ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ ಸೆಕ್ಸ್ ಹಗರಣ; ಅಧಿಕಾರಿಗಳು ಮೌನಕ್ಕೆ ಶರಣು.!

ರಾಜ್ಯ

ಹಾಸನ: ರಾಜಕೀಯ ಮುಖಂಡರೊಬ್ಬರ ಸಂಪರ್ಕಕ್ಕೆ ಬಂದಿರುವ ನೂರಾರು ಮಹಿಳೆಯರ ಖಾಸಗಿ ವಿಡಿಯೋಗಳು ಎಗ್ಗಿಲ್ಲದೆ ಮೊಬೈಲ್‌ಗಳಲ್ಲಿ ಪಸರಿಸುತ್ತಿರುವುದಾಗಿ ಹೇಳಲಾಗುತ್ತಿದ್ದು, ಇಂತಹ ಅಘೋರ ಸ್ಕ್ಯಾಂಡಲ್ ಜಿಲ್ಲೆಯಲ್ಲಿ ಬಹಿರಂಗವಾಗಿ ನಡೆಯುತ್ತಿದ್ದರೂ ಸಹ ಇಡೀ ಆಡಳಿತ ಮೌನಕ್ಕೆ ಶರಣಾಗಿರುವುದು ಮಾತ್ರ ಜಿಲ್ಲೆಯ ಮಾನವಂತ ನಾಗರೀಕ ಸಮಾಜ ತಲೆತಗ್ಗಿಸುವ ವಿಚಾರವಾಗಿದೆ. ಕ್ರಮ ಕೈಗೊಳ್ಳಬೇಕಾದವರು ಕಣ್ಣು ಮುಚ್ಚಿದ್ದಾರೆ. ಸಾವಿರಾರು ಹೆಣ್ಣು ಮಕ್ಕಳ ಮೇಲಿನ ಲೈಂಗಿಕ ಶೋಷಣೆ ಜಗಜ್ಜಾಹಿರಾಗಿದೆ. ಖಾಸಗಿತನ, ಕಾಮೋದ್ರೆಕದ ಹೆಸರಿನಲ್ಲಿ ವಿಡಿಯೋ ಮಾಡಲಾಗಿದ್ದು, ವಿಡಿಯೋಗಳು ಹಾಸನ ಜಿಲ್ಲೆಯನ್ನು ಬೆಚ್ಚಿ ಬೀಳಿಸಿವೆ.

ಮೂರು ದಿನಗಳ ಹಿಂದೆ ಐದಾರು ವಿಡಿಯೋಗಳು ಪೆನ್ ಡ್ರೈವ್ ಹೆಸರಿನಲ್ಲಿ ಹರಿದಾಡಿದ್ದು ಕೇಳಿ ಬಂದಿದ್ದು, ಇದು ಪೊಲೀಸ್ ಇಲಾಖೆಯ ಗಮನಕ್ಕೂ ಬಂದಿತ್ತು. ಆದರೆ ಬುಧವಾರ ಸಂಜೆಯಿಂದ ನೂರಾರು ಪೆನ್ ಡ್ರೈವ್‌ಗಳ ಹೆಸರಿನಲ್ಲಿ ನೂರಾರು ವಿಡಿಯೋಗಳು ಮೊಬೈಲ್‌ಗಳಲ್ಲಿ ಹರಿದಾಡುತ್ತಿದೆ. ಅಶ್ಲೀಲ, ಅಸಹ್ಯಕರವಾದ ವಿಡಿಯೋಗಳು ಇಡೀ ಜಿಲ್ಲೆಯ ರಾಜಕೀಯವನ್ನೇ ಅನುಮಾನದಿಂದ ನೋಡುವಂತೆ ಮಟ್ಟಿಗೆ ತಂದು ನಿಲ್ಲಿಸಿದೆ. ರಾಜಕೀಯ ಮುಖಂಡರು ಅವರ ಹಿಂಬಾಲಕರ ನಡೆಯ ಬಗ್ಗೆಯೇ ಪ್ರಶ್ನೆಗಳು ಮೂಡಲಾರಂಭಿಸಿದ್ದು, ದೇಶದ ಇತಿಹಾಸದಲ್ಲಿ ಇಂತಹ ನಿರ್ಲಜ್ಯ ರಾಜಕಾರಣ ಜಿಲ್ಲೆಯಲ್ಲಿ ಮಾತ್ರವಲ್ಲ ಇಡೀ ರಾಜ್ಯದಲ್ಲಿಯೇ ಕಂಡು ಕೇಳಿರಲಿಲ್ಲ. ಇದು ಇಡೀ ಜಿಲ್ಲೆಯ ರಾಜಕೀಯಕ್ಕೆ ಕಪ್ಪು ಚುಕ್ಕೆ.

