್‌ ಆಫೀಸರ್‌ ಆಗಿ ಅವರನ್ನು ಪರಿಗಣಿಸಲಾಗದು. ತಾಲ್ಲೂಕು ಆರೋಗ್ಯ ಅಧಿಕಾರಿ ಹುದ್ದೆ ಹೊಂದಲು ಅವರು ಅರ್ಹರಲ್ಲ. ಹೀಗಾಗಿ, ಕುಂದಗೋಳ ತಾಲ್ಲೂಕು ಆರೋಗ್ಯ ಅಧಿಕಾರಿಯಾಗಿ ಅರ್ಜಿದಾರರನ್ನು ನಿಯೋಜನೆ ಮಾಡಿರುವುದು ತಪ್ಪು. ಅದನ್ನು ಅರಿತುಕೊಂಡೇ ಸರ್ಕಾರ ತನ್ನ ಆದೇಶ ಹಿಂಪಡೆದುಕೊಂಡಿದೆ ಎಂದು ಪೀಠ ಆದೇಶಿಸಿದೆ.