ಉತ್ತರ ಪ್ರದೇಶದ ರಾಜಕೀಯದಲ್ಲಿ ಬಾರಿ ಬದಲಾವಣೆ ಸಾಧ್ಯತೆ: ಯೋಗೇಂದ್ರ ಯಾದವ್ ಭವಿಷ್ಯ

ರಾಷ್ಟ್ರೀಯ

ಹಿರಿಯ ರಾಜಕಾರಣಿ, ಸಾಮಾಜಿಕ ಕಾರ್ಯಕರ್ತ ಯೋಗೇಂದ್ರ ಯಾದವ್ ಅವರು ಲೋಕಸಭೆ ಚುನಾವಣೆಗಳ ಬಗ್ಗೆ ತಮ್ಮ ಗ್ರೌಂಡ್ ರಿಪೋರ್ಟ್‌ ನೀಡಿದ್ದು, 2024 ಲೋಕಸಭೆ ಚುನಾವಣೆಯು ಅಚ್ಚರಿಯ ಫಲಿತಾಂಶಕ್ಕೆ ಸಾಕ್ಷಿಯಾಗಲಿದೆ ಎಂದಿದ್ದಾರೆ. ಚುನಾವಣೆಗಳ ಸೂಕ್ಷ್ಮ ವಿಶ್ಲೇಷಣೆಗೆ ಹೆಸರುವಾಸಿಯಾದ ಯಾದವ್ ತಮ್ಮ ಅವಲೋಕನಗಳನ್ನು X ನಲ್ಲಿ ಹಂಚಿಕೊಂಡಿದ್ದಾರೆ. ಮೀರತ್‌ನಿಂದ ಬನಾರಸ್‌ವರೆಗಿನ 15 ಸಂಸದೀಯ ಕ್ಷೇತ್ರಗಳಲ್ಲಿ ನೂರಾರು ಗ್ರಾಮೀಣ ಮತದಾರರೊಂದಿಗೆ ಮಾತನಾಡಿ ಅಭಿಪ್ರಾಯ ಸಂಗ್ರಹಿಸಿ ವಿಶ್ಲೇಷಣೆ ನಡೆಸಿದ್ದಾರೆ.

ಉತ್ತರ ಪ್ರದೇಶದ ಎಲ್ಲಾ ಜಾತಿಗಳಲ್ಲಿ ಬಿಜೆಪಿಯ ವರ್ಚಸ್ಸು ಗಮನಾರ್ಹವಾಗಿ ಕುಸಿದಿದೆ. ಈ ಹಿಂದೆ ನಿರೀಕ್ಷಿತ 70 ಸ್ಥಾನಗಳನ್ನು ಬಿಟ್ಟು ಬಿಜೆಪಿ 60 ಸ್ಥಾನಗಳನ್ನು ಉಳಿಸಿಕೊಳ್ಳುವುದು ಅಸಂಭವ ಎಂದು ಯಾದವ್ ಭವಿಷ್ಯ ನುಡಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಪಕ್ಷದ 50 ಸ್ಥಾನಗಳನ್ನು ಗೆಲ್ಲುವ ಕುರಿತೂ ಅನುಮಾನ ವ್ಯಕ್ತಪಡಿಸಿದ್ದಾರೆ. ಮೋದಿಯವರ ಬಗ್ಗೆ ಮತದಾರರಲ್ಲಿ ಉದಾಸೀನತೆಯ ಭಾವನೆ ಚಾಲ್ತಿಯಲ್ಲಿದೆ. ಈ ಬಾರಿ ಕೇವಲ ಮೋದಿ ಹೆಸರಿನಲ್ಲಿ ಮತಗಳು ಚಲಾವಣೆಯಾಗುವುದಿಲ್ಲ ಎಂದು ಯಾದವ್ ಅಭಿಪ್ರಾಯ ಪಟ್ಟಿದ್ದಾರೆ.

