ಪತ್ರಿಕಾ ಸ್ವಾತಂತ್ರ್ಯದಲ್ಲಿ ಭಾರತ ಪಾಕ್ ಗಿಂತಲೂ ಹಿಂದಿದೆ.!

ರಾಷ್ಟ್ರೀಯ

ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯ ‘ರೆಡ್ ಜೋನ್’ ನಲ್ಲಿದೆ: ಆರ್ ಎಸ್ ಎಫ್

ಪತ್ರಿಕಾ ಸ್ವಾತಂತ್ರ್ಯ ಸಂಕಷ್ಟದಲ್ಲಿ ಭಾರತವು ವಿಶ್ವದ 180 ದೇಶಗಳ ಪೈಕಿ 159 ನೇ ಸ್ಥಾನ ಪಡೆದಿದ್ದು, ಪಾಕಿಸ್ತಾನಕ್ಕಿಂತಲೂ ಕಳಪೆಯಾಗಿ ಹೊರಹೊಮ್ಮಿದೆ. ಪ್ಯಾರಿಸ್ ಮೂಲದ “ರೀಪೋಟರ್ಸ್ ವಿಥೌಟ್ ಬಾರ್ಡರ್ಸ್(ಆರ್ ಎಸ್ ಎಫ್) ಸಂಸ್ಥೆ ಬಿಡುಗಡೆ ಮಾಡಿರುವ 2024 ನೇ ಸಾಲಿನ ‘ಜಾಗತಿಕ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಪಾಕಿಸ್ತಾನವು 152 ನೇ ಸ್ಥಾನ ಪಡೆಯುವ ಮೂಲಕ ಭಾರತಕ್ಕಿಂತಲೂ ಉತ್ತಮ ಸ್ಥಾನ ಗಳಿಸಿದೆ.

ಇದೇ ವರದಿಯಲ್ಲಿ ಭಾರತಕ್ಕೆ ಕಳೆದ ವರ್ಷ 161 ನೇ ಸ್ಥಾನ ಸಿಕ್ಕಿತ್ತು. ಉತ್ತಮ ಪತ್ರಿಕಾ ಸ್ವಾತಂತ್ರ್ಯ ಹೊಂದಿರುವ ದೇಶವಾಗಿ ನಾರ್ವೆ ಮೊದಲ ಸ್ಥಾನ ಪಡೆದಿದೆ. ಡೆನ್ಮಾರ್ಕ್ ಹಾಗೂ ಸ್ವೀಡನ್ ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನ ಪಡೆದಿದೆ.

ಪೂರ್ವ ಆಫ್ರಿಕಾದ ಎರಿಟ್ರಿಯಾ ದೇಶ 180 ನೇ ಸ್ಥಾನ ಪಡೆಯುವ ಮೂಲಕ ಪತ್ರಿಕಾ ಸ್ವಾತಂತ್ರ್ಯಕ್ಕೆ ಅತ್ಯಂತ ಕೆಟ್ಟ ವಾತಾವರಣ ಇರುವ ದೇಶ ಎಂಬ ಕುಖ್ಯಾತಿಗೆ ಗುರಿಯಾಗಿದೆ.

145 ರಿಂದ 180 ರವರೆಗಿನ ಸ್ಥಾನಗಳನ್ನು ಪಡೆದ ದೇಶಗಳನ್ನು ಪತ್ರಿಕಾ ಸ್ವಾತಂತ್ರ್ಯ ಕ್ಕೆ ‘ರೆಡ್ ಜೋನ್’ (ಅಪಾಯದ ವಲಯ) ಎಂದು ಸಂಸ್ಥೆಯು ಗುರುತಿಸಿದೆ. 1 ರಿಂದ 8 ಸ್ಥಾನಗಳನ್ನು ಪಡೆದ ದೇಶಗಳನ್ನು ‘ಗ್ರೀನ್ ಜೋನ್’ (ಮುಕ್ತ ಅಥವಾ ಉತ್ತಮ ವಲಯ) ಎಂದು ವಿಂಗಡಿಸಲಾಗಿದೆ.

ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಮಾಧ್ಯಮಗಳು, ರಾಜಕೀಯ ನಾಯಕರ, ರಾಜಕೀಯ ಪಕ್ಷಗಳ ನಿಯಂತ್ರಣದಲ್ಲಿದೆ. ಪತ್ರಿಕಾ ಸ್ವಾತಂತ್ರ್ಯ ತೀವ್ರ ಬಿಕ್ಕಟ್ಟಿನಲ್ಲಿದೆ ಎಂದು ವರದಿ ಹೇಳಿದೆ.