ಈ ವಿಡಿಯೋಗಳಲ್ಲಿ ಲೈಂಗಿಕ ಅಸುರಕ್ಷತೆ ಕಂಡು ಬಂದಿದೆ ಎನ್ನಲಾಗಿದ್ದು. ಹೆಚ್.ಐ.ವಿಯಂತಹ ವೈರಾಣು ಬಾಧಿತ ಮಹಿಳೆಯೊಂದಿಗೆ ಅಶ್ಲೀಲ ವಿಡಿಯೋ ಹೊರ ಬಂದಿದೆ ಎಂಬ ಮಾತುಗಳು ಕೇಳಿ ಬಂದಿದೆ. ಆ ವ್ಯಕ್ತಿ ಅಶ್ಲೀಲ ಚಿತ್ರ ಚಿತ್ರಿಸಿಕೊಂಡಿರುವುದು ಜಿಲ್ಲೆಯಲ್ಲಿ ಅದೆಷ್ಟು ಮಂದಿಗೆ ಮಾರಣಾಂತಿಕ ಕಾಯಿಲೆ ಹರಡಿಸಿದ್ದಾರೆಂದು ಪ್ರಶ್ನಿಸಲಾಗುತ್ತಿದೆ. ಇದರ ಸತ್ಯಾಸತ್ಯತೆಯ ಬಗ್ಗೆಯೂ ಸೂಕ್ತ ತನಿಖೆ ನಡೆಯಬೇಕಿದೆ.
ಅಶ್ಲೀಲ ವಿಡಿಯೋ ಚಿತ್ರೀಕರಣದ ವೈರಲ್ ವಿರುದ್ಧ ಸೂಕ್ತ ತನಿಖೆ ಅತ್ಯಗತ್ಯ. ಜಿಲ್ಲೆಯಲ್ಲಿ ಲಕ್ಷಾಂತರ ಜನರ ಬಳಿ ಅಶ್ಲೀಲ ವಿಡಿಯೋಗಳು ಹರಿದಾಡುತ್ತಿವೆ. ಈ ಬಗ್ಗೆ ಆಡಳಿತ, ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಜಾಣ ಮೌನಕ್ಕೆ ಶರಣಾಗಿದ್ದು ಸಂಶಯಕ್ಕೆ ಎಡೆಮಾಡಿದೆ.

ಚುನಾವಣೆ-ರಾಜಕೀಯ ಏನೇ ಇರಲಿ, ವಿಡಿಯೋ ಚಿತ್ರೀಕರಣದ ಬಗ್ಗೆ ವ್ಯಾಪಕ ತನಿಖೆಯ ಅಗತ್ಯ ಕಂಡು ಬಂದಿದೆ. ಹಾಗೆಯೇ ಈ ವಿಡಿಯೋಗಳ ವೈರಲ್ ಬಗ್ಗೆಯೂ ತನಿಖೆ ನಡೆಯಬೇಕಿದೆ. ಸರ್ವೋಚ್ಚ ನ್ಯಾಯಾಲಯವು ಸಮ್ಮತಿ ಲೈಂಗಿಕ ಕ್ರಿಯ ಅಪರಾಧವಲ್ಲವೆಂದಿದ್ದರೂ ನೂರಾರು ಮಹಿಳೆಯರ ತೇಜೋವಧೆ ಮಾಡಿರುವುದು, ಇದರಿಂದ ಹಲವಾರು ಕುಟುಂಬಗಳು ಸಮಾಜದ ಮುಂದೆ ತಲೆ ಎತ್ತದ ಪರಿಸ್ಥಿತಿ ಎದುರಾಗಿದ್ದು ಈ ಎಲ್ಲಾ ಬೆಳವಣಿಗೆ ಬಗ್ಗೆ ಸೂಕ್ತ ತನಿಖೆಯ ಅಗತ್ಯವಿದೆ.