ಹುಲಿ ಕೊಂದು ತಲೆಮರೆಸಿಕೊಂಡ ಅರಣ್ಯಕಾವಲುಗಾರ ಕುಂಡ್ರ ಸುರೇಶ ಭೂಗತ
ವರದಿ: ಸಲಾವುದ್ದೀನ್ ಮೂಡಿಗೆರೆ
ಮೂಡಿಗೆರೆ : ಕಳೆದ ಕೆಲವು ತಿಂಗಳುಗಳ ಹಿಂದೆ ಮೂಡಿಗೆರೆ ಸಮೀಪದ ಸಾರಗೋಡು ರಕ್ಷಿತಾರಣ್ಯದಲ್ಲಿ ಹುಲಿ ಕೊಂದ ಆರೋಪದ ಅಡಿಯಲ್ಲಿ ಓರ್ವನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರ ಹಿನ್ನಲೆಯಲ್ಲಿ ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿತ್ತು. ಈ ಪ್ರಕರಣಕ್ಕೆ ಹೊಸ ತಿರುವು ಪಡೆದುಕೊಂಡಿದ್ದು ಇದೀಗ ಇಬ್ಬರ ಬಂಧನವಾಗಿರುವ ಪ್ರಕರಣ ವರದಿಯಾಗಿದೆ.
2024ರ ಜನವರಿಯಲ್ಲಿ ಕುಂಡ್ರ ನಿವಾಸಿ ಸತೀಶ ಎಂಬಾತನು ಚಿಕ್ಕಮಗಳೂರಿನ ಜಿಲ್ಲಾ ನ್ಯಾಯಾಲಯಕ್ಕೆ ಹಾಜರಾಗಿ, ನ್ಯಾಯಾಲಯದಿಂದ ಹೊರ ಬರುತ್ತಿರುವಾಗ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸತೀಶನನ್ನು ಬಂಧಿಸಿ ಆತನ ಬೈಕಿನ ಬ್ಯಾಗಿನಲ್ಲಿದ್ದ ಹುಲಿಯ ರುಂಡವನ್ನು ಜಫ್ತಿ ಮಾಡುವುದರ ಮೂಲಕ ಆತನ ಮೇಲೆ ಪ್ರಕರಣ ದಾಖಲಿಸಿ ಬಂದಿಸಿದ್ದರು.

ಅರಣ್ಯ ಕಾವಲುಗಾರ
ಆದರೇ ಇದೀಗ ಈ ಪ್ರಕರಣವು ಹೊಸ ತಿರುವನ್ನು ಪಡೆದುಕೊಂಡಿದ್ದು, ತನ್ನ ಊರಿನವನೇ ಆದ ಅರಣ್ಯ ಇಲಾಖೆಯ ಗಡಿ ಬೇಲಿ ಕಾಯುವ ಕಾವಲುಗಾರ ಸುರೇಶ, ತಳವಾರ ಸಮೀಪದ ಸುಧೀರ ಎಂಬುವವರ ಒಂಟಿ ನಳಿಕೆಯ ನಾಡಕೋವಿಯಿಂದ ಹಿರೇಬೈಲಿನ ಆದರ್ಶ ಮತ್ತು ತಳವಾರದ ದೀಕ್ಷಿತ್ ಆಲಿಯಾಸ್ ಡಿಕ್ಕಿ ಎಂಬಾತನ ಜೊತೆ ಸೇರಿ ಹುಲಿಯನ್ನು ಹೊಡೆದು ಕೊಂದು ಹಾಕಿ, ಅದರ ತಲೆಯನ್ನು ಕುಂಡ್ರದ ಸತೀಶನ ಬೈಕಿನ ಬ್ಯಾಗಿನಲ್ಲಿ ಅಡಗಿಸಿಟ್ಟು ನಂತರ ಅರಣ್ಯಾಧಿಕಾರಿಗಳಿಗೆ ಬೈಕಿನ ಬ್ಯಾಗಿನಲ್ಲಿ ಹುಲಿಯ ತಲೆ ಇದೆ ಎಂದು ಮಾಹಿತಿಯನ್ನು ನೀಡಿದ್ದರ ಹಿನ್ನೆಲೆಯಲ್ಲಿ ಅಧಿಕಾರಿಗಳು ಅಂದು ನಿರಪರಾಧಿ ಕುಂಡ್ರ ಸತೀಶನನ್ನು ಹುಲಿಯ ತಲೆಯೊಂದಿಗೆ ಬಂಧಿಸಿ ಜೈಲಿಗಟ್ಟಿದ್ದರು.