ಅಚ್ಚರಿಯೆಂದರೆ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮತದಾರರಲ್ಲಿ ಜನಪ್ರಿಯತೆಯಲ್ಲಿ ಪ್ರಧಾನಿ ಮೋದಿಯವರನ್ನು ಹಿಂದಿಕ್ಕಿದ್ದಾರೆ. ರಾಜ್ಯದಲ್ಲಿ ಗೂಂಡಾಗಿರಿಯನ್ನು ಹತ್ತಿಕ್ಕಲು ಯೋಗಿ ಪ್ರಶಂಸೆ ಪಡೆಯುತ್ತಿದ್ದಾರೆ. ಮತದಾರರಿಂದ ಗಮನಾರ್ಹ ಮೆಚ್ಚುಗೆಯನ್ನು ಗಳಿಸಿದ್ದಾರೆ ಎಂದು ಯಾದವ್ ತಿಳಿಸಿದ್ದಾರೆ. ಹಲವು ಬಿಜೆಪಿ ಸಂಸದರು ಮತ್ತು ಸ್ಥಳೀಯ ನಾಯಕರ ಬಗ್ಗೆ ಮತದಾರರಲ್ಲಿ ಸ್ಪಷ್ಟವಾದ ಅಸಮಾಧಾನವಿದೆ. ಈ ಅತೃಪ್ತಿಯು ಪಕ್ಷಕ್ಕೆ ಮಹತ್ವದ ಹಿನ್ನಡೆಯಾಗಿ ಪರಿಣಮಿಸಬಹುದು.

ಅನೇಕ ಮತದಾರರು ಬದಲಾವಣೆಯ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಬಿಜೆಪಿಯು ಮತ್ತೊಂದು ಅವಧಿಯನ್ನು ಭದ್ರಪಡಿಸಿದರೆ ಸರ್ವಾಧಿಕಾರದತ್ತ ವಾಲಬಹುದು ಎಂಬ ಭಾವನೆಯು ಮತದಾರರಲ್ಲಿ ರಾಜಕೀಯ ಪರ್ಯಾಯದತ್ತ ಮುಖ ಮಾಡಲು ಪ್ರಮುಖ ಕಾರಣವಾಗಿ ಮೂಡಿ ಬರುತ್ತಿದೆ. ಸರಿಸುಮಾರು ನಾಲ್ಕನೇ ಒಂದು ಭಾಗದಷ್ಟು ಬಿಜೆಪಿ ಮತದಾರರು ಮುಂಬರುವ ಚುನಾವಣೆಯಲ್ಲಿ ಪಕ್ಷವನ್ನು ಬೆಂಬಲಿಸಲು ಹಿಂಜರಿಯುತ್ತಿದ್ದಾರೆ ಎಂದು ಸೂಚಿಸಿದ್ದಾರೆ. ಎಸ್‌ಪಿ ಮತ್ತು ಕಾಂಗ್ರೆಸ್‌ನ ಮತ ಹಂಚಿಕೆಯು ಸ್ಥಿರವಾಗಿದ್ದರೂ, ಬಿಎಸ್‌ಪಿಯ ಬೆಂಬಲದಲ್ಲಿ ಸ್ವಲ್ಪ ಕುಸಿತವಿದೆ. ಅದು ಬಿಜೆಪಿಯತ್ತ ವಾಲುವ ಸಾಧ್ಯತೆ ಕಡಿಮೆ. ಬಿಜೆಪಿಯ ಹತ್ತನೇ ಒಂದು ಭಾಗದಷ್ಟು ಮತಗಳನ್ನು ಎಸ್‌ಪಿ-ಕಾಂಗ್ರೆಸ್ ಮೈತ್ರಿಯ ಕಡೆಗೆ ಸಾಧಾರಣವಾಗಿ ಬದಲಾಯಿಸಿದರೂ ಸಹ ಬಿಜೆಪಿಗೆ 20 ಸ್ಥಾನಗಳನ್ನು ಕಳೆದುಕೊಳ್ಳಬಹುದು ಎಂದು ಯಾದವ್ ಎಚ್ಚರಿಸಿದ್ದಾರೆ.