18 ವರ್ಷಗಳ ಬಳಿಕ ಫಾತಿಮಾರವರ ಕಣ್ಣೀರು ಅನಂದ ಬಾಷ್ಪವಾಗಿ ಮಾರ್ಪಟ್ಟಿದೆ
ಸೌದಿ ಅರೇಬಿಯಾದ ಜೈಲಿನಲ್ಲಿರುವ ಕೇರಳ ಮೂಲದ ಅಬ್ದುಲ್ ರಹೀಮ್ ಬಿಡುಗಡೆಗೆ ಮತ್ತೊಂದು ಸಂಕಟ ಎದುರಾಗಿದೆ. ಒಂದು ಕೋಟಿ 66 ಲಕ್ಷ ರೂಪಾಯಿಗಳನ್ನು ತಕ್ಷಣವೇ ಪಾವತಿಸಬೇಕು ಎಂದು ಅಬ್ದುಲ್ ರಹೀಂ ಪರ ವಕೀಲರ ಬೇಡಿಕೆ ಹೊಸ ಬಿಕ್ಕಟ್ಟನ್ನು ಸೃಷ್ಠಿಸಿದೆ. ರಹೀಂ ಪರ ವಕೀಲರ ಸಂಭಾವನೆ ಹಸ್ತಾಂತರಿಸಿದರೆ, ನ್ಯಾಯಾಲಯದಲ್ಲಿ ಮುಂದಿನ ವಿಚಾರಣೆಯನ್ನು ತೀವ್ರಗೊಳಿಸಬಹುದು ಎಂದು ರಿಯಾದ್‌ನಲ್ಲಿರುವ ಕಾನೂನು ನೆರವು ಸಮಿತಿ ಹೇಳಿದೆ.
ಅಬ್ದುಲ್ ರಹೀಮ್ ಬಿಡುಗಡೆಗಾಗಿ ದತ್ತಿಯಾಗಿ ನೀಡಿದ 34 ಕೋಟಿ ರೂಪಾಯಿಯನ್ನು ಸೌದಿ ಅರೇಬಿಯಾದಲ್ಲಿರುವ ಖಾತೆಗೆ ವರ್ಗಾಯಿಸುವ ಪ್ರಯತ್ನಗಳು ಪ್ರಗತಿಯಲ್ಲಿವೆ. ಇದೇ ವೇಳೆ ರಹೀಮ್ ಪರ ವಕೀಲರು ಕೂಡಲೇ ತಮ್ಮ ಸಂಭಾವನೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಈ ಮೊತ್ತ ಪಡೆಯದೇ ಬೇರೆ ಪ್ರಕ್ರಿಯೆಗೆ ಮುಂದಾಗುವುದಿಲ್ಲ ಎಂದು ರಹೀಂ ಪರ ವಕೀಲರು ತಿಳಿಸಿರುವುದು ಬಿಡುಗಡೆ ವಿಳಂಬವಾಗುವ ಆತಂಕಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ 34 ಕೋಟಿ ರೂಪಾಯಿಯಲ್ಲದೆ ವಕೀಲರ ಶುಲ್ಕವನ್ನೂ ಭಾರತದಿಂದ ಸೌದಿ ಅರೇಬಿಯಾಕ್ಕೆ ಕಳುಹಿಸಬೇಕು ಎಂದು ಜಿದ್ದಾದಲ್ಲಿರುವ ಕಾನೂನು ನೆರವು ಸಮಿತಿ ಆಗ್ರಹಿಸಿದೆ. ಒಂದು ವೇಳೆ ಸಂಭಾವನೆ ನೀಡಲು ವಿಫಲವಾದರೆ ರಹೀಮ್ ಬಿಡುಗಡೆ ವಿಳಂಬವಾಗಲಿದೆ ಎಂದು ಸಮಿತಿ ಗಮನಸೆಳೆದಿದೆ.
ರಾಜ್ಯಪಾಲರ ಸಮ್ಮುಖದಲ್ಲಿ ಅಬ್ದುರ್ ರಹೀಮ್ ಗೆ ಕ್ಷಮಾದಾನ ನೀಡುವ ಸಂಬಂಧ ಒಪ್ಪಂದಕ್ಕೆ ಫಿರ್ಯಾದಿ ಮತ್ತು ಪ್ರತಿವಾದಿಗಳು ಸಹಿ ಹಾಕಿದ ನಂತರ ಸಂಗ್ರಹಿಸಲಾದ ಮೊತ್ತವನ್ನು ಸಂತ್ರಸ್ತ ಕುಟುಂಬದವರಿಗೆ ಹಸ್ತಾಂತರಿಸಲಾಗುವುದು. ಈ ಒಪ್ಪಂದ ಶೀಘ್ರದಲ್ಲೇ ಜಾರಿಯಾಗುವ ನಿರೀಕ್ಷೆಯಿದೆ. ಮೊತ್ತವನ್ನು ಪಾವತಿಸಲು ಸಿದ್ಧರಿರುವುದಾಗಿ ಆರೋಪಿಯು ನ್ಯಾಯಾಲಯಕ್ಕೆ ತಿಳಿಸಿದ್ದು, ಫಿರ್ಯಾದಿ ಅದನ್ನು ಸ್ವೀಕರಿಸಲು ಮತ್ತು ಅಬ್ದುಲ್ ರಹೀಮ್‌ಗೆ ಕ್ಷಮಾದಾನ ನೀಡಲು ಸಿದ್ಧರಿದ್ದಾರೆ. ಈ ಎಲ್ಲ ಪ್ರಕ್ರಿಯೆಗಳನ್ನು ಆರಂಭಿಸುವ ಮುನ್ನ ರಹೀಂ ಪರ ವಕೀಲರ ಶುಲ್ಕ ಪಾವತಿಸಿದರೆ ಮಾತ್ರ ನ್ಯಾಯಾಲಯದ ಮುಂದಿನ ಕಾರ್ಯ ಸುಗಮವಾಗಿ ನಡೆಯುತ್ತದೆ ಎಂದು ರಹೀಂ ಪರ ವಕೀಲರು ಹೇಳಿರುವುದರೊಂದಿಗೆ ರಹೀಂ ಬಿಡುಗಡೆ ಇನ್ನೂ ವಿಳಂಬಗೊಳ್ಳುವ ಸಾಧ್ಯತೆ ಕಂಡುಬಂದಿದೆ. ಅದೇನೆ ಆದರೂ ರಹೀಮ್ ಈಗ ಸಾವಿನ ಕದ ತಟ್ಟಿ ಹೊರಬಂದಿದ್ದಾರೆ.. 18 ವರ್ಷಗಳ ಬಳಿಕ ಅಮ್ಮ ಫಾತಿಮಾರವರ ಕಣ್ಣೀರು ಆನಂದಬಾಷ್ಪವಾಗಿ ಮಾರ್ಪಟ್ಟಿದೆ.