ಇದರಿಂದ ನೊಂದ ಕುಂಡ್ರ ಸತೀಶ ಅನುಮಾನದಿಂದ ಹಿರೇಬೈಲ್ ಆದರ್ಶನಿಗೆ ದೇವರ ಮುಂದೆ ಪ್ರಮಾಣ ಮಾಡು ಬಾ ಎಂದಾಗ ಗಲಿಬಿಲಿಗೊಂಡ ಅದರ್ಶ ದೇವರ ಮುಂದೆ ಸತ್ಯ ಪ್ರಮಾಣ ಮಾಡುತ್ತಾನೆ. ಆದರ್ಶ ಸತ್ಯ ಪ್ರಮಾಣ ಮಾಡುತ್ತಿರುವಾಗ ಬುದ್ದಿವಂತಿಕೆಯಿಂದ ಕುಂಡ್ರ ಸತೀಶ ತನ್ನ ಮೊಬೈಲ್ ಕ್ಯಾಮರದಲ್ಲಿ ಆದರ್ಶ ನೀಡಿದ ಹೇಳಿಕೆಯನ್ನು ಚಿತ್ರಿಕರಿಸಿಕೊಂಡು ನಂತರ ಅದನ್ನು ಜಿಲ್ಲಾ ಉಪ-ಅರಣ್ಯ ಸಂರಕ್ಷಾಣಾಧಿಕಾರಿಗಳಿಗೆ ನೀಡಿದ ಹಿನ್ನಲೆಯಲ್ಲಿ, ಅದನ್ನು ಪರಿಶೀಲಿಸಿ ಮರು ತನಿಖೆಗೆ ಆದೇಶಿಸಿದ ಹಿನ್ನಲೆಯಲ್ಲಿ ಈ ಪ್ರಕರಣವು ಹೊಸ ತಿರುವು ಪಡೆದುಕೊಂಡಿದ್ದು, ಸದ್ರಿ ಪ್ರಕರಣದ ಮರು ತನಿಖೆ ಆರಂಬಿಸಿದ ಅರಣ್ಯಧಿಕಾರಿಗಳು ಹಿರೇಬೈಲಿನ ಆದರ್ಶ ಮತ್ತು ತಳವಾರದ ದೀಕ್ಷಿತ್ ನನ್ನು ಬಂಧಿಸಿದಾಗ ಹುಲಿಯನ್ನು ಕೊಂದು, ನಾಲ್ಕು ಭಾಗ ಮಾಡಿ ನಾಲ್ಕು ದಿಕ್ಕಿನಲ್ಲಿ ಹೂತು ಹಾಕಿದ್ದ ವಿಷಯ ಆರೋಪಿಗಳು ಬಾಯಿಬಿಟ್ಟ ಹಿನ್ನಲೆಯಲ್ಲಿ, ಹೂತ ಜಾಗದಲ್ಲಿರುವ ಹುಲಿಯ ಕಳೆಬರವನ್ನು ಹೊರತೆಗೆಸುವಲ್ಲಿ ಯಶಸ್ವಿಯಾಗಿದ್ದರು.

ನಿರಪರಾಧಿ ಸತೀಶ
ಆದರೆ ಈ ಪ್ರಕರಣದ ತನಿಖೆ ಸಂದರ್ಭದಲ್ಲಿ ಹುಲಿಯನ್ನು ಬಂದೂಕಿನಿಂದ ಕೊಂದನೆಂದು ಹೇಳಲಾದ ಮುಖ್ಯ ಆರೋಪಿ ಅರಣ್ಯ ಕಾವಲುಗಾರ ಸುರೇಶ ಅಧಿಕಾರಿಗಳ ಜೊತೆಯಲ್ಲೇ ಇದ್ದು, ಆರೋಪಿಗಳನ್ನು ಬಂಧಿಸುವ ಸಮಯದಲ್ಲಿ ಜೊತೆಗಿದ್ದ ಅರಣ್ಯ ಕಾವಲುಗಾರ ಸುರೇಶ ಓಡಿ ಹೋಗಿದ್ದಾನೆಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಆದರೆ ಸುರೇಶ ಏನಾದರೂ ಸಿಕ್ಕಿ ಬಿದ್ದಲ್ಲಿ ಕೆಲವು ಅಧಿಕಾರಿಗಳ ಸೀಕ್ರೇಟ್ ರೆಕಾರ್ಡಿಂಗ್ ಗಳು ಅತನ ಬಳಿ ಇದ್ದು, ಅವುಗಳು ಲೀಕ್ ಔಟ್ ಆದರೆ ಅಧಿಕಾರಿಗಳ ವೃತ್ತಿ ಬದುಕು ಹಾಗೂ ವೈಯಕ್ತಿಕ ಬದುಕಿಗೆ ತೊಂದರೆಯಾಗಬಹುದು ಎಂದು ಅಧಿಕಾರಿಗಳೇ ಸುರೇಶ ಓಡಿ ಹೋದ ಎಂಬ ಕತೆ ಹೆಣೆದಿರಬಹುದೇ? ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಆದ್ದರಿಂದ ಈ ಪ್ರಕರಣವನ್ನು ಸಿಒಡಿ ತನಿಖೆಗೆ ಒಳಪಡಿಸುವಂತೆ ಕುಂದೂರಿನ ಗ್ರಾಮಸ್ಥರು ಮತ್ತು ಈ ಪ್ರಕರಣದಲ್ಲಿ ಸಿಲುಕಿದ್ದ ಕುಂಡ್ರ ನಿರಪರಾಧಿ ಸತೀಶ್ ಒತ್ತಾಯಿಸಿದ್ದಾರೆ. ಅನ್ಯಾಯದಿಂದ ಜೈಲಿಗೆ ಹೋದ ಕುಂಡ್ರ ನಿವಾಸಿ ಸತೀಶನಿಗೆ ನ್ಯಾಯ ಸಿಗುತ್ತದೆಯೋ ಕಾದು ನೋಡಬೇಕಾಗಿದೆ.?